PhonePe: ಫೋನ್ ಪೇ ಮುಖ್ಯ ಕಚೇರಿ ಬೆಂಗಳೂರಿಗೆ ವರ್ಗಾವಣೆ, ವಾಲ್ಮಾರ್ಟ್ಗೆ 8 ಸಾವಿರ ಕೋಟಿ ರೂ. ತೆರಿಗೆ; ಕಾರಣ ಇಲ್ಲಿದೆ
ಪೇಟಿಎಂ ಕಂಪನಿ ಕಳೆದ ವರ್ಷ ಷೇರುಪೇಟೆ ಅಡಿ ಇಟ್ಟು ಕೋಲಾಹಲ ಮೂಡಿಸಿದ ಸಂಗತಿ ನೆನಪಿರಬಹುದು. ಈಗ ಫೋನ್ ಪೇ ಇಡುತ್ತಿರುವ ಹೆಜ್ಜೆಗಳನ್ನು ಗಮನಿಸಿದರೆ ಅದೂ ಕೂಡ ಷೇರು ಪೇಟೆಗೆ ಅಡಿ ಇಡುವ ಇರಾದೆಯಲ್ಲಿರುವಂತಿದೆ. ಅದಕ್ಕಾಗಿಯೇ ಸಿಂಗಾಪುರದಿಂದ ಬೆಂಗಳೂರಿಗೆ ಫೋನ್ ಪೇ ಕಚೇರಿ ವರ್ಗವಾಗುತ್ತಿದೆ ಎಂಬಂತಹ ಮಾತು ಕೇಳಿಬರುತ್ತಿದೆ.
ಬೆಂಗಳೂರು: ಭಾರತದ ಪ್ರಮುಖ ಪೇಮೆಂಟ್ ಪ್ಲಾಟ್ಫಾರ್ಮ್ ಎನಿಸಿರುವ ಫೋನ್ ಪೇ (PhonePe) ಕಂಪನಿಯ ಮುಖ್ಯ ಕಚೇರಿ ಸಿಂಗಾಪುರದಿಂದ ಬೆಂಗಳೂರಿಗೆ (Bangalore) ವರ್ಗಾವಣೆ ಆಗುತ್ತಿದೆ. ಅದರ ಪರಿಣಾಮವಾಗಿ ಈಗ ವಾಲ್ಮಾರ್ಟ್ (Walmart), ಫ್ಲಿಪ್ ಕಾರ್ಟ್ ಇತ್ಯಾದಿ ಫೋನ್ ಪೇ ಷೇರುದಾರರಿಗೆ 1 ಬಿಲಿಯನ್ ಡಾಲರ್ (ಸುಮಾರು 8,200 ಕೋಟಿ ರೂ) ಮೊತ್ತದಷ್ಟು ತೆರಿಗೆ ಹೊರೆ ಬಿದ್ದಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಹೊಸ ದರದಲ್ಲಿ ಷೇರುಗಳನ್ನು ಮಾರುವ ಮೂಲಕ ಫೋನ್ ಪೇ 12 ಬಿಲಿಯನ್ ಡಾಲರ್ನಷ್ಟು ಹೂಡಿಕೆ ಸಂಗ್ರಹಿಸುತ್ತಿದೆ. ಜನರಲ್ ಅಟ್ಲಾಂಟಿಕ್, ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿ ಮತ್ತಿತರ ಕಂಪನಿಗಳು ಹೂಡಿಕೆ ಮಾಡುತ್ತಿವೆ. ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಸಂಸ್ಥೆ ಕೂಡ ಹೊಸ ದರದಲ್ಲಿ ಫೋನ್ ಪೇ ಷೇರುಗಳನ್ನು ಖರೀದಿಸಿದೆ. ಇಲ್ಲಿ ಫೋನ್ ಪೇ ಕಂಪನಿ ಹೂಡಿಕೆಗೆ ತೆರೆದುಕೊಳ್ಳುವ ಮುನ್ನ ಇದ್ದ ಬೆಲೆಯ ಆಧಾರದಲ್ಲಿ ಹೊಸ ದರ ನಿಗದಿ ಮಾಡಲಾಗಿದೆ. ಇದರಿಂದಾಗಿ ಫೋನ್ ಪೇ ಷೇರುದಾರರಿಗೆ ಅಂದಾಜು 8 ಸಾವಿರ ಕೋಟಿ ರೂ ತೆರಿಗೆ ಹೊರೆ ಬರಬಹುದು ಎಂದು ‘ಬ್ಲೂಂಬರ್ಗ್’ ಸುದ್ದಿ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.
ಫೋನ್ ಪೇ ಆರಂಭ
ಫೋನ್ ಪೇ 2015 ಡಿಸೆಂಬರ್ನಲ್ಲಿ ಭಾರತೀಯರಿಂದ ಆರಂಭಗೊಂಡ ಸ್ಟಾರ್ಟಪ್ ಕಂಪನಿ. 2016ರಲ್ಲಿ ಫ್ಲಿಪ್ ಕಾರ್ಟ್ ಸಂಸ್ಥೆ ಫೋನ್ ಪೇ ಅನ್ನು ಖರೀದಿಸಿತು. ಅದೇ ವರ್ಷದಲ್ಲಿ ಯುಪಿಐ ಪೇಮೆಂಟ್ ಪ್ಲಾಟ್ ಫಾರ್ಮ್ ಆಗಿ ಫೋನ್ ಪೇ ಹೊರಹೊಮ್ಮಿತು. ಫ್ಲಿಪ್ ಕಾರ್ಟ್ ಸಂಸ್ಥೆ ಅಮೆರಿಕದ ರೀಟೇಲ್ ದೈತ್ಯ ಸಂಸ್ಥೆ ವಾಲ್ಮಾರ್ಟ್ಗೆ ಮಾರಾಟವಾಯಿತು. ಈ ಮೂಲಕ ಫೋನ್ ಪೇ ವಾಲ್ಮಾರ್ಟ್ ಅಧೀನದಲ್ಲಿದೆ. ಕುತೂಹಲವೆಂದರೆ ಫೋನ್ ಪೇ ಭಾರತದಲ್ಲಿ ನಂಬರ್ ಒನ್ ಪೇಮೆಂಟ್ ಆಪ್ ಆಗಿದ್ದರೂ, ಭಾರತೀಯರಿಂದಲೇ ಸ್ಥಾಪಿತವಾಗಿದ್ದರೂ ಮುಖ್ಯ ಕಚೇರಿ ಸಿಂಗಾಪುರದಲ್ಲೇ ಇದೆ. ಇಂಥ ಅನೇಕ ಕಂಪನಿಗಳು ಸಿಂಗಾಪುರದಲ್ಲಿ ಮುಖ್ಯ ಕಚೇರಿಗಳನ್ನು ಹೊಂದಿರುವುದು ಕುತೂಹಲವೇ. ಅದಕ್ಕೆ ಕಾರಣಗಳೂ ಇವೆ. ಸಿಂಗಾಪುರದಲ್ಲಿ ಬಹಳ ಸರಳ ತೆರಿಗೆ ಪದ್ಧತಿ ಇದೆ. ಸಿಂಗಾಪುರದಲ್ಲಿ ಕಚೇರಿ ಇದ್ದರೆ ಹೂಡಿಕೆ ಆಕರ್ಷಿಸುವುದು ಸುಲಭ. ಹಾಗೆಯೇ ವಿದೇಶೀ ಷೇರುಪೇಟೆಗಳಿಗೆ ತೆರೆದುಕೊಳ್ಳುವುದೂ ಸುಲಭ. ಹೀಗಾಗಿ, ಬಹಳಷ್ಟು ಭಾರತೀಯರ ಕಂಪನಿಗಳು ಸಿಂಗಾಪುರದಲ್ಲಿ ನೊಂದಾಯಿತವಾಗಿರುತ್ತವೆ.
ಇದನ್ನೂ ಓದಿ: ಯುಪಿಐ ಮೂಲಕ ಎಟಿಎಂನಿಂದ ಹಣ ವಿತ್ಡ್ರಾ ಮಾಡುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ
ಒಂದು ಅಂದಾಜು ಪ್ರಕಾರ 2000ರಿಂದ ಈಚೆಗೆ 8 ಸಾವಿರಕ್ಕೂ ಹೆಚ್ಚು ಭಾರತೀಯ ಸ್ಟಾರ್ಟಪ್ ಕಂಪನಿಗಳು ಸಿಂಗಾಪುರದಲ್ಲಿ ಸ್ಥಾಪಿತವಾಗಿವೆ. ಇದರ ಹೊರತಾಗಿಯೂ ಭಾರತದಲ್ಲಿ ಬರೋಬ್ಬರಿ 26 ಸಾವಿರ ಸ್ಟಾರ್ಟಪ್ಗಳು ಇವೆ ಎನ್ನಲಾಗಿದೆ. ಸ್ಟಾರ್ಟಪ್ ಸಂಖ್ಯೆಯಲ್ಲಿ ವಿಶ್ವದಲ್ಲಿ ಭಾರತ ನಂಬರ್ 3 ಎನಿಸಿದೆ. ಈ ಪೈಕಿ ನೂರಕ್ಕೂ ಹೆಚ್ಚು ಸ್ಟಾರ್ಟಪ್ ಗಳು ಯೂನಿಕಾರ್ನ್ ಎನಿಸಿವೆ. ಕನಿಷ್ಠ 1 ಬಿಲಿಯನ್ ಡಾಲರ್ (8 ಸಾವಿರ ಕೋಟಿ ರೂ) ಮೌಲ್ಯ ಹೊಂದಿರುವ ಸ್ಟಾರ್ಟಪ್ ಗಳನ್ನು ಯೂನಿಕಾರ್ನ್ ಎಂದು ವರ್ಗೀಕರಿಸಲಾಗುತ್ತದೆ.
ಷೇರುಪೇಟೆಗೆ ಬರುತ್ತಾ ಫೋನ್ ಪೇ?
ಪೇಟಿಎಂ ಕಂಪನಿ ಕಳೆದ ವರ್ಷ ಷೇರುಪೇಟೆ ಅಡಿ ಇಟ್ಟು ಕೋಲಾಹಲ ಮೂಡಿಸಿದ ಸಂಗತಿ ನೆನಪಿರಬಹುದು. ಈಗ ಫೋನ್ ಪೇ ಇಡುತ್ತಿರುವ ಹೆಜ್ಜೆಗಳನ್ನು ಗಮನಿಸಿದರೆ ಅದೂ ಕೂಡ ಷೇರು ಪೇಟೆಗೆ ಅಡಿ ಇಡುವ ಇರಾದೆಯಲ್ಲಿರುವಂತಿದೆ. ಅದಕ್ಕಾಗಿಯೇ ಸಿಂಗಾಪುರದಿಂದ ಬೆಂಗಳೂರಿಗೆ ಫೋನ್ ಪೇ ಕಚೇರಿ ವರ್ಗವಾಗುತ್ತಿದೆ ಎಂಬಂತಹ ಮಾತು ಕೇಳಿಬರುತ್ತಿದೆ. ಫ್ಲಿಪ್ ಕಾರ್ಟ್ ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇದೆ. ಇದೇ ಕಾರಣಕ್ಕೆ ಫೋನ್ ಪೇ ಕೂಡ ಬೆಂಗಳೂರಿಗೆ ವರ್ಗವಾಗುತ್ತಿದೆ. ಆದರೆ, ಪೇಟಿಎಂಗೆ ಹೋಲಿಸಿದರೆ ಫೋನ್ ಪೇ ತೀರಾ ನಷ್ಟದಲ್ಲಿಲ್ಲ. ಒಂದು ವೇಳೆ ಫೋನ್ ಪೇ ಭಾರತೀಯ ಷೇರುಪೇಟೆಗೆ ಐಪಿಒಗೆ ತೆರೆದುಕೊಂಡರೆ ನಿರೀಕ್ಷಿತ ಬಂಡವಾಳ ಸಿಗುತ್ತಾ ಎಂಬುದು ಯಕ್ಷ ಪ್ರಶ್ನೆ. ಪೇಟಿಎಂ ಮೇಲೆ ಮುಗಿಬಿದ್ದು ಹಣ ಹಾಕಿದ ಹೂಡಿಕೆದಾರರು ಈಗ ಭಾರೀ ನಷ್ಟಕ್ಕೊಳಗಾಗಿ ಕೈಸುಟ್ಟುಕೊಂಡಿದ್ದಾರೆ. ಈ ಗಾಯದ ನೋವಿನಲ್ಲಿರುವ ಹೂಡಿಕೆದಾರರು ಫೋನ್ ಪೇ ಮೆಲೆ ಎಷ್ಟು ನಂಬಿಕೆ ಇಡಬಹುದು ಎಂಬುದಕ್ಕೆ ಕಾಲವೇ ಉತ್ತರಿಸಬೇಕು.