Dream 11: ಎಚ್ಚರ, ರಜೆಯಲ್ಲಿರುವ ಸಹೋದ್ಯೋಗಿಗೆ ತೊಂದರೆ ಕೊಟ್ಟರೆ 1 ಲಕ್ಷ ರೂ. ದಂಡ; ಭಾರತದ ಟೆಕ್ ಕಂಪನಿಯಲ್ಲಿ ಹೀಗೊಂದು ನಿಯಮ!
ಉದ್ಯೋಗಿಗಳ ರಜೆಯನ್ನು, ಖಾಸಗಿತನವನ್ನು ಗೌರವಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಕಂಪನಿ ಹೇಳಿದೆ. ಹಿಗಾಗಿ, ಈ ಕಂಪನಿಯ ಉದ್ಯೋಗಿಗಳಿನ್ನು ರಜೆಯಲ್ಲಿರುವ ಸಹೋದ್ಯೋಗಿಗಳಿಗೆ ಕರೆ ಮಾಡಿ ಉದ್ಯೋಗದ ಬಗ್ಗೆ ಚರ್ಚಿಸುವುದನ್ನು ಮಾಡುವಂತಿಲ್ಲ.
ಜನರು ಉದ್ಯೋಗವನ್ನು ಎಷ್ಟೇ ಇಷ್ಟಪಟ್ಟರೂ ರಜಾ ದಿನಗಳಲ್ಲಿ ಕೆಲಸದ ಒತ್ತಡ ಇಲ್ಲದೆ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದನ್ನು ಇಚ್ಛಿಸುವುದು ಸಹಜ. ಆದರೂ ರಜೆಯಲ್ಲಿದ್ದಾಗ (Holiday) ಕಚೇರಿಯ ಸಂದೇಶಗಳಿಗೆ ಪ್ರತಿಕ್ರಿಯಿಸಬೇಕಾದ, ಕರೆಗಳಿಗೆ ಉತ್ತರಿಸಬೇಕಾದ ಅನಿವಾರ್ಯತೆಗೆ ಹಲವು ಬಾರಿ ಸಿಲುಕಿಕೊಳ್ಳಬೇಕಾಗುತ್ತದೆ. ದೇಶದ ಪ್ರಮುಖ ಟೆಕ್, ಫಾಂಟಸಿ ಸ್ಪೋರ್ಟ್ಸ್ ಕಂಪನಿ ‘ಡ್ರೀಮ್ ಇಲೆವೆನ್ (Dream 11)’ ಉದ್ಯೋಗಿಗಳು ಇನ್ನು ಹೀಗೆ ಮಾಡುವಂತಿಲ್ಲ. ಮಾಡಿದರೆ 1 ಲಕ್ಷ ರೂ. ದಂಡ ತೆರಬೇಕಾಗುತ್ತದೆ! ಹೌದು, ಹೀಗೊಂದು ನಿಯಮವನ್ನು ಕಂಪನಿ ಅನುಷ್ಠಾನಕ್ಕೆ ತರುತ್ತಿದೆ. ಉದ್ಯೋಗಿಗಳ ರಜೆಯನ್ನು, ಖಾಸಗಿತನವನ್ನು ಗೌರವಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಕಂಪನಿ ಹೇಳಿದೆ. ಹಿಗಾಗಿ, ಈ ಕಂಪನಿಯ ಉದ್ಯೋಗಿಗಳಿನ್ನು ರಜೆಯಲ್ಲಿರುವ ಸಹೋದ್ಯೋಗಿಗಳಿಗೆ ಕರೆ ಮಾಡಿ ಉದ್ಯೋಗದ ಬಗ್ಗೆ ಚರ್ಚಿಸುವುದನ್ನು ಮಾಡುವಂತಿಲ್ಲ. ಉದ್ಯೊಗ ಸಂಬಂಧಿ ಇ-ಮೇಲ್ ಸಂದೇಶ, ಇತರ ಸಂದೇಶಗಳಿಗೆ ಉತ್ತರಿಸಿ ಎಂದು ಹೇಳುವಂತೆಯೂ ಇಲ್ಲ.
ಕಂಪನಿಯ ಸಂಪರ್ಕವೇ ಇಲ್ಲದೆ ವಾರ ಕಳೆಯಬಹುದು
ಉದ್ಯೋಗಿಗಳು ರಜೆಯ ಸಂದರ್ಭದಲ್ಲಿ ಕಚೇರಿಯ ಇ-ಮೇಲ್, ಇತರ ಸಂದೇಶಗಳು, ಕರೆ ಸೇರಿದಂತೆ ಎಲ್ಲ ಕೆಲಸಗಳಿಂದ ಮುಕ್ತರಾಗಿರಲಿ ಎಂಬ ಉದ್ದೇಶದೊಂದಿಗೆ ಈ ನಿಯಮ ರೂಪಿಸಲಾಗಿದೆ ಎಂದು ‘ಡ್ರೀಮ್ ಇಲೆವೆನ್’ ತಿಳಿಸಿರುವುದಾಗಿ ‘ಇಂಡಿಯಾ ಟುಡೇ’ ವರದಿ ಮಾಡಿದೆ. ಉದ್ಯೋಗಿಗಳು ಕೆಲಸಕ್ಕೆ ಸಂಬಂಧಿಸಿದ ಇಮೇಲ್‌ಗಳು, ಸಂದೇಶಗಳು, ಕರೆಗಳು ಮತ್ತು ಅವರ ಸಹೋದ್ಯೋಗಿಗಳಿಂದ ಒಂದು ವಾರದವರೆಗೆ ಸಂಪರ್ಕರಹಿತರಾಗಿ ಇರಲು ಹೊಸ ‘ಅನ್ಪ್ಲಗ್ ನೀತಿ’ಯ ಅಡಿಯಲ್ಲಿ ಕಂಪನಿ ಅವಕಾಶ ಕಲ್ಪಿಸಿದೆ.
‘ಅನ್ಪ್ಲಗ್ ನೀತಿ’ಯ ಅಡಿಯಲ್ಲಿ ರಜೆ ಇರುವ ಉದ್ಯೋಗಿಯು ‘ಡ್ರೀಮ್ಸ್ಟರ್’ನಿಂದ ಲಾಗ್ ಆಫ್ ಆದ ನಂತರ ಯಾವುದೇ ರೀತಿಯಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ. ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಕೂಡ ಉದ್ಯೋಗ ಸಂಬಂಧಿತ ಸಂದೇಶಗಳಿಗೆ ಉತ್ತರಿಸುವ ಅಗತ್ಯವಿಲ್ಲ. ರಜೆ ಮುಗಿಸಿ ವಾಪಸ್ ಬರುವ ವರೆಗೆ ಯಾರನ್ನೂ ‘ಡ್ರೀಮ್ಸ್ಟರ್’ ವ್ಯವಸ್ಥೆಯ ಒಳಗೆ ಅನುಮತಿಸುವುದಿಲ್ಲ ಎಂದು ಕಂಪನಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: Bank Holidays in January 2023: ಜನವರಿ ತಿಂಗಳಲ್ಲಿ ಬ್ಯಾಂಕ್ಗಳಿಗೆ 11 ದಿನ ರಜೆ; ಇಲ್ಲಿದೆ ಪಟ್ಟಿ
ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವುದು, ರಜೆಯಲ್ಲಿ ವಿಶ್ರಾಂತಿ ಪಡೆಯುವ ಗುಣಮಟ್ಟದ ಸಮಯದ ಮೌಲ್ಯವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಇದರಿಂದ ಒಟ್ಟಾರೆ ಉತ್ಸಾಹ, ಜೀವನ ಗುಣಮಟ್ಟ ಸುಧಾರಿಸಲಿದೆ. ಉದ್ಯೋಗಕ್ಕೂ ಅನುಕೂಲವಾಗಲಿದೆ ಎಂದು ಕಂಪನಿ ಹೇಳಿದೆ.
‘ಅನ್ಪ್ಲಗ್’ ಸಮಯದಲ್ಲಿ (ರಜಾ ಸಮಯದಲ್ಲಿ) ಅಂಥ ಉದ್ಯೋಗಿಗೆ ಯಾರೇ ಕರೆ ಮಾಡಿ ಅಥವಾ ಇನ್ಯಾವುದೇ ರೂಪದಲ್ಲಿ ತೊಂದರೆ ಕೊಟ್ಟರೆ ಅಂಥವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಕಂಪನಿಯ ಸ್ಥಾಪಕರಾದ ಹರ್ಷ ಜೈನ್ ಮತ್ತು ಭವಿತ್ ಸೇಠ್ ಹೇಳಿರುವುದಾಗಿ ‘ಸಿಎನ್ಬಿಸಿ’ ವರದಿ ಮಾಡಿದೆ. ಉದ್ಯೋಗಿಗಳು ಕಂಪನಿಯ ಹೊಸ ನೀತಿಯಿಂದ ಬಹಳ ಸಂತಸಗೊಂಡಿದ್ದಾರೆ. ಈ ನಿಯಮದಿಂದಾಗಿ, ವಿರಾಮದ ಸಮಯದಲ್ಲಿ ಪುನಶ್ಚೇತನಗೊಳ್ಳಲು, ಹೊಸ ಉತ್ಸಾಹದಿಂದ ಮತ್ತೆ ಕೆಲಸಕ್ಕೆ ಹಾಜರಾಗಲು ಅನುಕೂಲವಾಗುತ್ತದೆ ಎಂದು ‘ಡ್ರೀಮ್ ಇಲೆವೆನ್’ ಉದ್ಯೋಗಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Sat, 31 December 22