NDTV: ಎನ್ಡಿಟಿವಿಯಲ್ಲಿ ಪ್ರಣಯ್ ರಾಯ್, ರಾಧಿಕಾ ರಾಯ್ ಆಡಳಿತ ಸಂಪೂರ್ಣ ಅಂತ್ಯ; ನಿರ್ದೇಶಕರ ಮಂಡಳಿಗೆ ರಾಜೀನಾಮೆ
ಅದಾನಿ ಎಂಟರ್ಪ್ರೈಸಸ್ ಸದ್ಯ ಅಂಗಸಂಸ್ಥೆ ಆರ್ಆರ್ಪಿಆರ್ ಹೋಲ್ಡಿಂಗ್ಸ್ ಮತ್ತು ವಿಶಪ್ರಧಾನ್ ಕಮರ್ಷಿಯಲ್ ಮೂಲಕ ಎನ್ಡಿಟಿವಿ ಒಡೆತನ ಹೊಂದಿದೆ. ರಾಯ್ ದಂಪತಿ ಬಳಿ ಶೇಕಡಾ 2.5ರ ಪಾಲು ಇರಲಿದೆ ಎಂದು ಷೇರುಪೇಟೆಯ ಪ್ರಕಟಣೆ ತಿಳಿಸಿದೆ.
ನವದೆಹಲಿ: ಎನ್ಡಿಟಿವಿಯಲ್ಲಿ (NDTV) ಅದರ ಸ್ಥಾಪಕರಾದ ಪ್ರಣಯ್ ರಾಯ್ (Prannoy Roy) ಮತ್ತು ರಾಧಿಕಾ ರಾಯ್ ಅವರ ಆಡಳಿತ ಸಂಪೂರ್ಣ ಅಂತ್ಯಗೊಂಡಿದೆ. ಸಂಸ್ಥೆಯ ಶೇಕಡಾ 64.71ರಷ್ಟು ಷೇರುಗಳು ಉದ್ಯಮಿ ಗೌತಮ್ ಅದಾನಿ ಪಾಲಾದ ಬೆನ್ನಲ್ಲೇ ಇಬ್ಬರೂ ಸಹ ನಿರ್ದೇಶಕರ ಮಂಡಳಿಗೂ ರಾಜೀನಾಮೆ ನೀಡಿದ್ದಾರೆ. ರಾಯ್ ದಂಪತಿ ಜತೆಗೆ ಇತರ ನಾಲ್ವರು ಸ್ವತಂತ್ರ ನಿರ್ದೇಶಕರೂ ರಾಜೀನಾಮೆ ನೀಡಿದ್ದಾರೆ ಎಂದು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಎನ್ಡಿಟಿವಿ ತಿಳಿಸಿದೆ. ಶುಕ್ರವಾರವಷ್ಟೇ ಅದಾನಿ ಸಮೂಹವು ಎನ್ಡಿಟಿವಿ ಒಡೆತನವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅದಾನಿ ಎಂಟರ್ಪ್ರೈಸಸ್ ಸದ್ಯ ಅಂಗಸಂಸ್ಥೆ ಆರ್ಆರ್ಪಿಆರ್ ಹೋಲ್ಡಿಂಗ್ಸ್ ಮತ್ತು ವಿಶಪ್ರಧಾನ್ ಕಮರ್ಷಿಯಲ್ ಮೂಲಕ ಎನ್ಡಿಟಿವಿ ಒಡೆತನ ಹೊಂದಿದೆ. ರಾಯ್ ದಂಪತಿ ಬಳಿ ಶೇಕಡಾ 2.5ರ ಪಾಲು ಇರಲಿದೆ ಎಂದು ಷೇರುಪೇಟೆಯ ಪ್ರಕಟಣೆ ತಿಳಿಸಿದೆ.
‘ಕಂಪನಿಯಲ್ಲಿ ನಾನು ಹೊಂದಿರುವ ಪ್ರವರ್ತಕ ಸ್ಥಾನವನ್ನು ತೆರವುಗೊಳಿಸಿ ‘ಪಬ್ಲಿಕ್’ ಕೆಟಗರಿಯಲ್ಲಿ ಪರಿಗಣಿಸುವಂತೆ ವಿನಂತಿಸುತ್ತೇನೆ. ಸದ್ಯ ಶೇಕಡಾ 2.5ರಷ್ಟು ಷೇರುಗಳನ್ನು ಮಾತ್ರ ಹೊಂದಿದ್ದೇನೆ. ನಾನೀಗ ಮ್ಯಾನೇಜ್ಮೆಂಟ್ ವ್ಯವಹಾರಗಳಲ್ಲಿ ಭಾಗಿಯಾಗುತ್ತಿಲ್ಲ. ನಿರ್ದೇಶಕರನ್ನು ನೇಮಕ ಮಾಡುವ ಅಥವಾ ಇತರ ಯಾವುದೇ ಅಧಿಕಾರವನ್ನು ಹೊಂದಿಲ್ಲ’ ಎಂದು ಪ್ರಣಯ್ ರಾಯ್ ಷೇರುಪೇಟೆಗೆ ತಿಳಿಸಿದ್ದಾರೆ.
ಇದನ್ನೂ ಓದಿ: NDTV: ಎನ್ಡಿಟಿವಿ ನಿರ್ದೇಶಕರ ಮಂಡಳಿಗೆ ಪ್ರಣಯ್ ರಾಯ್, ರಾಧಿಕಾ ರಾಯ್ ರಾಜೀನಾಮೆ
ಒಂದು ತಿಂಗಳ ಹಿಂದಷ್ಟೇ ಎನ್ಡಿಟಿವಿಯ ಆಡಳಿತ ಮಂಡಳಿಗೆ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಕಳೆದ ತಿಂಗಳಷ್ಟೇ ರಾಜೀನಾಮೆ ನೀಡಿದ್ದರು. ನವೆಂಬರ್ 29ರಂದು ಆರ್ಆರ್ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಎನ್ಡಿವಿಯ ಶೇಕಡಾ 29.18 ಪಾಲು ತನ್ನದಾಗಿಸಿಕೊಂಡಿತ್ತು. ನಂತರದ ಹಂತದಲ್ಲಿ ಉಳಿದ ಷೇರುಗಳನ್ನು ಖರೀದಿಸಿತ್ತು. ಆಗಸ್ಟ್ 23ರಂದು ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಎನ್ಡಿಟಿವಿಯ ಶೇಕಡಾ 29.18ರಷ್ಟು ಷೇರುಗಳನ್ನು ಖರೀದಿಸಿತ್ತು. ಇನ್ನೂ ಶೇಕಡಾ 26ರಷ್ಟು ಷೇರುಗಳ ಖರೀದಿಗೆ ಆಸಕ್ತಿ ಹೊಂದಿರುವುದಾಗಿ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಆಗಲೇ ತಿಳಿಸಿತ್ತು. ನವೆಂಬರ್ 26ರಂದು ಅದಾನಿ ಸಮೂಹ ಷೇರು ಖರೀದಿಗೆ ಬಹಿರಂಗ ಆಫರ್ ಘೋಷಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ