Canara Bank: 1,29,000 ಕೋಟಿ ಸಾಲ ವಸೂಲು ಮಾಡಲಾಗದ ಕೆನರಾ ಬ್ಯಾಂಕ್, ಸುಸ್ತಿದಾರರ ಹೆಸರು ಬಹಿರಂಗಪಡಿಸಲು ನಿರಾಕರಿಸಿದೆ
Big Defaulters: ಆದಾಗ್ಯೂ ಸಜಗ್ ನಾಗ್ರಿಕ್ ಮಂಚ್ ಎಂಬ ಎನ್‌ಜಿಒ ಸಂಸ್ಥೆಯ ಅಧ್ಯಕ್ಷರಾಗಿರುವ ಅರ್ಜಿದಾರ ವೆಲಂಕರ್ ಅವರು "ಸಾಮಾನ್ಯ ಸಾಲಗಾರರ ಹೆಸರನ್ನು ಪ್ರಕಟಿಸುವಾಗ ಈ ಗೌಪ್ಯತೆಯ ಷರತ್ತು ಏಕೆ ಅನ್ವಯಿಸುವುದಿಲ್ಲ?" ಎಂಬ ಮಾರ್ಮಿಕ ಪ್ರಶ್ನೆ ಎತ್ತಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸರ್ಕಾರಿ ವಲಯದ ಪ್ರತಿಷ್ಠಿತ ಕೆನರಾ ಬ್ಯಾಂಕ್ (Canara Bank) ಭಾರೀ ಭಾರೀ ಮೊತ್ತದ ಸಾಲು ಸಾಲು ಸುಸ್ತಿದಾರರಿಂದ (ಬಿಗ್ ಡಿಫಾಲ್ಟರ್) ಬರಬೇಕಿದ್ದ 1.29 ಲಕ್ಷ ಕೋಟಿ ರೂ ಕೆಟ್ಟ ಸಾಲಗಳಿಗೆ (written off bad loans) ಎಳ್ಳುನೀರು ಬಿಟ್ಟಿದೆ. ಜೊತೆಗೆ ಅವರ ಹೆಸರುಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಹ ನಿರಾಕರಿಸಿದೆ. ಕೆನರಾ ಬ್ಯಾಂಕ್ ಕಳೆದ 11 ವರ್ಷಗಳಲ್ಲಿ 1.29 ಲಕ್ಷ ಕೋಟಿ ಮೌಲ್ಯದ ಕೆಟ್ಟ ಸಾಲವನ್ನು ಮನ್ನಾ ಮಾಡಿದೆ ಎಂದು ಮಾಹಿತಿ ಹಕ್ಕು ಕಾಯಿದೆಯಡಿ (ಆರ್‌ಟಿಐ) ಪ್ರಕ್ರಿಯೆಯಲ್ಲಿ ಬಹಿರಂಗಪಡಿಸಿದೆ. ಸೋಜಿಗದ ಸಂಗತಿಯೆಂದರೆ ಆರ್‌ಟಿಐ ಕಾಯ್ದೆಯಡಿ ಕೇಳಿದ ಮಾಹಿತಿಗೆ (RTI query) ಅನುಗುಣವಾಗಿ ದೊಡ್ಡ ಸುಸ್ತಿದಾರರ ಹೆಸರನ್ನು ಬಹಿರಂಗಪಡಿಸಲು ದೇಶದ ನಾಲ್ಕನೆಯ ಅತಿ ದೊಡ್ಡ ಸರಕಾರಿ ಬ್ಯಾಂಕ್ ಎನಿಸಿರುವ ಕೆನರಾ ಬ್ಯಾಂಕ್ ನಿರಾಕರಿಸಿದೆ.
ಕಳೆದ 11 ವರ್ಷಗಳಲ್ಲಿ 1.29 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕೆಟ್ಟ ಸಾಲಗಳನ್ನು ವಜಾ ಮಾಡಿದೆ ಎಂದು ಆರ್‌ಟಿಐ ಪ್ರಶ್ನೆಗೆ ಕೆನರಾ ಬ್ಯಾಂಕ್ ಕ್ಲುಪ್ತವಾಗಿ ಪ್ರತಿಕ್ರಿಯಿಸಿ, ಸುಮ್ಮನಾಗಿದೆ. RTI ಕಾಯಿದೆಯ ಸೆಕ್ಷನ್ 8(1)(1) ಪ್ರಕಾರ Section 8(1)(j) of the RTI Act, ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಸಾರ್ವಜನಿಕ ಆಸಕ್ತಿಗೆ ನೇರವಾಗಿ ಸಂಬಂಧಿಸದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ತಡೆಯುತ್ತದೆ.
“ಮಾಹಿತಿಯು ಸಾಲಗಾರರ ವೈಯಕ್ತಿಕ ಮಾಹಿತಿಯಾಗಿದೆ ಮತ್ತು ಅದನ್ನು ಬಹಿರಂಗಪಡಿಸುವುದರಿಂದ ಸಂಬಂಧಪಟ್ಟವರ ಗೌಪ್ಯತೆಯ ಮೇಲೆ ಅನಗತ್ಯ ಆಕ್ರಮಣವನ್ನು ಉಂಟುಮಾಡುತ್ತದೆ. ಹಾಗಾಗಿ ಇಂತಹ ಪ್ರಮೇಯ ಉದ್ಭವಿಸುವುದು ಬೇಡವೆಂದು ಇದರಿಂದ ವಿನಾಯಿತಿ ನೀಡಲಾಗಿದೆ ಎಂದು ಪುಣೆ ಮೂಲದ ಆರ್‌ಟಿಐ ಕಾರ್ಯಕರ್ತ ವಿವೇಕ್ ವೆಲಂಕರ್ ಅವರು ಕಳುಹಿಸಿದ ಅರ್ಜಿಗೆ ನೀಡಿದ ಉತ್ತರದಲ್ಲಿ ಬ್ಯಾಂಕ್ ಹೇಳಿದೆ. ಆರ್‌ಟಿಐ ಉತ್ತರದ ಪ್ರಕಾರ, ಕೆನರಾ ಬ್ಯಾಂಕ್ FY11-12 ರಿಂದ FY 21-22 ಅವಧಿಯಲ್ಲಿ ಒಟ್ಟು 1,29,088 ಕೋಟಿ ಕೆಟ್ಟ ಸಾಲಗಳನ್ನು ಮನ್ನಾ ಮಾಡಿದೆ.
100 ಕೋಟಿ ರೂ.ಗಿಂತ ಹೆಚ್ಚಿನ ಸಾಲ ಹೊಂದಿರುವ ದೊಡ್ಡ ಡಿಫಾಲ್ಟರ್‌ಗಳಿಗೆ ಸಂಬಂಧಿಸಿದ ವಿವರಗಳ ಕುರಿತು ಆರ್‌ಟಿಐ ಅರ್ಜಿದಾರರು ಕೋರಿರುವ ರೀತಿಯಲ್ಲಿ ಮಾಹಿತಿಯನ್ನು ನಿರ್ವಹಿಸಲಾಗಿಲ್ಲ ಎಂದು ಬ್ಯಾಂಕ್ ಹೇಳಿದೆ. ಆದಾಗ್ಯೂ ಸಜಗ್ ನಾಗ್ರಿಕ್ ಮಂಚ್ ಎಂಬ ಎನ್‌ಜಿಒ ಸಂಸ್ಥೆಯ ಅಧ್ಯಕ್ಷರಾಗಿರುವ ಅರ್ಜಿದಾರ ವೆಲಂಕರ್ ಅವರು “ಸಾಮಾನ್ಯ ಸಾಲಗಾರರ ಹೆಸರನ್ನು ಪ್ರಕಟಿಸುವಾಗ ಈ ಗೌಪ್ಯತೆಯ ಷರತ್ತು ಏಕೆ ಅನ್ವಯಿಸುವುದಿಲ್ಲ?” ಎಂಬ ಮಾರ್ಮಿಕ ಪ್ರಶ್ನೆ ಕೇಳಿದ್ದಾರೆ.
ಸಾರ್ವಜನಿಕರಿಂದ ಮಾಹಿತಿಯನ್ನು ಮರೆಮಾಡಲು ಅಧಿಕಾರಿಗಳು ಸಾಮಾನ್ಯವಾಗಿ ಆರ್‌ಟಿಐ ಕಾಯ್ದೆಯ ಈ ಷರತ್ತನ್ನು ನೆಪವಾಗಿ ಬಳಸುತ್ತಾರೆ ಎಂದು ಆರ್‌ಟಿಐ ಕಾರ್ಯಕರ್ತ ಅಸಮಾಧಾನ ವ್ಯಕ್ತಪಡಿಸಿರುವುದಾಗಿ nationalheraldindia.com ವರದಿ ಮಾಡಿದೆ.
ಎರಡು ವರ್ಷಗಳ ಹಿಂದೆ ಕೆನರಾ ಬ್ಯಾಂಕ್ ತನ್ನ ಬಾಬತ್ತಿನಲ್ಲಿರುವ ಕೆಟ್ಟ ಸಾಲದ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿತ್ತು. ಆಗ ಬ್ಯಾಂಕ್ ತನ್ನ ವಾರ್ಷಿಕ ವರದಿಗಳನ್ನು ಪರಿಶೀಲಿಸುವಂತೆಯೂ ಸೂಚಿಸಿತ್ತು ಎಂದು ವೇಲಂಕರ್ ಅವರು ನೆನಪಿಸಿಕೊಂಡಿದ್ದಾರೆ.
ಕೆನರಾ ಬ್ಯಾಂಕ್ ಅನ್ನು – 1906 ರಲ್ಲಿ ಮಂಗಳೂರಿನಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಸ್ಥಾಪಿಸಿದರು, ತದನಂತರ, 1969 ರಲ್ಲಿ ಅದನ್ನು ರಾಷ್ಟ್ರೀಕರಣಗೊಳಿಸಲಾಯಿತು. 2020 ರಲ್ಲಿ, ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಯಿತು.