ಖಾದ್ಯ ತೈಲ ಬೆಲೆ ಏರಿಕೆ ಆದ ಹಿನ್ನೆಲೆಯಲ್ಲಿ ಸರ್ಕಾರದಿಂದ ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಸೀಮಾ ಸುಂಕ ಇಳಿಕೆ ಮಾಡಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಇಷ್ಟು ಕಾಲ ಶೇ 10ರಷ್ಟು ಇದ್ದ ಕಚ್ಚಾ ತಾಳೆ ಎಣ್ಣೆ ಮೇಲಿನ ಮೂಲ ಆಮದು ತೆರಿಗೆಯು ಶೇ 2.5ಕ್ಕೆ ಇಳಿಕೆ ಆಗಿದೆ. ಕಚ್ಚಾ ಸೋಯಾ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಶೇ 7.5ರಿಂದ ಶೇ 2.5ಕ್ಕೆ ಇಳಿಕೆ ಮಾಡಲಾಗಿದೆ ಎಂದು ಶುಕ್ರವಾರ ತಡವಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಶನಿವಾರದಿಂದ ಇದು ಜಾರಿಗೆ ಬಂದಿದೆ. ಈ ಇಳಿಕೆಯೊಂದಿಗೆ ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಪರಿಣಾಮಕಾರಿ ಸುಂಕವು ಶೇ 24.75ಕ್ಕೆ ಇಳಿದಿದೆ. ಈ ಹಿಂದೆ ಇದು ಶೇ 35.75 ಇತ್ತು ಎಂದು ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (SEA) ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ.ಮೆಹ್ತಾ ಅವರು ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
ಈಗಿನ ಹೊಸ ದರ ಕಡಿತವು ರೀಟೇಲ್ ದರವನ್ನು ಲೀಟರ್ಗೆ 4ರಿಂದ 5 ರೂಪಾಯಿ ಕಡಿಮೆ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಆಗುವುದು ಕಷ್ಟ. ಭಾರತವು ಆಮದು ಸುಂಕದಲ್ಲಿ ಇಳಿಕೆ ಆಗಿರುವುದರಿಂದ ಲೀಟರ್ಗೆ 2ರಿಂದ 3 ರೂಪಾಯಿ ಬೆಲೆ ಇಳಿದಿದೆ. ಸರ್ಕಾರವು ಸಾಸಿವೆ ಎಣ್ಣೆ ಮೇಲಿನ ಆಮದು ಸುಂಕವನ್ನೂ ಇಳಿಸಬೇಕಿತ್ತು. ಆಗ ಅದರ ಬೆಲೆ ಕೂಡ ಕಡಿಮೆ ಆಗುತ್ತಿತ್ತು ಎಂದು ಸೇರಿಸಲಾಗಿದೆ. ಕಳೆದ ಕೆಲವು ತಿಂಗಳಿಂದ ಕೇಂದ್ರದಿಂದ ವಿವಿಧ ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ ಮಾಡುವ ಉದ್ದೇಶಕ್ಕೆ ಆಮದು ಸುಂಕವನ್ನು ಕಡಿಮೆ ಮಾಡಲಾಗಿದೆ. ಜತೆಗೆ ಖಾದ್ಯ ತೈಲಗಳು, ಎಣ್ಣೆಬೀಜಗಳ ದಾಸ್ತಾನಿನ ಬಗ್ಗೆ ಸಗಟು ಮಾರಾಟಗಾರರು, ಮಿಲ್ಲರ್ಗಳು, ರಿಫೈನರ್ಗಳು ಮತ್ತು ಸ್ಟಾಕಿಸ್ಟ್ಗಳಿಂದ ಮಾಹಿತಿ ಕಲೆ ಹಾಕುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ. 11,040 ಕೋಟಿ ರೂಪಾಯಿ ತಾಳೆ ಎಣ್ಣೆ ಮಿಷನ್ ಕೂಡ ಘೋಷಣೆ ಮಾಡಲಾಗಿದೆ.
ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿ (CBIC) ಕಳೆದ ತಿಂಗಳು ಕಚ್ಚಾ ಸೋಯಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮೇಲೆ ಮೂಲ ಸೀಮಾ ಸುಂಕವನ್ನು ಅರ್ಧಕ್ಕೆ ಇಳಿಸಿ, ಶೇ 7.5ಕ್ಕೆ ತಂದಿತ್ತು. ಪೂರೈಕೆಗೆ ಉತ್ತೇಜನ ನೀಡುವುದಕ್ಕೆ ಹೀಗೆ ಮಾಡಲಾಗಿತ್ತು. ಕಚ್ಚಾ ತೈಲ ಮತ್ತು ಚಿನ್ನದ ನಂತರ ಭಾರತಕ್ಕೆ ಆಮದಾಗುವ ಮೂರನೇ ಪದಾರ್ಥ ಅಂದರೆ ಅದು ಖಾದ್ಯ ತೈಲ.
ಇದನ್ನೂ ಓದಿ: Edible Oil: ಭಾರತದ ಖಾದ್ಯ ತೈಲ ಆಮದು 6 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆ
(Central Government Cuts Excise Duty To Ease Retail Price Of Edible Oil)
Published On - 7:51 pm, Sat, 11 September 21