ನವದೆಹಲಿ, ಅಕ್ಟೋಬರ್ 22: ನಗರದ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೆಗಾಬಸ್ ಮಿಷನ್ ಚಾಲನೆಗೊಳಿಸುತ್ತಿದೆ. ಭಾರತ್ ಅರ್ಬನ್ ಮೆಗಾಬಸ್ ಮಿಷನ್ ಐದು ವರ್ಷದ ಯೋಜನೆಯಾಗಿದ್ದು, ನಗರ ಭಾಗದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸೇವೆಯನ್ನು ಪರಿಚಯಿಸಲಿದೆ. 1.75 ಲಕ್ಷ ಕೋಟಿ ರೂ ಮೊತ್ತದ ಈ ಮಿಷನ್ನಲ್ಲಿ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಓಡಾಟ ಆಗಲಿದೆ. ಐದು ವರ್ಷದಲ್ಲಿ ಈ ನಗರಗಳಲ್ಲಿ ಒಂದು ಲಕ್ಷ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸುವ ಗುರಿ ಇಡಲಾಗಿದೆ. ಬಸ್ಸಿನ ಜೊತೆಗೆ ಅದಕ್ಕೆ ಸಂಬಂಧಿಸಿದ ಸೌಕರ್ಯ ವ್ಯವಸ್ಥೆಯಾದ ಬಸ್ ನಿಲ್ದಾಣ, ಟರ್ಮಿನಲ್, ಡಿಪೋ ಇತ್ಯಾದಿಯನ್ನೂ ನಿರ್ಮಿಸುವ ಉದ್ದೇಶ ಇದೆ.
2025ರಲ್ಲಿ ಜಾರಿಯಾಗಲಿರುವ ಅರ್ಬನ್ ಮೊಬಿಲಿಟಿ ಮಿಷನ್ನಲ್ಲಿ ಎಲೆಕ್ಟ್ರಿಕ್ ಬಸ್ ಮಾತ್ರವಲ್ಲ, ಇನ್ನೂ ಹಲವು ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಅದರಲ್ಲಿ 5,000 ಕಿಮೀನಷ್ಟು ಪಾದಚಾರಿ ಮಾರ್ಗ ಮತ್ತು ಸೈಕ್ಲಿಂಗ್ ಸ್ನೇಹಿ ಬೀದಿಗಳನ್ನು ನಿರ್ಮಿಸುವ ಯೋಜನೆಯೂ ಇದೆ. 2025ರಲ್ಲಿ ಆರಂಭವಾಗಿ 2030ರವರೆಗೂ ಈ ಯೋಜನೆ ಚಾಲನೆಯಲ್ಲಿ ಇರಲಿದೆ.
ಇದನ್ನೂ ಓದಿ: ಎಂಟು ವರ್ಷದಲ್ಲಿ ಆರು ಲಕ್ಷಕ್ಕೂ ಹೆಚ್ಚು ಗ್ರಾಮಗಳ ಭೂದಾಖಲೆಗಳ ಡಿಜಿಟೀಕರಣವಾಗಿದೆ: ಗ್ರಾಮೀಣಾಭಿವೃದ್ಧಿ ಸಚಿವ
ನಗರಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವುದು; ಜನರು ಖಾಸಗಿ ವಾಹನ ಬದಲು ಸಾರ್ವಜನಿಕ ವಾಹನಗಳನ್ನು ಬಳಸುವುದು; ಸೈಕಲ್ ಬಳಕೆ ಉತ್ತೇಜಿಸುವುದು ಇವೇ ಮುಂತಾದ ಉದ್ದೇಶದಿಂದ ಸರ್ಕಾರವು ಅರ್ಬನಲ್ ಮೊಬಿಲಿಟಿ ಮಿಷನ್ ಆರಂಭಿಸುತ್ತಿದೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು 2030ರೊಳಗೆ ಶೇ. 60ರಷ್ಟಾದರೂ ಆಗಬೇಕು. 2036ರೊಳಗೆ ಈ ಪಾಲು ಶೇ. 80ಕ್ಕೆ ಹೆಚ್ಚಬೇಕು ಎಂಬ ಗುರಿ ಇದೆ. ಹಾಗೆಯೇ, 2030ರೊಳಗೆ ನಗರದ ಎಲ್ಲಾ ಸಂಚಾರದಲ್ಲಿ ಸೈಕ್ಲಿಂಗ್ ಮತ್ತು ವಾಕಿಂಗ್ ಇತ್ಯಾದಿ ಸಂಚಾರದ ಪಾಲು ಶೇ. 50ರಷ್ಟಾಗಬೇಕು ಎನ್ನುವ ಉದ್ದೇಶವು ಈ ಮಿಷನ್ನ ಹಿಂದಿದೆ.
ಇದನ್ನೂ ಓದಿ: ದೇಶಾದ್ಯಂತ ಜನೌಷಧ ಕೇಂದ್ರಗಳಲ್ಲಿ ಆದ ಒಟ್ಟು ಬಿಸಿನೆಸ್ ಈ ವರ್ಷ 1,000 ಕೋಟಿ ರೂಗಿಂತಲೂ ಹೆಚ್ಚು
ನಗರ ಭಾಗಗಳಲ್ಲಿ ಕೆಲಸಕ್ಕೆ ಹೋಗುವ ಜನರು ಬಸ್ ನಿಲ್ದಾಣದಲ್ಲಿ ಇಳಿದು ಆಟೋ ಮೂಲಕ ಕಚೇರಿಗೆ ಹೋಗುವುದೇ ಹೆಚ್ಚು. ಇದನ್ನು ತಪ್ಪಿಸಲು, ವಿವಿಧೆಡೆ ಪ್ರತ್ಯೇಕವಾದ ಸೈಕ್ಲಿಂಗ್ ಟ್ರ್ಯಾಕ್ಗಳನ್ನು ನಿರ್ಮಿಸಲಾಗುತ್ತದೆ. ಬಾಡಿಗೆಗೆ ಸೈಕಲ್ ಸಿಗುವ ವ್ಯವಸ್ಥೆ ನಿರ್ಮಿಸಲಾಗುತ್ತದೆ. ನಗರ ಭಾಗದ ಶೇ. 56ರಷ್ಟು ಪ್ರಯಾಣಗಳು 5 ಕಿಮೀಗಿಂತ ಕಡಿಮೆ ದೂರದ್ದಾಗಿವೆ. ಹೀಗಾಗಿ, ಹೆಚ್ಚಿನ ಜನರು ಸೈಕಲ್ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ