ಕರ್ನಾಟಕದಲ್ಲಿ 9 ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಿಸುವ ಎಚ್​ಡಿಕೆ ಪ್ರಸ್ತಾಪ ಪರಿಗಣಿಸಿದ ಕೇಂದ್ರ ಸರ್ಕಾರ

Piyush Goyal says yes for the proposed Industrial corridor development programme in Karnataka: ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು‌, ಬೀದರ್ ಜಿಲ್ಲೆಗಳನ್ನು ಒಳಗೊಂಡ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಒಲವು ತೋರಿದೆ. ಈ 9 ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್​ಗಳನ್ನು ಸ್ಥಾಪಿಸುವ ಈ ಕಾರಿಡಾರ್ ಯೋಜನೆಯನ್ನು ಎಚ್​ಡಿ ಕುಮಾರಸ್ವಾಮಿ ಪ್ರಸ್ತಾಪಿಸಿದ್ದರು. ಎರಡು ವಾರದ ಹಿಂದೆ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರನ್ನು ಭೇಟಿಯಾಗಿ ಈ ಕಾರಿಡಾರ್ ಯೋಜನೆಯ ಪ್ರಸ್ತಾಪ ಮಾಡಿದ್ದರು.

ಕರ್ನಾಟಕದಲ್ಲಿ 9 ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಿಸುವ ಎಚ್​ಡಿಕೆ ಪ್ರಸ್ತಾಪ ಪರಿಗಣಿಸಿದ ಕೇಂದ್ರ ಸರ್ಕಾರ
ಎಚ್ ಡಿ ಕುಮಾರಸ್ವಾಮಿ
Image Credit source: PTI

Updated on: Nov 26, 2025 | 3:36 PM

ನವದೆಹಲಿ, ನವೆಂಬರ್ 26: ಮಂಡ್ಯದಿಂದ ಹಿಡಿದು ಬೀದರ್​ವರೆಗೆ ಕರ್ನಾಟಕದ ಒಂಬತ್ತು ಜಿಲ್ಲೆಗಳನ್ನೊಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಗೆ (NICDP- National Industrial Corridor Development Programme) ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಎರಡು ವಾರಗಳ ಹಿಂದೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರನ್ನು ಭೇಟಿಯಾಗಿ ಈ ಯೋಜನೆಯ ಪ್ರಸ್ತಾಪ ಮಾಡಿ, ಅನುಷ್ಠಾನಕ್ಕೆ ಕೋರಿದ್ದರು. ಕರ್ನಾಟಕದ ಕೈಗಾರಿಕೆ ಮತ್ತು ಸಾಗಣೆ ಕ್ಷೇತ್ರಗಳಿಗೆ ಪುಷ್ಟಿ ನೀಡುವ ಈ ಯೋಜನೆಗೆ ವಾಣಿಜ್ಯ ಸಚಿವರು ಸಮ್ಮತಿ ಸೂಚಿಸಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನೊಳಗೊಂಡ ಬಹಳ ವಿಸ್ತೃತವಾದ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ ಇದಾಗಿದೆ. ನವೆಂಬರ್ 13ರಂದು ಕೈಗಾರಿಕಾ ಸಚಿವರಾದ ಹೆಚ್​ಡಿಕೆ ಅವರು ಪೀಯೂಶ್ ಗೋಯಲ್ ಅವರನ್ನು ಭೇಟಿಯಾಗಿ ಈ ಯೋಜನೆ ಬಗ್ಗೆ ಚರ್ಚಿಸಿ, ಜಾರಿಗೊಳಿಸಲು ನೆರವಾಗಬೇಕೆಂದು ಮನವಿ ಮಾಡಿದ್ದರು. ಈ ಕಾರಿಡಾರ್ ನಿರ್ಮಾಣದಿಂದ ರಾಜ್ಯದಾದ್ಯಂತ ಉದ್ಯಮ ವಲಯ ಬೆಳೆಯಲು ಮತ್ತು ಉದ್ಯೋಗಾವಕಾಶ ಹೆಚ್ಚಲು ಸಾಧ್ಯವಾಗುತ್ತದೆ ಎಂಬಿತ್ಯಾದಿ ಪ್ರಯೋಜನಗಳನ್ನು ಗೋಯಲ್ ಅವರಿಗೆ ಕುಮಾರಸ್ವಾಮಿ ಅಂದು ವಿವರಿಸಿದ್ದರು.

ಇದನ್ನೂ ಓದಿ: ಭಾರತದ ಜಿಡಿಪಿದರ ಈ ವರ್ಷದ ಮೊದಲಾರ್ಧದಲ್ಲಿ ಶೇ. 7.6; ಐಸಿಐಸಿಐ ವರದಿಯಲ್ಲಿ ನಿರೀಕ್ಷೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್​ಗಳನ್ನು ನಿರ್ಮಿಸಲು ಪೂರಕವಾಗುವಂತಹ ಹಲವು ಪೂರಕ ಸಂಪನ್ಮೂಲಗಳು, ಸಾಗಣೆ ವ್ಯವಸ್ಥೆ ಇತ್ಯಾದಿ ಅಂಶಗಳಿವೆ. ಈ ಜಿಲ್ಲೆಗಳಲ್ಲಿ ಬೃಹತ್ ಮಟ್ಟದಲ್ಲಿ ಕೈಗಾರಿಕಾ ಅಭಿವೃದ್ಧಿ ಸಾಧಿಸಲು ಅವಕಾಶ ಇದೆ. ಹಾಗೆಯೇ, ರಾಜ್ಯದಲ್ಲಿ ಸಮತೋಲಿತವಾದ ಪ್ರಾದೇಶಿಕ ಬೆಳವಣಿಗೆಯೂ ಆಗುತ್ತದೆ ಎಂದು ಕುಮಾರಸ್ವಾಮಿ ಅಂದು ವಾಣಿಜ್ಯ ಸಚಿವರಿಗೆ ಮನದಟ್ಟು ಮಾಡಿದ್ದರು.

ಕೈಗಾರಿಕಾ ಪಾರ್ಕ್​ಗಳನ್ನು ಸ್ಥಾಪಿಸಲು 9 ಜಿಲ್ಲೆಗಳನ್ನು ಪ್ರಸ್ತಾಪಿಸಿರುವ ಕುಮಾರಸ್ವಾಮಿ, ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯ ಚೌಕಟ್ಟಿನಡಿ ಪರಿಗಣಿಸಬೇಕು ಎಂದೂ ಕುಮಾರಸ್ವಾಮಿ ಕೋರಿಕೊಂಡಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆಗೆ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಮನವಿ

ಕುಮಾರಸ್ವಾಮಿ ಅವರ ಈ ಪ್ರಸ್ತಾವನೆಯನ್ನು ಸ್ವೀಕರಿಸಿದ್ದ ಪೀಯೂಶ್ ಗೋಯಲ್, ಕರ್ನಾಟಕದ ಅಭಿವೃದ್ದಿಗೆ ಇದು ಪರಿವರ್ತನಾತ್ಮಕ ಪರಿಕಲ್ಪನೆ ಎಂದು ಶ್ಲಾಘಿಸಿದ್ದರು. ರಾಜ್ಯದ ಪ್ರಾದೇಶೀಕ ಸಮತೋಲಿತ ಕೈಗಾರಿಕಾ ಅಭಿವೃದ್ಧಿಗೆ ಇದು ಪೂರಕವಾಗಿದೆ. ರಚನಾತ್ಮಕವಾದ ಕೇಂದ್ರದ ನೀತಿಗಳನ್ನು ಕಾರ್ಯರೂಪಕ್ಕೆ ತರಲು ಈ ಯೋಜನೆ ಪೂರಕವಾಗಿದೆ ಎಂದು ಕುಮಾರಸ್ವಾಮಿ ಅವರಿಗೆ ಪತ್ರದ ಮೂಲಕ ಗೋಯಲ್ ಉತ್ತರಿಸಿದ್ದಾರೆ. ಈ ಮೂಲಕ ರಾಜ್ಯದ 9 ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಿಸುವ ಆಶಯ ಈಡೇರುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ