ಕೆಲಸಕ್ಕೆ ಸೇರಿದ ಮೇಲೆ ಯಾರೂ ಮಾರ್ಕ್ಸ್ ಕೇಳಲ್ಲ ಕಣ್ರೀ… ಎಸ್​ಬಿಐ ನೂತನ ಮುಖ್ಯಸ್ಥರ ಕಿವಿಮಾತು ಕೇಳ್ರೀ

|

Updated on: Jul 02, 2024 | 6:11 PM

New SBI Chairman Challa Sreenivasulu Setty: ಚಲ್ಲ ಶ್ರೀನಿವಾಸುಲು ಶೆಟ್ಟಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಛೇರ್ಮನ್ ಆಗಿದ್ದಾರೆ. ಬಿಎಸ್​ಸಿ ಅಗ್ರಿಕಲ್ಚರ್ ಓದಿ ಪ್ರೊಬೇಶನರಿ ಆಫೀಸರ್ ಆಗಿ ಎಸ್​ಬಿಐನಲ್ಲಿ ಕೆಲಸಕ್ಕೆ ಸೇರಿದ ಅವರು ಈಗ ಮುಖ್ಯಸ್ಥ ಸ್ಥಾನಕ್ಕೆ ಏರಿರುವುದು ಗಮನಾರ್ಹ. ಶಿಕ್ಷಣ ಎನ್ನುವುದು ಕೆಲಸಕ್ಕೆ ಸೇರಲು ಇರುವ ಎಂಟ್ರಿ ಪಾಸ್. ಕೆಲಸಕ್ಕೆ ಸೇರಿದ ಮೇಲೆ ಯಾರೂ ಕೇಳಲ್ಲ ಎನ್ನುವ ವಾಸ್ತವ ವಿಚಾರವನ್ನು ಚಲ್ಲ ತಿಳಿಸುತ್ತಾರೆ.

ಕೆಲಸಕ್ಕೆ ಸೇರಿದ ಮೇಲೆ ಯಾರೂ ಮಾರ್ಕ್ಸ್ ಕೇಳಲ್ಲ ಕಣ್ರೀ... ಎಸ್​ಬಿಐ ನೂತನ ಮುಖ್ಯಸ್ಥರ ಕಿವಿಮಾತು ಕೇಳ್ರೀ
ಚಲ್ಲ ಶ್ರೀನಿವಾಸುಲು ಶೆಟ್ಟಿ
Follow us on

ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 27ನೇ ಛೇರ್ಮನ್ ಆಗಿ ಇತ್ತೀಚೆಗೆ ಚಲ್ಲ ಶ್ರೀನಿವಾಸುಲು ಶೆಟ್ಟಿ ನೇಮಕವಾಗಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ಎಸ್​ಬಿಐ ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ದಿನೇಶ್ ಕುಮಾರ್ ಖರ ಅವರ ಸ್ಥಾನವನ್ನು ಚಲ್ಲ ತುಂಬುತ್ತಿದ್ದಾರೆ. ಛೇರ್ಮನ್ ಸ್ಥಾನಕ್ಕೆ ಆಯ್ಕೆಯಾಗುವ ಮುನ್ನ ಅವರು ಅತ್ಯಂತ ಹಿರಿಯ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆ ಹೊಂದಿದ್ದರು. ಎಸ್​ಬಿಐನ ಇಂಟರ್ನ್ಯಾಷನಲ್ ಗ್ಲೋಬಲ್ ಮಾರ್ಕೆಟ್ಸ್ ಮತ್ತು ಟೆಕ್ನಾಲಜಿ ವಿಭಾಗಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಪ್ರೊಬೇಶನರಿ ಆಫೀಸರ್ ಆಗಿ ಎಸ್​ಬಿಐಗೆ ಕೆಲಸಕ್ಕೆ ಸೇರಿಕೊಂಡು ಚಲ್ಲ ಶ್ರೀನಿವಾಸುಲು ಶೆಟ್ಟಿ ಇವತ್ತು ಸಂಸ್ಥೆಯ ಮುಖ್ಯಸ್ಥ ಹುದ್ದೆಯವರೆಗೆ ಹಂತ ಹಂತವಾಗಿ ಏರಿರುವುದು ಯಾರಿಗಾದರೂ ಸ್ಫೂರ್ತಿ ತರುವ ವಿಷಯವೇ.

ಓದಿದ್ದು ಕೃಷಿ, ಕೆಲಸ ಮಾತ್ರ ಬ್ಯಾಂಕ್…

ಚಲ್ಲ ಶ್ರೀನಿವಾಸುಲು ಶೆಟ್ಟಿ ಅವರು ಬಿಎಸ್​ಸಿ ಅಗ್ರಿಕಲ್ಚರ್ ಓದಿದ್ದರು. ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್​ನಿಂದ ಅವರು ಸಿಎಐಐಬಿ ಸರ್ಟಿಫೈಡ್ ಕೋರ್ಸ್ ಮಾಡಿ, 1988ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೇಶನರಿ ಆಫೀಸರ್ ಹುದ್ದೆ ಪಡೆದರು. ಅಗ್ರಿಕಲ್ಚರ್ ಅಧಿಕಾರಿ ಆಗಬೇಕಾದವರು ಬ್ಯಾಂಕರ್ ಆಗಿದ್ದು ನಿಜಕ್ಕೂ ತಿರುವು.

ಇದನ್ನೂ ಓದಿ: 180 ಕೋಟಿ ರೂ ಸಾಲದ ಪ್ರಕರಣ: ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದ ಸಿಬಿಐ ಕೋರ್ಟ್

ನಿಮ್ಮ ಶಿಕ್ಷಣ ಎಂಟ್ರಿ ಪಾಸ್ ಮಾತ್ರ…

ಶಿಕ್ಷಣ ಎನ್ನುವುದು ಕೆಲಸಕ್ಕೆ ಸೇರಲು ಬೇಕಾದ ಪ್ರವೇಶ ಪತ್ರ ಮಾತ್ರ. ಅದಾದ ಮೇಲೆ ಯಾರೂ ಕೂಡ ನಿಮ್ಮ ಡಿಗ್ರಿ ಕೇಳೋದೇ ಇಲ್ಲ ಎಂದು ಚಲ್ಲ ಶ್ರೀನಿವಾಸುಲು ಶೆಟ್ಟಿ ಇತ್ತೀಚೆಗೆ ಐಐಟಿ ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದ ಮಾತು ಬಹಳ ಗಮನ ಸೆಳೆಯುತ್ತದೆ.

‘ನಾನು ಅಗ್ರಿಕಲ್ಚರ್​ನಲ್ಲಿ ಬಿಎಸ್​ಸಿ ಮಾಡಿದೆ. ಮೂರೂವರೆ ದಶಕದಲ್ಲಿ ಯಾರೂ ಕೂಡ ನಾನು ಏನು ಓದಿದೆ, ಎಷ್ಟು ಅಂಕ ಗಳಿಸಿದೆ ಎಂದು ಕೇಳಲೇ ಇಲ್ಲ… ಆದರೆ, ಶಿಕ್ಷಣ ಕಾಲಘಟ್ಟದಲ್ಲಿ ನಾನು ಪಡೆದ ಅಂಕಗಳು ಯಾವತ್ತೂ ನನಗೆ ಆತ್ಮವಿಶ್ವಾಸ ತರುತ್ತವೆ’ ಎಂದೂ ಚಲ್ಲ ಹೇಳಿದ್ದಾರೆ.

‘ಅಕಾಡೆಮಿಕ್ಸ್​ನಲ್ಲಿ ನೀವು ಮಾಡಿದ ಸಾಧನೆ ನಿಮಗೆ ಜೀವನಪರ್ಯಂತ ಇರುವ ಆಸ್ತಿಯಂತೆ. ಅದು ಒಂದು ರೀತಿಯಲ್ಲಿ ಈಜಿನಂತೆ. ಒಮ್ಮೆ ಕಲಿತರೆ ಆ ವಿದ್ಯೆ ಮರೆತುಹೋಗುವುದೇ ಇಲ್ಲ. ನೀವು ಫಾರ್ಮಲ್ ಎಜುಕೇಶನ್ ಅನ್ನು ಎಷ್ಟೇ ದ್ವೇಷಿಸಿ, ಅದು ನಿಮಗೆ ಬಹಳ ಉಪಯುಕ್ತವಾಗಿ ಉಳಿಯುತ್ತದೆ, ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿರುತ್ತದೆ,’ ಎಂದು ಕಳೆದ ವರ್ಷ ಐಐಟಿ ಬಾಂಬೆ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: ಅದಾನಿಗೆ ‘ಶಾರ್ಟ್’ ಮಾಡಿದ್ದ ಹಿಂಡನ್ಬರ್ಗ್ ಜೊತೆ ಕೋಟಕ್ ಕೂಡ ತಳುಕು; ಸೆಬಿ ನೋಟೀಸ್​ನಲ್ಲಿ ಕೋಟಕ್ ಹೆಸರಿಲ್ಲ ಯಾಕೆ ಎಂದ ಹಿಂಡನ್ಬರ್ಗ್

ಎಸ್​ಬಿಐನ ನೂತನ ಛೇರ್ಮನ್ ಆದ ಚಲ್ಲ ಶ್ರೀನಿವಾಸುಲು ಶೆಟ್ಟಿ ಅವರ ಈ ಮಾತು ಯಾರಿಗಾದರೂ ಉತ್ತೇಜನ ನೀಡುವಂಥದ್ದು. ಈಗಾಗಲೇ ಬಲಿಷ್ಠಗೊಂಡಿರುವ ಎಸ್​ಬಿಐ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ಚಲ್ಲ ಅವರಿಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ