ಜಾಮ್ನಗರ್ ಗುಜರಾತ್ನ ಕಚ್ಛ್ ಕೊಲ್ಲಿ ಪ್ರದೇಶದ ಬಳಿ ಇರುವ ಮತ್ತು ಏಳು ಲಕ್ಷ ಮಾತ್ರವೇ ಜನಸಂಖ್ಯೆ ಇರುವ ಒಂದು ಪುಟ್ಟ ನಗರ. ಅಪ್ಪಟ ಮರಳುಗಾಡಾಗಿದ್ದ ಈ ನಗರ ಇಂದು ಮುದ್ದು ಮುದ್ದಾಗಿ ಕಾಣುತ್ತಿದೆ. ಈ ರೂಪಾಂತರಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಂಬಾನಿ ಕುಟುಂಬ ಕಾರಣ. ನಿಮಗೆ ನೆನಪಿರಬಹುದು, ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿಯ ಮದುವೆಗೆ ಮುಂಚಿನ ಕಾರ್ಯಕ್ರಮಗಳು ಇತರ ಸಿರಿವಂತರ ವಿವಾಹ ಸಮಾರಂಭಗಳನ್ನೇ ಮೀರಿಸುವಷ್ಟು ಅದ್ಧೂರಿಯಾಗಿದ್ದವು. ಅಷ್ಟೇ ಅಲ್ಲ, ಸಂಪ್ರದಾಯವನ್ನೂ ಬಿಡದೆ ಆಧುನಿಕ ಮೆರಗು ಮತ್ತು ವೈಭವವನ್ನೂ ಬಿಡದೆ ನಡೆದಂತಿತ್ತು ಈ ಕಾರ್ಯಕ್ರಮಗಳು.
ಧೀರೂಭಾಯ್ ಅಂಬಾನಿ ಗುಜರಾತಿಗರಾದರೂ ಜಾಮ್ನಗರ್ನಲ್ಲಿ ಹುಟ್ಟಿದವರಲ್ಲ. ಮುಕೇಶ್ ಅಂಬಾನಿ ಯೆಮನ್ ದೇಶದಲ್ಲಿ ಜನಿಸಿದವರು. ಆದರೆ, ಜಾಮ್ನಗರ್ ಅನ್ನು ಅನಂತ್ ಅಂಬಾನಿ ಪ್ರೀವೆಡ್ಡಿಂಗ್ ಸಮಾರಂಭಕ್ಕೆ ಆಯ್ದುಕೊಳ್ಳಲು ಕಾರಣ ಆ ನಗರದಲ್ಲಿ ರಿಲಾಯನ್ಸ್ನ ಇಂಡಸ್ಟ್ರೀಸ್ನ ಬಿಸಿನೆಸ್ ಅಡಿಪಾಯ ಇರುವುದು. ಅನಂತ್ ಅಂಬಾನಿ ಇದೇ ಜಾಮ್ನಗರ್ನಲ್ಲಿ ಬಾಲ್ಯವನ್ನು ಕಳೆದಿದ್ದರು. ಈ ಕಾರಣಕ್ಕೆ ಈ ಪುಟ್ಟ ಪಟ್ಟಣವನ್ನು ಅದ್ಧೂರಿ ಪ್ರೀವೆಡ್ಡಿಂಗ್ ಕಾರ್ಯಕ್ರಮದ ಸ್ಥಳವಾಗಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೇಲೆ ಯಾರೂ ಮಾರ್ಕ್ಸ್ ಕೇಳಲ್ಲ ಕಣ್ರೀ… ಎಸ್ಬಿಐ ನೂತನ ಮುಖ್ಯಸ್ಥರ ಕಿವಿಮಾತು ಕೇಳ್ರೀ
ಅನಂತ್ ಅಂಬಾನಿಯ ಪ್ರೀವೆಡ್ಡಿಂಗ್ ಕಾರ್ಯಕ್ರಮಗಳು ಬಹಳ ಆರ್ಥಿಕ ಚಟುವಟಿಕೆಗಳಿಗೆ ಕಾರಣವಾಗಿವೆ. ಆರು ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೆಲಸಗಳ ಸೃಷ್ಟಿಯಾಗಿವೆ. ಕಲಾಕಾರರು, ಡೆಕೋರೇಟರ್ಗಳು, ಡ್ರೈವರ್ಗಳು, ಬಾಣಸಿಗರು ಇತ್ಯಾದಿ ಹಲವು ವೃತ್ತಿಗಳವರಿಗೆ ಸಾಕಷ್ಟು ಕೆಲಸ ಸಿಕ್ಕಿತು. ಇದರಿಂದ ಸ್ಥಳೀಯ ಆರ್ಥಿಕತೆಗೆ ಪುಷ್ಟಿ ಕೂಡ ಸಿಕ್ಕಿದೆ.
ಜಾಮ್ನಗರ್, ರಾಜಕೋಟ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮೂರು ತಿಂಗಳ ಕಾಲ ಎಲ್ಲಾ ಹೋಟೆಲ್ಗಳು ಭರ್ತಿಯಾಗಿ ಹೋಗಿದ್ದು ನಿಜಕ್ಕೂ ಗಮನಾರ್ಹ. ಅಷ್ಟೇ ಅಲ್ಲ, ಈ ನಗರದ ಇನ್ಫ್ರಾಸ್ಟ್ರಕ್ಚರ್ ಕೂಡ ಸುಧಾರಣೆ ಕಂಡಿತು. ಕಾರ್ಯಕ್ರಮಕ್ಕೆ ದೊಡ್ಡದೊಡ್ಡ ಗಣ್ಯರು ಬರುವುದರಿಂದ ಇಡೀ ನಗರದ ರಸ್ತೆಗಳನ್ನು ದುರಸ್ತಿಗೊಳಿಸಲಾಯಿತು. ನಗರದ ಬಹಳ ಕಡೆ ಗಿಡಮರಗಳನ್ನು, ಹೂವಿನ ಗಿಡಗಳನ್ನು ಬೆಳೆಸಿ ಇಡೀ ನಗರ ಸುಂದರವಾಗಿ ಕಾಣುವಂತೆ ಮಾಡಲಾಯಿತು.
ಜಾಮ್ನಗರ್ನಲ್ಲಿ ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ವತಿಯಿಂದ ವಿಶ್ವದ ಅತಿದೊಡ್ಡ ಪ್ರಾಣಿ ಸಂಗ್ರಹಾಲಯವನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇವೆಲ್ಲವೂ ಕೂಡ ಜಾಮ್ನಗರ್ ಪಟ್ಟಣವನ್ನು ಪ್ರವಾಸೋದ್ಯಮ ಆಕರ್ಷಣೆಯ ಸ್ಥಳವನ್ನಾಗಿ ಮಾಡಿವೆ.
ಇದನ್ನೂ ಓದಿ: ಅಮೆರಿಕದ ಬ್ಲೂ ಒರಿಜಿನ್ನ ಗಗನನೌಕೆಯಲ್ಲಿ ಪ್ರಯಾಣಿಸಬೇಕೆ? ಅರ್ಜಿ ಸಲ್ಲಿಕೆಗೆ ಕೇವಲ 200 ರೂ
ಇನ್ನು, ಅನಂತ್ ಅಂಬಾನಿ ವಿವಾಹಪೂರ್ವ ಹಲವು ಸಮಾರಂಭಗಳ ಭಾಗವಾಗಿ ಮುಂಬೈ ಸಮೀಪ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಸಲಾಗಿದೆ. ಪಾಲ್ಘಾರ್ ಎಂಬಲ್ಲಿ 50ಕ್ಕೂ ಹೆಚ್ಚು ಜೋಡಿಗಳ ಮದುವೆ ಆಯಿತು. ರಿಲಾಯನ್ಸ್ ಕಾರ್ಪೊರೇಟ್ ಪಾರ್ಕ್ನಲ್ಲಿ ನಡೆದ ಈ ಮದುವೆಗೆ ಅಂಬಾನಿ ಕುಟುಂಬ ಸೇರಿದಂತೆ 800 ಜನರು ಸಾಕ್ಷಿಗಳಾದರು. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಈ ವಧೂವರರಿಗೆ ಅಂಬಾನಿ ಕುಟುಂಬದಿಂದ ಭರ್ಜರಿ ಗಿಫ್ಟ್ ಸಿಕ್ಕಿತು. ಪ್ರತಿಯೊಬ್ಬ ವಧುವಿಗೂ 1.1 ಲಕ್ಷ ರೂ (ಒಂದು ಲಕ್ಷದ ಒಂದು ಸಾವಿರ) ಹಣವನ್ನು ಉಡುಗೊರೆಯಾಗಿ ನೀಡಲಾಯಿತು.
ಇದೇ ಜುಲೈ 12ರಂದು ಅನಂತ್ ಅಂಬಾನಿ ಅವರು ರಾಧಿಕಾ ಮರ್ಚಂಟ್ ಅವರನ್ನು ವರಿಸಲಿದ್ದಾರೆ. ಮುಂಬೈನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ