ನಾಲ್ಕೈದು ದಶಕಗಳ ಕಾಲ ಭರ್ಜರಿಯಾಗಿ ಆರ್ಥಿಕ ಬೆಳವಣಿಗೆ ಕಂಡಿದ್ದ ಚೀನಾದ ವೇಗ (China economic growth) ಈಗ ತುಸು ಮಂದಗೊಂಡಿದೆ. ಜಿಡಿಪಿ ಶೇ. 5ರ ದರದಲ್ಲಿ ಬೆಳೆಯಲೂ ಪರದಾಡುವಂತಾಗಿದೆ. ಈ ಮಧ್ಯೆ ಚೀನಾ ಸರ್ಕಾರ ಆರ್ಥಿಕವಾಗಿ ಎರಡು ಮಹತ್ವದ ಗುರಿ ಇಟ್ಟಿದೆ. ಒಂದು, ಅದರ ಉದ್ಯಮಗಳು ಮತ್ತು ಮನೆಗಳು ಸ್ವಚ್ಛ ತಂತ್ರಜ್ಞಾನಗಳನ್ನು (cleaner technology) ಅಳವಡಿಸಿಕೊಳ್ಳುವುದು. ಇನ್ನೊಂದು ಎಂದರೆ ಆಂತರಿಕವಾಗಿ ಅನುಭೋಗ ಹೆಚ್ಚಿಸುವುದು. ಇವೆರಡು ಗುರಿಗಳನ್ನು ಈಡೇರಿಸಲು ಪ್ರಮುಖ ಹೆಜ್ಜೆಯಾಗಿ ಚೀನಾದ ಜನಸಾಮಾನ್ಯರು ಎಲೆಕ್ಟ್ರಿಕ್ ಕಾರು, ಕಡಿಮೆ ವಿದ್ಯುತ್ ಬೇಡುವ ಫ್ರಿಡ್ಜ್, ನೀರು ಮಿತವಾಗಿ ಬಳಸುವ ವಾಷಿಂಗ್ ಮೆಷೀನ್ ಇತ್ಯಾದಿ ಯಂತ್ರೋಪಕರಣಗಳನ್ನು ಬಳಕೆ ಮಾಡುವಂತೆ ಉತ್ತೇಜಿಸಲಾಗುತ್ತಿದೆ. ಕೆಲ ತಿಂಗಳ ಹಿಂದೆಯೇ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಈ ಮಹತ್ವದ ಯೋಜನೆಯನ್ನು ಘೋಷಿಸಿದ್ದರು. ಬ್ಲೂಮ್ಬರ್ಗ್ ಸುದ್ದಿ ಸಂಸ್ಥೆ ಈ ವಿಚಾರದ ಬಗ್ಗೆ ವಿಸ್ತೃತವಾದ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದರ ಮುಖ್ಯಾಂಶಗಳನ್ನು ಇಲ್ಲಿ ಉಲ್ಲೇಖಿಸಿದ್ದೇವೆ.
ಚೀನಾ ವಿಶ್ವದ ತಯಾರಿಕಾ ಅಡ್ಡೆ. ಅಂದರೆ ಹೆಚ್ಚಿನ ಜಾಗತಿಕ ಉತ್ಪಾದನಾ ಚಟುವಟಿಕೆ ಚೀನಾದಲ್ಲಿ ಕೇಂದ್ರಿತವಾಗಿದೆ. ಚೀನಾದ ಆರ್ಥಿಕತೆ ರಫ್ತಿನ ಮೇಲೆ ಅವಲಂಬಿತವಾಗಿದೆ. ಈಗ ಆಂತರಿಕವಾಗಿ ಅನುಭೋಗ ಹೆಚ್ಚಾಗಬೇಕಿದೆ. ಇದು ಒಂದು ಅಂಶ.
ಇನ್ನೊಂದು ಅಂಶ ಪರಿಸರಪೂರಕ ಉದ್ಯಮ ವಾತಾವರಣ ನಿರ್ಮಿಸುವ ಗುರಿ. ಮಾಲಿನ್ಯಕಾರಕ ವಾಹನಗಳು ರಸ್ತೆಗೆ ಇಳಿಯಬಾರದು. ನೀರು ಅತಿ ವ್ಯಯಿಸುವ ವಾಷಿಂಗ್ ಮೆಷೀನ್ ಇತ್ಯಾದಿ ಯಂತ್ರೋಪಕರಣಗಳು ಇರಬಾರದು. ಇವು ಉದಾಹರಣೆ. ಹೀಗೆ ಪರಿಸರಕ್ಕೆ ಹಾನಿ ಮಾಡುವ ಯಾವುದೇ ವಸ್ತು ಆಗಿದ್ದರೂ ಅದನ್ನು ಮರಳಿಸಿ ಹೊಸದನ್ನು ಖರೀದಿಸಲು ಜನರಿಗೆ ಸರ್ಕಾರ ಉತ್ತೇಜನ ಕೊಡುತ್ತಿದೆ.
ಇದನ್ನೂ ಓದಿ: ರಾಜಕೀಯ ಚಾಣಕ್ಯ ಅಮಿತ್ ಶಾ ಹೂಡಿಕೆಯಲ್ಲೂ ಚಾಣಕ್ಯನೇ; 250ಕ್ಕೂ ಹೆಚ್ಚು ಷೇರುಗಳ ಆಯ್ಕೆಗಳಲ್ಲಿ ಬುದ್ಧಿವಂತಿಕೆ ನೋಡಿ
ಹೀಗೆ ಮಾಡುವುದರಿಂದ ಪರಿಸರಹಾನಿ ತಪ್ಪಿಸುವುದರ ಜೊತೆಗೆ ಆಂತರಿಕವಾಗಿ ವ್ಯವಹಾರಕ್ಕೆ ಬೇಡಿಕೆ ಹೆಚ್ಚುತ್ತದೆ.
ಚೀನಾದಲ್ಲಿ 33.6 ಕೋಟಿ ಕಾರುಗಳಿವೆ. ಫ್ರಿಡ್ಜ್, ವಾಷಿಂಗ್ ಮೆಷೀನ್ ಮತ್ತು ಏರ್ಕಂಡೀಷನ್ ಯಂತ್ರಗಳ ಸಂಖ್ಯೆ ಬರೋಬ್ಬರಿ 300 ಕೋಟಿಗೂ ಹೆಚ್ಚಂತೆ. ಒಂದು ವೇಳೆ ಜನರು ಇಷ್ಟೂ ವಸ್ತುಗಳನ್ನು ಹಿಂದಿರುಗಿಸಿ, ಹೊಸದನ್ನು ಖರೀದಿಸಿಬಿಟ್ಟರೆ ಚೀನಾದ ಆರ್ಥಿಕತೆ ಇನ್ಯಾವುದೋ ಮಟ್ಟಕ್ಕೆ ಏರಿ ಹೋಗುತ್ತದೆ.
ಒಂದು ವೇಳೆ ಚೀನೀಯರು ತಮ್ಮ ಹಳೆಯ ಯಂತ್ರೋಪಕರಣಗಳನ್ನು ವಾಪಸ್ ಮಾಡಿದರೆ ಅದನ್ನು ರೀಸೈಕಲ್ ಮಾಡಬೇಕಾಗುತ್ತದೆ. ಇಷ್ಟು ರೀಸೈಕಲ್ ಮಾಡುವುದು ಅಸಾಧ್ಯದ ಮಾತು. ಆದರೂ ಚೀನಾ ದೂರಗಾಮಿಯಾಗಿ ಯೋಜನೆ ಹಾಕಿಕೊಂಡಿದೆ. ದೇಶಾದ್ಯಂತ 2,000 ರೀಸೈಕ್ಲಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲಿದೆ.
ಇದರಲ್ಲಿ ಚೀನೀ ಉದ್ಯಮಗಳಿಗೆ ಅನುಕೂಲ ಕೂಡ ಇದೆ. ರೀಸೈಕ್ಲಿಂಗ್ ತಂತ್ರಜ್ಞಾನದಲ್ಲಿ ಪರಿಪಕ್ವತೆ ಪಡೆದುಕೊಂಡರೆ ಜಾಗತಿಕವಾಗಿ ದೊಡ್ಡ ಮಾರುಕಟ್ಟೆಯೇ ಚೀನೀಯರಿಗೆ ಕೈಗೆಟುಕುತ್ತದೆ. ಬಹಳಷ್ಟು ದೇಶಗಳಲ್ಲಿ ರೀಸೈಕ್ಲಿಂಗ್ಗೆ ಬಹಳ ಬೇಡಿಕೆ ಇದೆ. ಇದರಲ್ಲಿ ಚೀನೀಯರು ಪ್ರಾಬಲ್ಯ ತೋರಬಹುದು.
ಇದನ್ನೂ ಓದಿ: ಉಚಿತ ಸ್ಕೀಮ್ಗಳ ಮೇಲೆ ಶ್ವೇತಪತ್ರ; ಸರ್ಕಾರ ಜವಾಬ್ದಾರಿ ತೆಗೆದುಕೊಂಡು ಸಹಮತ ಮೂಡಿಸಲಿ: ಮಾಜಿ ಆರ್ಬಿಐ ಗವರ್ನರ್ ಸುಬ್ಬಾರಾವ್
ಚೀನಾ ಸರ್ಕಾರ 2027ಕ್ಕೆ ಒಂದಷ್ಟು ಗುರಿ ಹಾಕಿಕೊಂಡಿದೆ. ಸರ್ಕಾರದಿಂದ ಒಂದಷ್ಟು ಉತ್ತೇಜನಕಾರಿ ಪ್ಯಾಕೇಜ್ ಬಿಡುಗಡೆ ಆಗಲಿದೆ. ಖಾಸಗಿ ಉದ್ಯಮಗಳಿಗೂ ವೆಚ್ಚ ಮಾಡಲು ಸರ್ಕಾರ ವಿವಿಧ ರೀತಿಯಲ್ಲಿ ಉತ್ತೇಜಿಸಲಿದೆ. ಪ್ರಾದೇಶಿಕ ಆಡಳಿತಗಳು ಒಂದಷ್ಟು ಧನಸಹಾಯ ಮಾಡಲಿವೆ.
ಹಳೆಯ ವಸ್ತುಗಳನ್ನು ಮರಳಿ ಹೊಸ ವಸ್ತುಗಳಿಗೆ ಜನರು ಅಪ್ಗ್ರೇಡ್ ಆದರೆ ರೀಟೇಲ್ ಮಾರಾಟ ಈ ವರ್ಷ 0.5 ಪ್ರತಿಶತದಷ್ಟು ಹೆಚ್ಚಾಗಬಹುದು. ಹೊಸ ಯಂತ್ರೋಪಕರಣಗಳ ತಯಾರಿಕೆಗೆ ಮಾಡಲಾಗುವ ಹೂಡಿಕೆಯಲ್ಲಿ 0.4 ಪ್ರತಿಶತದಷ್ಟು ಹೆಚ್ಚಾಗಬಹುದು. ಒಟ್ಟಾರೆ ಜಿಡಿಪಿ ಬೆಳವಣಿಗೆ ಹೆಚ್ಚುವರಿ 0.7ರಷ್ಟು ಹೆಚ್ಚಾಗಬಹುದು ಎಂಬುದು ಸರ್ಕಾರ ಲೆಕ್ಕಾಚಾರ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ