
ನವದೆಹಲಿ, ಡಿಸೆಂಬರ್ 23: ಶೇ. 5ರಷ್ಟು ಆರ್ಥಿಕ ಬೆಳವಣಿಗೆಯ ನಿರೀಕ್ಷೆಯಲ್ಲಿರುವ ಚೀನಾಗೆ (China) ಈ ವರ್ಷ ನಿರಾಸೆಯಾಗಬಹುದು. ಚಿಂತಕರ ವೇದಿಕೆಯಾದ ರೋಡಿಯಂ ಗ್ರೂಪ್ (Rhodium Group) ಮಾಡಿರುವ ಅಂದಾಜು ಪ್ರಕಾರ 2025ರಲ್ಲಿ ಚೀನಾದ ಜಿಡಿಪಿ ಶೇ. 2.5ರಿಂದ ಶೇ. 3ರಷ್ಟು ಮಾತ್ರವೇ ಹೆಚ್ಚಾಗಿರಬಹುದು. ಈ ವರ್ಷದ ದ್ವಿತೀಯಾರ್ಧದಲ್ಲಿ ಚೀನಾದಲ್ಲಿ ಫಿಕ್ಸೆಡ್ ಅಸೆಟ್ ಇನ್ವೆಸ್ಟ್ಮೆಂಟ್ ಕುಸಿದಿರುವುದರಿಂದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿರಬಹುದು ಎಂಬುದು ರೋಡಿಯಂ ಗ್ರೂಪ್ನ ಅನಿಸಿಕೆ.
ಭಾರತಕ್ಕೆ ಆರ್ಥಿಕ ವರ್ಷ ಎಂದರೆ ಏಪ್ರಿಲ್ನಿಂದ ಮಾರ್ಚ್ ಇರುತ್ತದೆ. ಆದರೆ, ಚೀನಾ, ಅಮೆರಿಕ ಮೊದಲಾದ ಹಲವು ದೇಶಗಳಿಗೆ ಕ್ಯಾಲೆಂಡರ್ ವರ್ಷವೇ ಆರ್ಥಿಕ ವರ್ಷವೂ ಆಗಿರುತ್ತದೆ. ಅಂದರೆ ಜನವರಿಯಿಂದ ಡಿಸೆಂಬರ್ವರೆಗೆ ಒಂದು ಆರ್ಥಿಕ ವರ್ಷ. ಚೀನಾ ಸರ್ಕಾರ 2025ಕ್ಕೆ ಶೇ. 5ರಷ್ಟು ಆರ್ಥಿಕ ಬೆಳವಣಿಗೆಯ ಗುರಿ ಇಟ್ಟುಕೊಂಡಿತ್ತು. ಅಮೆರಿಕದ ಟ್ಯಾರಿಫ್ ನಡುವೆಯೂ ತನ್ನ ರಫ್ತು ಸಮೃದ್ಧವಾಗಿದ್ದು ಆರ್ಥಿಕ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಆಗಿದೆ ಎಂದು ಸರ್ಕಾರವು ಘೋಷಿಸುವ ಸಾಧ್ಯತೆ ಇದೆ. ಆದರೆ, ರೋಡಿಯಂ ಗ್ರೂಪ್ ಈ ಬೆಳವಣಿಗೆಯ ಸಾಧ್ಯತೆಯನ್ನು ತಳ್ಳಿಹಾಕಿದೆ.
ಇದನ್ನೂ ಓದಿ: WhatsApp vs Govt: ತಿಂಗಳಿಗೆ ಕೋಟಿ ನಂಬರ್ಸ್ ನಿಷೇಧಿಸಿದರೂ ಸರ್ಕಾರಕ್ಕೆ ಗುಟ್ಟು ಬಿಟ್ಟುಕೊಡದ ವಾಟ್ಸಾಪ್
ರೋಡಿಯಂ ಗ್ರೂಪ್ ತನ್ನ ಅಂದಾಜನ್ನು ಸಮರ್ಥಿಸಿಕೊಳ್ಳಲು ಹಲವು ಕಾರಣಗಳನ್ನು ಪ್ರಸ್ತಾಪಿಸಿದೆ. ಮೊದಲಿಗೆ, ಚೀನಾದಲ್ಲಿ ಹಣದುಬ್ಬರ ಅಲ್ಲ, ಸತತ ಹತ್ತು ಕ್ವಾರ್ಟರ್ಗಳಲ್ಲಿ ಹಣ ಕುಸಿತದ ಸ್ಥಿತಿ (ಡೀಫ್ಲೇಶನ್) ಇದೆ. ಯಾವ ದೇಶವೂ ಕೂಡ ಇಷ್ಟು ಡೀಫ್ಲೇಶನ್ ಇಟ್ಟುಕೊಂಡು ಶೇ. 5 ಆರ್ಥಿಕ ವೃದ್ಧಿ ಕಂಡಿದ್ದಿಲ್ಲ ಎಂಬುದು ಇದರ ಅನಿಸಿಕೆ.
ಎರಡನೆಯ ಕಾರಣ ಎಂದರೆ, ಫಿಕ್ಸೆಡ್ ಅಸೆಟ್ ಹೂಡಿಕೆ ಕುಂಠಿತಗೊಂಡಿರುವುದು. ಫಿಕ್ಸೆಸ್ ಅಸೆಟ್ ಇನ್ವೆಸ್ಟ್ಮೆಂಟ್ ಎಂದರೆ ರಸ್ತೆ, ರೈಲು, ವಸತಿ, ಕಟ್ಟಡ ನಿರ್ಮಾಣ, ಫ್ಯಾಕ್ಟರಿ, ಯಂತ್ರೋಪಕರಣ ಇತ್ಯಾದಿ ಮರುಮಾರಾಟ ಮಾಡದಂತಹ ವಸ್ತುಗಳ ಮೇಲಿನ ಹೂಡಿಕೆಯಾಗಿದೆ. 2025ರಲ್ಲಿ ಜನವರಿಯಿಂದ ಜೂನ್ವರೆಗೆ ಇದರ ಮೇಲಿನ ಹೂಡಿಕೆ ಶೇ. 4.2ರಷ್ಟು ಹೆಚ್ಚಿತ್ತು. ಆದರೆ, ಜುಲೈನಿಂದ ಅಕ್ಟೋಬರ್ವರೆಗೆ ಹೂಡಿಕೆ ಶೇ. 12.2ರಷ್ಟು ಕುಸಿದಿದೆ. ಇದು ಜಿಡಿಪಿ ಬೆಳವಣಿಗೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂಬುದು ರೋಡಿಯಂ ಗ್ರೂಪ್ನ ಅನಿಸಿಕೆ.
ಇದನ್ನೂ ಓದಿ: ಒಂದು ಸಂಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು? ಕಾರ್ಪೊರೇಟ್ ಲೋಕಕ್ಕೆ ಮಾದರಿಯಾದ ಡಿಆರ್ಡಿಒ
ಚೀನಾ ತನ್ನ ಆರ್ಥಿಕ ಬೆಳವಣಿಗೆ ಕುರಿತು ತಪ್ಪು ಲೆಕ್ಕಾಚಾರಗಳನ್ನು ಹಾಕುತ್ತಿದೆ ಎಂದು ಹೇಳುವ ರೋಡಿಯಂ ಗ್ರೂಪ್, ಮುಂದಿನ ವರ್ಷ (2026) ಅದರ ಜಿಡಿಪಿ ವೃದ್ಧಿದರ ಶೇ. 1ರಿಂದ ಶೇ. 2.5ರಷ್ಟು ಮಾತ್ರ ಇರಬಹುದು ಎಂದಿದೆ. ಐಎಂಎಫ್ ಪ್ರಕಾರ 2026ರಲ್ಲಿ ಚೀನಾದ ಆರ್ಥಿಕತೆ ಶೇ. 4.5ರಷ್ಟು ಹೆಚ್ಚಬಹುದು. ಆದರೆ, ರೋಡಿಯಂ ಗ್ರೂಪ್ ಬೇರೆಯದೇ ಚಿತ್ರಣ ತೆರೆದಿಡುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ