ನವದೆಹಲಿ, ಮಾರ್ಚ್ 12: ಕಾಮಗಾರಿಯೇ ನಡೆಯದ ಕಟ್ಟಡ, ರಸ್ತೆಗಳನ್ನು ತೋರಿಸಿ ಅನುದಾನ ಮಂಜೂರು ಮಾಡಿಸಿಕೊಳ್ಳುವ ಎಂಜಿನಿಯರುಗಳು, ಗುತ್ತಿಗೆದಾರರನ್ನು ನೀವು ನೋಡಿರಬಹುದು. ಅಂತೆಯೇ, ಉದ್ಯೋಗಿಗಳು ಅಸ್ತಿತ್ವದಲ್ಲಿ ಇಲ್ಲದೇ ಇದ್ದರೂ ನಕಲಿ ಪೇರೋಲ್ (payroll scam) ಸೃಷ್ಟಿಸಿ ಎಂಟು ವರ್ಷ ಒಬ್ಬ ವ್ಯಕ್ತಿ ಹಣ ಬಾಚಿಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಕೂಡ ಭಾರತದಲ್ಲಿ ಮಾತ್ರವೇ ನಡೆಯಲು ಸಾಧ್ಯ ಎಂದು ನೀವು ಭಾವಿಸಿರಬಹುದು. ವಾಸ್ತವದಲ್ಲಿ ಇದು ಚೀನಾದಲ್ಲಿ ಬೆಳಕಿಗೆ ಬಂದಿರುವ ಘಟನೆ. ಶಾಂಘೈನಲ್ಲಿ ಟೆಕ್ ಕಂಪನಿಯೊಂದರಲ್ಲಿ ಈ ಸ್ಕ್ಯಾಮ್ ನಡೆದಿರುವುದು ತಿಳಿದುಬಂದಿದೆ. ಪೊಲೀಸರು ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್ ಯಾಂಗ್ ಎಂಬಾತನನ್ನು ಬಂಧಿಸಿದ್ದಾರೆ.
ಈ ಯಾಂಗ್ ಶಾಂಘೈನಲ್ಲಿರುವ ನೌಕರರನ್ನು ಸರಬರಾಜು ಮಾಡುವ ಕಂಪನಿಯೊಂದರಲ್ಲಿ ಎಚ್ ಆರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದವ. ಈತ ಶಾಂಘೈನಲ್ಲೇ ಇರುವ ಬೇರೊಂದು ಕಂಪನಿಗೆ ಕಳುಹಿಸಲಾದ ನೌಕರರ ವೇತನದ ಸಂಗತಿಯನ್ನು ನೋಡಿಕೊಳ್ಳುತ್ತಿದ್ದ.
ಆದರೆ, ಈ ನೌಕರರಿಗೆ ಹೋಗುತ್ತಿದ್ದ ಸಂಬಳದ ಬಗ್ಗೆ ಯಾರೂ ಕೂಡ ವಿಚಾರಿಸುವುದಿಲ್ಲ, ಆಡಿಟ್ ಮಾಡುವುದಿಲ್ಲ. ತಾನು ಮಾಡಿದ್ದೇ ಫೈನಲ್ ಎನ್ನುವುದು ಈತನಿಗೆ ತಿಳಿದುಹೋಯಿತು. ಇದೇ ಅವಕಾಶ ಎಂದು ಅರಿತು ಯಾಂಗ್ ತನ್ನ ಗೋಲ್ಮಾಲ್ ಆಟ ಶುರುವಚ್ಚಿದ.
ಇದನ್ನೂ ಓದಿ: 1929ರಲ್ಲಿ ಷೇರುಪೇಟೆ ಮಹಾಕುಸಿತದ ಪರಿಣಾಮ ಭೀಕರ; ಈ ಬಾರಿ ಅದನ್ನೂ ಮೀರಿಸಿದ ಕುಸಿತವಾ?
ಮೊದಲಿಗೆ ಈತ ಸುನ್ ಎನ್ನುವ ಹೆಸರಿನ ನೌಕರನ ಪ್ರೊಫೈಲ್ ರಚಿಸಿದ. ಈ ಸುನ್ ವಾಸ್ತವದಲ್ಲಿ ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಿ. ಈ ನಕಲಿ ವ್ಯಕ್ತಿಯ ಹೆಸರನ್ನು ಟೆಕ್ ಕಂಪನಿಯ ಪೇರೋಲ್ಗೆ ಸೇರಿಸುತ್ತಾನೆ. ತನ್ನ ಸುಪರ್ದಿಯಲ್ಲಿರುವ ಬ್ಯಾಂಕ್ ಅಕೌಂಟ್ ಅನ್ನು ಈ ಸುನ್ನ ಪೇರೋಲ್ ಪ್ರೊಫೈಲ್ಗೆ ಅಟ್ಯಾಚ್ ಮಾಡುತ್ತಾನೆ.
ಲೇಬರ್ ಸರ್ವಿಸ್ ಕಂಪನಿಯ ಮ್ಯಾನೇಜ್ಮೆಂಟ್ಗೆ ಅನುಮಾನ ಬಂದು ಕೇಳುತ್ತಾರೆ. ಈತ ಏನೋ ಒಂದು ಸಮಜಾಯಿಷಿ ನೀಡಿ ಥೇಪೆ ಹಚ್ಚುತ್ತಾನೆ. ಆ ಬಳಿಕ ಈ ಪೇರೋಲ್ ವಿಚಾರ ಬರುವುದೇ ಇಲ್ಲ. ಈತ ಸುನ್ ರೀತಿಯಲ್ಲೇ ಇನ್ನೂ 21 ನಕಲಿ ನೌಕರರ ಪ್ರೊಫೈಲ್ ಸೃಷ್ಟಿಸಿ ಟೆಕ್ ಕಂಪನಿಗೆ ಅಟ್ಯಾಚ್ ಮಾಡುತ್ತಾನೆ. ಹಾಜರಾತಿ ದಾಖಲೆ ಎಲ್ಲವೂ ಪಕ್ಕಾ ಇರುತ್ತದೆ. ಸಂಬಳವೂ ಬರುತ್ತಲೇ ಇರುತ್ತದೆ.
ಎಂಟು ವರ್ಷ ಕಾಲ ಅವ್ಯಾಹತವಾಗಿ ಈ ಯಾಂಗ್ ಆಡಿದ್ದೇ ಆಟ ಆಗಿರುತ್ತದೆ. 2022ರಲ್ಲಿ ಟೆಕ್ ಕಂಪನಿಯ ಹಣಕಾಸು ವಿಭಾಗದವರಿಗೆ ಸ್ವಲ್ಪ ಅನುಮಾನ ಹುಟ್ಟುತ್ತದೆ. ಸುನ್ ಹೆಸರಿನ ವ್ಯಕ್ತಿಗೆ ಸಂಬಳ ಹೋಗುತ್ತಲೇ ಇದೆ. ಆದರೆ, ಕಂಪನಿಯೊಳಗೆ ಆತ ಕೆಲಸ ಮಾಡಿದ್ದನ್ನು ಯಾರೂ ಕೂಡ ನೋಡಿಲ್ಲ. ಇದು ಹೇಗೆ ಸಾಧ್ಯ ಎಂದು ಆ ಕಂಪನಿಯವರು ಪೇರೋಲ್ ರೆಕಾರ್ಡ್ಗಳು ಮತ್ತು ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸುತ್ತಾರೆ. ಆಗಲೇ ಗೊತ್ತಾಗಿದ್ದು ಯಾಂಗ್ ಮಾಡಿದ ಕರ್ಮಕಾಂಡದ ವಿಚಾರ.
ಇದನ್ನೂ ಓದಿ: ನಿನ್ನೆ ಪ್ರಪಾತಕ್ಕೆ ಬಿದ್ದಿದ್ದ ಇಂಡಸ್ಇಂಡ್ ಬ್ಯಾಂಕ್ ಷೇರುಬೆಲೆ ಇವತ್ತು ಸಖತ್ ಏರಿಕೆ; ಬಿದ್ದಿದ್ಯಾಕೆ, ಏಳುತ್ತಿರುವುದ್ಯಾಕೆ?
ಪೊಲೀಸರು ಈ ಎಚ್ ಆರ್ ಮ್ಯಾನೇಜರ್ ಅನ್ನು ಬಂಧಿಸಿ ಠಾಣೆಗೆ ಹಾಕಿದ್ದಾರೆ. ಹತ್ತು ವರ್ಷ ಸಜೆ ಶಿಕ್ಷೆ ಈತನಿಗೆ ಸಿಕ್ಕಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಯಲ್ಲಿ ವರದಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ