Citigroup Layoffs: ಜೆಪಿ ಮಾರ್ಗನ್, ಗೋಲ್ಡ್ಮನ್ ಸ್ಯಾಕ್ಸ್ ಬಳಿಕ ಈಗ ಸಿಟಿಗ್ರೂಪ್ನಿಂದಲೂ ನೂರಾರು ಉದ್ಯೋಗಿಗಳು ವಜಾ
Investment Banking Company Citigroup: ಸಿಟಿಗ್ರೂಪ್ ಕಂಪನಿಯಲ್ಲಿ ಒಟ್ಟು 2.4 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಹೊರಹೋಗುವ ಸಿಬ್ಬಂದಿ ಸಂಖ್ಯೆ ಶೇ. 1ಕ್ಕಿಂತಲೂ ಕಡಿಮೆ ಎನ್ನಲಾಗಿದೆ. ಉದ್ಯೋಗಕಡಿತಕ್ಕೆ ಸಿಟಿಗ್ರೂಪ್ ಕೈಹಾಕಲು ನಿರ್ದಿಷ್ಟ ಕಾರಣಗಳನ್ನು ತಿಳಿಸಿಲ್ಲ.
ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲೂ ಉದ್ಯೋಗಕಡಿತ (Layoffs) ಪ್ರಕ್ರಿಯೆ ಜೋರಾಗಿ ಸಾಗುತ್ತಿದೆ. ಜೆಪಿ ಮಾರ್ಗನ್ ಚೇಸ್, ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್ ಮೊದಲಾದ ಕಂಪನಿಗಳು ಸಾವಿರಾರು ಮಂದಿಯನ್ನು ಕೆಲಸದಿಂದ ಕಿತ್ತುಹಾಕಿದ್ದವು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಇನ್ವೆಸ್ಟ್ಮೆಂಟ್ ಬ್ಯಾಂಕರ್ ಸಿಟಿಗ್ರೂಪ್ (Citigroup) ಕೂಡ ಉದ್ಯೋಗಕಡಿತಕ್ಕೆ ಕೈಹಾಕಿದೆ. ಸಿಟಿಗ್ರೂಪ್ನ ವಿವಿಧ ಸ್ತರಗಳಲ್ಲಿ ನೂರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಡಿವಿಶನ್ನಿಂದಲೇ ಹೆಚ್ಚಿನ ಜನರು ಲೇ ಆಫ್ ಆಗುತ್ತಿದ್ದಾರೆ.
ಸಿಟಿಗ್ರೂಪ್ ಕಂಪನಿಯಲ್ಲಿ ಒಟ್ಟು 2.4 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಹೊರಹೋಗುವ ಸಿಬ್ಬಂದಿ ಸಂಖ್ಯೆ ಶೇ. 1ಕ್ಕಿಂತಲೂ ಕಡಿಮೆ ಎನ್ನಲಾಗಿದೆ. ಉದ್ಯೋಗಕಡಿತಕ್ಕೆ ಸಿಟಿಗ್ರೂಪ್ ಕೈಹಾಕಲು ನಿರ್ದಿಷ್ಟ ಕಾರಣಗಳನ್ನು ತಿಳಿಸಿಲ್ಲ. ನಷ್ಟದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆಯಾ ಎಂಬುದು ಗೊತ್ತಿಲ್ಲ. ಸಿಟಿಗ್ರೂಪ್ ಹೇಳಿರುವ ಪ್ರಕಾರ ಇದು ಮಾಮೂಲಿಯ ಬಿಸಿನೆಸ್ ಪ್ಲಾನಿಂಗ್ನ ಒಂದು ಭಾಗ ಅಷ್ಟೇ ಎನ್ನಲಾಗಿದೆ.
ಸಿಟಿಗ್ರೂಪ್ ಕಳೆದ ಕೆಲ ವರ್ಷಗಳಿಂದ ತನ್ನ ಟೆಕ್ನಾಲಜಿ ಡಿವಿಶನ್ನಲ್ಲಿನ ಇನ್ಫ್ರಾಸ್ಟ್ರಕ್ಚರ್ ಅನ್ನು ಅಪ್ಗ್ರೇಡ್ ಮಾಡಿತ್ತು. ಅದಕ್ಕಾಗಿ ಕೋಟ್ಯಂತರ ರೂ ವೆಚ್ಚ ಮಾಡಿದೆ. ಉನ್ನತ ತಂತ್ರಜ್ಞಾನ ಅಳವಡಿಕೆಯಿಂದಾಗಿ ಮ್ಯಾನುಯಲ್ ಕಾರ್ಯನಿರ್ವಹಿಸುವ ಅಗತ್ಯತೆ ಕಡಿಮೆಯಾಗಲಿದೆ. ಹಲವು ಪ್ರಮಾಣದ ಕೆಲಸಗಳು ಯಾಂತ್ರೀಕೃತಗೊಂಡಿವೆ. ಹೀಗಾಗಿ, ಸಿಬ್ಬಂದಿವರ್ಗದ ಕಡಿತಕ್ಕೆ ಕಂಪನಿ ಕೈಹಾಕಿರಬಹುದು ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: Ambani: ಅಂಬಾನಿಯಿಂದ ಆಗ ಜಿಯೋ ಕ್ರಾಂತಿ, ಈಗ ಜಿನೋಮ್ ಕ್ರಾಂತಿ; ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಜಿನೋಮ್ ಟೆಸ್ಟಿಂಗ್ ಕಿಟ್
ಸಿಟಿಗ್ರೂಪ್ಗೆ ಸೇರಿದ ಸಿಟಿಬ್ಯಾಂಕ್ ತನ್ನ ಭಾರತೀಯ ವ್ಯವಹಾರಗಳನ್ನು ಆ್ಯಕ್ಸಿಸ್ ಬ್ಯಾಂಕ್ಗೆ ಮೊನ್ನೆಯಷ್ಟೇ ಮಾರಲು ಒಪ್ಪಂದ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಈಗ ಸಿಟಿಗ್ರೂಪ್ನ ವಿವಿಧ ವಿಭಾಗಗಳ ಸಿಬ್ಬಂದಿವರ್ಗದ ಉದ್ಯೋಗಕಡಿತ ಮಾಡುತ್ತಿದೆ.
ವಾರದ ಹಿಂದಷ್ಟೇ ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಎಂಬ ಮತ್ತೊಂದು ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಸಂಸ್ಥೆ ಕೂಡ ನೂರಾರು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಟ್ಟಿತ್ತು. ಜನವರಿ ತಿಂಗಳಲ್ಲಿ ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್ ಕಂಪನಿ 3,200 ಮಂದಿಯನ್ನು ಕೆಲಸದಿಂದ ವಜಾಗೊಳಿಸಿತ್ತು. ಅದರ ಭಾರತೀಯ ವಿಭಾಗದಲ್ಲಿ 700-800 ಮಂದಿ ಕೆಲಸ ಕಳೆದುಕೊಂಡಿರುವುದು ತಿಳಿದುಬಂದಿದೆ.
ಹೆಚ್ಚಿನ ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:56 am, Fri, 3 March 23