Closing Bell: ಸೆನ್ಸೆಕ್ಸ್ 776 ಪಾಯಿಂಟ್ಸ್, ನಿಫ್ಟಿ 235 ಪಾಯಿಂಟ್ಸ್ ಹೆಚ್ಚಳ; ಅದಾನಿ ಪೋರ್ಟ್ಸ್ 4 ಪರ್ಸೆಂಟ್ಸ್ ಏರಿಕೆ

| Updated By: Srinivas Mata

Updated on: Dec 02, 2021 | 6:52 PM

ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 2, 2021ರ ಗುರುವಾರ ಭರ್ಜರಿ ಏರಿಕೆ ಕಂಡಿದೆ. ಈ ದಿನ ಏರಿಕೆ ಮತ್ತು ಇಳಿಕೆ ಕಂಡ ಪ್ರಮುಖ ಷೇರುಗಳ ವಿವರ ಇಲ್ಲಿದೆ.

Closing Bell: ಸೆನ್ಸೆಕ್ಸ್ 776 ಪಾಯಿಂಟ್ಸ್, ನಿಫ್ಟಿ 235 ಪಾಯಿಂಟ್ಸ್ ಹೆಚ್ಚಳ; ಅದಾನಿ ಪೋರ್ಟ್ಸ್ 4 ಪರ್ಸೆಂಟ್ಸ್ ಏರಿಕೆ
ಸಾಂದರ್ಭಿಕ ಚಿತ್ರ
Follow us on

ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 2ನೇ ತಾರೀಕಿನ ಗುರುವಾರದಂದು ಭಾರೀ ಏರಿಕೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ಮಿಶ್ರ ಪ್ರಭಾವ ಇದ್ದರೂ ಈ ಬೆಳವಣಿಗೆ ಆಗಿದೆ. ಬಿಎಸ್​ಇ ಸೆನ್ಸೆಕ್ಸ್ 776.50 ಪಾಯಿಂಟ್ಸ್ ಅಥವಾ ಶೇ 1.35ರಷ್ಟು ಮೇಲೇರಿ 58,461.29 ಪಾಯಿಂಟ್ಸ್​ನೊಂದಿಗೆ ದಿನಾಂತ್ಯವನ್ನು ಕಂಡಿದ್ದರೆ, ನಿಫ್ಟಿ 234.80 ಪಾಯಿಂಟ್ಸ್ ಅಥವಾ ಶೇ 1.37ರಷ್ಟು ಹೆಚ್ಚಳದೊಂದಿಗೆ 17,401.70 ಪಾಯಿಂಟ್ಸ್​ನೊಂದಿಗೆ ವ್ಯವಹಾರವನ್ನು ಚುಕ್ತಾ ಮಾಡಿದೆ. ಇಂದಿನ ವಹಿವಾಟಿನಲ್ಲಿ “ಬುಲ್​ಗಳು” ಮೇಲುಗೈ ಸಾಧಿಸಿದರು. ಮಧ್ಯಾಹ್ನದ ವಹಿವಾಟಿನಲ್ಲಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕವು ಶೇ 1ರಷ್ಟು ಏರಿಕೆ ಕಂಡಿತು. ಸೂಚ್ಯಂಕಗಳ ಏರಿಳಿತ ಇಂದು ಸ್ವಲ್ಪ ಮಟ್ಟಿಗೆ ತಣ್ಣಗಾದಂತೆ ಕಂಡಿತು.

ಎಲ್ಲ ವಲಯಗಳಲ್ಲೂ ನಿರ್ದಿಷ್ಟ ಸ್ಟಾಕ್​ಗಳಲ್ಲಿ ಚಟುವಟಿಕೆ ಕಂಡುಬಂತು. ಜಿಡಿಪಿ ಮತ್ತು ಜಿಎಸ್​ಟಿ ಡೇಟಾ ಹಾಗೂ ಇಂಧನ ಬೆಲೆಯಲ್ಲಿನ ಇಳಿಕೆ ಇವೆಲ್ಲ ಅಂಶವೂ ಕೊಡುಗೆ ನೀಡಿವೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಷೇರುಗಳ ಸಂಖ್ಯೆಯ ದೃಷ್ಟಿಯಿಂದ ಏರಿಕೆ ಮತ್ತು ಇಳಿಕೆಯನ್ನು ಗಮನಿಸಿದರೆ ಚೇತರಿಕೆ ಕಂಡುಬರುತ್ತಿದೆ. ಬಹುತೇಕ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯ ಕಂಡಿವೆ. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಸೇರ್ಪಡೆ ಮಾಡಿವೆ. ನಿಫ್ಟಿ ಐಟಿ, ಲೋಹ, ಎನರ್ಜಿ ಮತ್ತು ವಾಹನ ಸೂಚ್ಯಂಕಗಳು ಶೇ 1ರಿಂದ 2ರಷ್ಟು ಏರಿಕೆಯನ್ನು ಕಂಡಿವೆ. ಬಿಎಸ್​ಇಯಲ್ಲಿ ವಾಹನ, ಎಫ್​ಎಂಸಿಜಿ, ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ, ವಿದ್ಯುತ್, ರಿಯಾಲ್ಟಿ ಮತ್ತು ಲೋಹದ ಸೂಚ್ಯಂಕಗಳು ಶೇ 2ರ ತನಕ ಏರಿಕೆ ದಾಖಲಿಸಿದೆ.

ವೈಯಕ್ತಿಕ ಸ್ಟಾಕ್​ಗಳನ್ನು ನೋಡುವುದಾದರೆ ಜಿಎಂಆರ್​ ಇನ್​ಫ್ರಾ, ಆರ್ತಿ ಇಂಡಸ್ಟ್ರೀಸ್ ಮತ್ತು ಎಂಸಿಎಕ್ಸ್​ ಇಂಡಿಯಾ ಶೇ 200ಕ್ಕೂ ಹೆಚ್ಚು ವಾಲ್ಯೂಮ್ ಜಾಸ್ತಿ ಆಗಿದೆ. ಪವರ್​ಗ್ರಿಡ್​ ಕಾರ್ಪೊರೇಷನ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಟೊರೊಂಟೊ ಪವರ್​ ಸೇರಿದಂತೆ 150ಕ್ಕೂ ಹೆಚ್ಚು ಸ್ಟಾಕ್​ಗಳು ಬಿಎಸ್​ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಅದಾನಿ ಪೋರ್ಟ್ಸ್ ಶೇ 4.40
ಎಚ್​ಡಿಎಫ್​ಸಿ ಶೇ 3.85
ಪವರ್​ಗ್ರಿಡ್​ ಕಾರ್ಪೊರೇಷನ್ ಶೇ 3.52
ಸನ್​ ಫಾರ್ಮಾ ಶೇ 2.80
ಟಾಟಾ ಸ್ಟೀಲ್ ಶೇ 2.76

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಸಿಪ್ಲಾ ಶೇ -0.74
ಐಸಿಐಸಿಐ ಬ್ಯಾಂಕ್ ಶೇ -0.73
ಆಕ್ಸಿಸ್ ಬ್ಯಾಂಕ್ ಶೇ -0.52

ಇದನ್ನೂ ಓದಿ: Multibagger: ಈ ಷೇರಿನ ಮೇಲೆ ಹೂಡಿಕೆ ಮಾಡಿದ್ದ 1 ಲಕ್ಷ ರೂಪಾಯಿ 8 ತಿಂಗಳಲ್ಲಿ 71 ಲಕ್ಷ ರೂಪಾಯಿ