Bank strike: ಸಾರ್ವಜನಿಕ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಡಿ. 16, 17ಕ್ಕೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ
ಸಾರ್ವಜನಿಕ ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಡಿಸೆಂಬರ್ 16 ಹಾಗೂ 17ರಂದು ರಾಷ್ಟ್ರಮಟ್ಟದ ಬ್ಯಾಂಕ್ ಮುಷ್ಕರವನ್ನು ಕರೆದಿದೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಯೋಜನೆಯನ್ನು ವಿರೋಧಿಸಿ ಒಂಬತ್ತು ಒಕ್ಕೂಟಗಳ ಸಂಸ್ಥೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಡಿಸೆಂಬರ್ 16 ಮತ್ತು 17ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಅನ್ನು ಪರಿಚಯಿಸುತ್ತದೆ. ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವುದು, ಬ್ಯಾಂಕಿಂಗ್ ಕಂಪೆನಿಗಳ (ಅಂಡರ್‌ಟೇಕಿಂಗ್‌ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಗಳಲ್ಲಿ ತಿದ್ದುಪಡಿಗಳನ್ನು ಮಾಡುವುದು, 1970 ಮತ್ತು 1980 ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರಲ್ಲಿ ಪ್ರಾಸಂಗಿಕ ತಿದ್ದುಪಡಿಗಳನ್ನು ಮಾಡುವುದು ಈ ಮಸೂದೆಯ ಉದ್ದೇಶವಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರ ಬಜೆಟ್ ಮಂಡಿಸುವಾಗ 1.75 ಲಕ್ಷ ಕೋಟಿ ರೂಪಾಯಿ ಗಳಿಸುವ ಹೂಡಿಕೆಯ ಭಾಗವಾಗಿ ಪಿಎಸ್‌ಬಿಗಳ ಖಾಸಗೀಕರಣವನ್ನು ಘೋಷಿಸಿದ್ದರು. ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಸಂಚಾಲಕ ಮಹೇಶ್ ಮಿಶ್ರಾ ಗುರುವಾರ ಮಾತನಾಡಿ, ಸರ್ಕಾರವು ಪ್ರಸಕ್ತ ಸಂಸತ್ತಿನ ಅಧಿವೇಶನದಲ್ಲಿ ಬ್ಯಾಂಕಿಂಗ್ ಸುಧಾರಣಾ ಮಸೂದೆಯನ್ನು ಅಂಗೀಕರಿಸಲು ಬಯಸುತ್ತದೆ, ಇದು ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ. ಶುಕ್ರವಾರದಿಂದ (ಡಿಸೆಂಬರ್ 3) ಪ್ರಾರಂಭವಾಗುವ ಚಳವಳಿಯ ಭಾಗವಾಗಿ ಯುನೈಟೆಡ್ ಫೋರಂ ಈ ಮಸೂದೆಯನ್ನು ವಿರೋಧಿಸಿ ಧರಣಿ ನಡೆಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕ್ ಒಕ್ಕೂಟಗಳು ಉದ್ಯೋಗಿ ಮತ್ತು ಸ್ನೇಹಿ ಬ್ಯಾಂಕಿಂಗ್ ನೀತಿಗಳೊಂದಿಗೆ ದೇಶದ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ನೀತಿಗಳನ್ನು ಬೆಂಬಲಿಸುತ್ತವೆ. ಆದರೆ ಬ್ಯಾಂಕ್‌ಗಳ ಖಾಸಗೀಕರಣವಲ್ಲ ಎಂದು ಮಿಶ್ರಾ ಹೇಳಿದ್ದಾರೆ. ಯುನೈಟೆಡ್ ಫೋರಂನಿಂದ ಮುಷ್ಕರ ಸಂಬಂಧ ಭಾರತೀಯ ಬ್ಯಾಂಕ್‌ಗಳ ಸಂಘಕ್ಕೆ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: National Monetisation Pipeline: ರಾಷ್ಟ್ರೀಯ ನಗದೀಕರಣ ಪೈಪ್ಲೈನ್ ಏನಿದು? ಆ 6 ಲಕ್ಷ ಕೋಟಿ ರೂ. ಬಗ್ಗೆ ಇಲ್ಲಿದೆ ಮಾಹಿತಿ