ದೇಶೀಯ ಕಚ್ಚಾ ಅನಿಲ ಉತ್ಪಾದನೆಯಲ್ಲಿ ಇಳಿಕೆ; ಸಿಎನ್​ಜಿ ದರ ಹೆಚ್ಚಳ ಸಾಧ್ಯತೆ

CNG prices may go higher: ದೇಶೀಯವಾಗಿ ಕಚ್ಚಾ ನೈಸರ್ಗಿಕ ಅನಿಲದ ಉತ್ಪಾದನೆ ಕಡಿಮೆಗೊಳಿಸಲಾಗುತ್ತಿದ್ದು, ಇದರಿಂದ ಸಿಎನ್​ಜಿ ರೀಟೇಲ್ ಬೆಲೆ ಹೆಚ್ಚಳ ಸಾಧ್ಯತೆ ಇದೆ. ಸಿಎನ್​ಜಿ ರೀಟೇಲ್ ಮಾರಾಟಗಾರರಿಗೆ ಸರಬರಾಜಾಗುವ ಗ್ಯಾಸ್ ಶೇ. 20ರಷ್ಟು ಕಡಿಮೆ ಆಗಿದೆ. ಇದನ್ನು ಸರಿದೂಗಿಸಲು ಎಲ್​ಎನ್​ಜಿಯನ್ನು ಆಮದು ಮಾಡಲಾಗುತ್ತಿದೆ. ಹೀಗಾಗಿ, ಸಿಎನ್​​ಜಿ ಬೆಲೆ ಶೇ. 4-6ರಷ್ಟು ಏರಿಕೆ ಆಗಬಹುದು.

ದೇಶೀಯ ಕಚ್ಚಾ ಅನಿಲ ಉತ್ಪಾದನೆಯಲ್ಲಿ ಇಳಿಕೆ; ಸಿಎನ್​ಜಿ ದರ ಹೆಚ್ಚಳ ಸಾಧ್ಯತೆ
ಸಿಎನ್​ಜಿ

Updated on: Oct 20, 2024 | 12:43 PM

ನವದೆಹಲಿ, ಅಕ್ಟೋಬರ್ 20: ಸಿಎನ್​​ಜಿ ಗ್ಯಾಸ್ ಬೆಲೆ ಒಂದು ಕಿಲೋಗೆ 4ರಿಂದ 6 ರೂನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ದೇಶೀಯವಾಗಿ ಉತ್ಪಾದನೆಯಾಗುವ ಅಗ್ಗದ ನೈಸರ್ಗಿಕ ಅನಿಲದ ಸರಬರಾಜು ಕಡಿಮೆಗೊಳಿಸಲಾಗಿದೆ. ನಗರದ ರೀಟೇಲ್ ಮಾರಾಟಗಾರರಿಗೆ ಸಿಎನ್​ಜಿ ಸರಬರಾಜನ್ನು ಶೇ. 20ರವರೆಗೂ ಕಡಿಮೆಗೊಳಿಸಿದೆ. ಒಂದು ವೇಳೆ ಸರ್ಕಾರ ಅಬಕಾರಿ ಸುಂಕವನ್ನು ಕಡಿಮೆಗೊಳಿಸದೇ ಹೋದಲ್ಲಿ, ಸಿಎನ್​ಜಿ ಬೆಲೆ ಶೇ. 4ರಿಂದ 6ರಷ್ಟು ಹೆಚ್ಚುವ ನಿರೀಕ್ಷೆ ಇದೆ.

ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ವಿವಿಧ ಭಾಗಗಳಿಂದ ನೆಲದ ಕೆಳಗಿಂದ ನೈಸರ್ಗಿಕ ಅನಿಲ ಸಂಪನ್ಮೂಲ ಸಿಗುತ್ತದೆ. ಇದನ್ನು ಸಿಎನ್​ಜಿಯಾಗಿ ಪರಿವರ್ತಿಸಿ, ಅದನ್ನು ವಾಹನಗಳು ಹಾಗೂ ಗೃಹ ಅಡುಗೆ ಅನಿಲವಾಗಿ (Piped gas) ಬಳಕೆಗೆ ಸರಬರಾಜು ಮಾಡಲಾಗುತ್ತದೆ.

ಇದನ್ನೂ ಓದಿ: ಇನ್ಷೂರೆನ್ಸ್ ಪ್ರೀಮಿಯಮ್​ಗಳಿಗೆ ತೆರಿಗೆ ವಿನಾಯಿತಿ; ಸೈಕಲ್, ನೋಟ್​ಬುಕ್​ಗೆ ಜಿಎಸ್​ಟಿ ಇಳಿಕೆ; ದುಬಾರಿ ವಾಚು, ಶೂಗಳಿಗೆ ತೆರಿಗೆ ಹೆಚ್ಚಳಕ್ಕೆ ಪ್ರಸ್ತಾಪ

ನೈಸರ್ಗಿಕ ಅನಿಲದ ಲಭ್ಯತೆ ಕಡಿಮೆ ಆಗುತ್ತಿರುವುದರಿಂದ ಕಚ್ಛಾ ಅನಿಲದ ಉತ್ಪಾದನೆ ಪ್ರತೀ ವರ್ಷ ಶೇ. 5ರಷ್ಟು ಕಡಿಮೆ ಆಗುತ್ತಿದೆ. ಇದರಿಂದ ನಗರದ ಗ್ಯಾಸ್ ರೀಟೇಲ್ ಮಾರಾಟಗಾರರಿಗೆ ಸರಬರಾಜು ಕಡಿಮೆ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದಲ್ಲಿ ಉತ್ಪಾದನೆಯಾಗುವ ಕಚ್ಚಾ ಅನಿಲವು 2023ರ ಮೇ ತಿಂಗಳಲ್ಲಿ ಭಾರತದ ಶೇ. 90ರಷ್ಟು ಸಿಎನ್​ಜಿ ಅಗತ್ಯವನ್ನು ಪೂರೈಸುತ್ತಿತ್ತು. ಸೆಪ್ಟೆಂಬರ್​ನಲ್ಲಿ ದೇಶಾದ್ಯಂತ ಅಗತ್ಯ ಇರುವ ಸಿಎನ್​ಜಿಯಲ್ಲಿ ಶೇ. 67.74ರಷ್ಟನ್ನು ಮಾತ್ರ ಪೂರೈಸಲು ಆಗುತ್ತಿತ್ತು. ಅಕ್ಟೋಬರ್ 16ರಿಂದ ಇದು ಶೇ. 50.75ಕ್ಕೆ ಇಳಿದಿದೆ.

ಈ ಕೊರತೆ ನೀಗಿಸಲು ಗ್ಯಾಸ್ ರೀಟೇಲ್ ಕಂಪನಿಗಳು ದುಬಾರಿಯಾದ ಎಲ್​ಎನ್​ಜಿ ಅನಿಲವನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ, ಸಿಎನ್​ಜಿ ಬೆಲೆ ಒಂದು ಕಿಲೋಗೆ ಶೇ. 4ರಿಂದ 6ರಷ್ಟು ಹೆಚ್ಚಳ ಮಾಡುವುದು ಅನಿವಾರ್ಯವಾಗಬಹುದು.

ದೇಶೀಯವಾಗಿ ಉತ್ಪಾದನೆಯಾಗುವ ಸಿಎನ್​ಜಿ ಅನಿಲದ ಬೆಲೆ ಒಂದು ಎಂಎಂಬಿಟಿಯುಗೆ 6.50 ಡಾಲರ್ ಆಗುತ್ತದೆ. ಆದರೆ, ಆಮದಿತ ಎಲ್​ಎನ್​ಜಿ ಬೆಲೆ 11-12 ಡಾಲರ್ ಆಗುತ್ತದೆ. ಹೆಚ್ಚೂಕಡಿಮೆ ಎರಡು ಪಟ್ಟು ದರ ವ್ಯತ್ಯಾಸ ಆಗುತ್ತದೆ.

ಇದನ್ನೂ ಓದಿ: ಗಮನಿಸಿ, ಮುಂಗಡ ರೈಲು ಟಿಕೆಟ್ ಬುಕಿಂಗ್ ಅವಧಿ ಈಗ 60 ದಿನ ಮಾತ್ರ; ಮೂರು ತಿಂಗಳ ಮುಂಚೆ ಬುಕಿಂಗ್ ಅಸಾಧ್ಯ

ಸಿಎನ್​ಜಿ ರೀಟೇಲ್ ಮಾರಾಟಗಾರರು ದರ ಹೆಚ್ಚಿಸಲೇಬೇಕಾಗುತ್ತದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಾಕಬಾರದು ಎಂಬ ಉದ್ದೇಶ ಸರ್ಕಾರಕ್ಕೆ ಇದ್ದರೆ ಸಿಎನ್​ಜಿ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಬೇಕಾಗಬಹುದು. ಸದ್ಯ ಕೇಂದ್ರ ಸರ್ಕಾರ ಸಿಎನ್​ಜಿ ಮೇಲೆ ಶೇ. 14ರಷ್ಟು ಎಕ್ಸೈಸ್ ಡ್ಯೂಟಿ ವಿಧಿಸುತ್ತದೆ. ಅಂದರೆ, ಒಂದು ಕಿಲೋ ಸಿಎನ್​ಜಿಗೆ 14-15ರೂನಷ್ಟು ಅಬಕಾರಿ ಸುಂಕ ಇರುತ್ತದೆ. ಸರ್ಕಾರ ಈ ಅಬಕಾರಿ ಸುಂಕವನ್ನು ಶೇ. 10ಕ್ಕೆ ಇಳಿಸಿದರೆ ಸಿಎನ್​ಜಿ ಬೆಲೆ ಹೆಚ್ಚಳ ತಡೆಯಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us