ನೂರು ಕೋಟಿ ಟನ್ ಮೈಲಿಗಲ್ಲು ಮುಟ್ಟಿದ ಕಲ್ಲಿದ್ದಲು ಉತ್ಪಾದನೆ; ಚೀನಾ ನಂತರ ಭಾರತದಲ್ಲೇ ಹೆಚ್ಚು

|

Updated on: Mar 21, 2025 | 2:31 PM

Coal production in India: ಅಗಾಧ ವಿದ್ಯುತ್ ಬೇಡಿಕೆ ಪೂರೈಸಲು ಸುಲಭ ಹಾಗೂ ಅಗ್ಗದ ಕಚ್ಚಾ ಸಾಮಗ್ರಿಯಾಗಿರುವ ಕಲ್ಲಿದ್ದಲು ಉತ್ಪಾದನೆ ಭಾರತದಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಒಂದು ವರ್ಷದಲ್ಲಿ ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಮೊದಲ ಬಾರಿಗೆ ಬಿಲಿಯನ್ ಟನ್ ಮೈಲಿಗಲ್ಲು ಮುಟ್ಟಿದೆ. ಚೀನಾ ಬಿಟ್ಟರೆ ಭಾರತ ಮಾತ್ರವೇ ಇಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದನೆ ಮಾಡುತ್ತಿರುವುದು.

ನೂರು ಕೋಟಿ ಟನ್ ಮೈಲಿಗಲ್ಲು ಮುಟ್ಟಿದ ಕಲ್ಲಿದ್ದಲು ಉತ್ಪಾದನೆ; ಚೀನಾ ನಂತರ ಭಾರತದಲ್ಲೇ ಹೆಚ್ಚು
ಕಲ್ಲಿದ್ದಲು ಗಣಿ
Follow us on

ನವದೆಹಲಿ, ಮಾರ್ಚ್ 21: ಏರುತ್ತಿರುವ ಜನಸಂಖ್ಯೆ ಮತ್ತು ಅಗಾಧ ಕೈಗಾರಿಕೆಗಳಿಗೆ ಅವಶ್ಯಕವಾದ ವಿದ್ಯುತ್ ಅನ್ನು ಪೂರೈಸಲು ಕಲ್ಲಿದ್ದಲು ಈಗಲೂ ಅಗ್ಗದ ಆಯ್ಕೆಯಾಗಿದೆ. ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ (Coal production) ಗಣನೀಯವಾಗಿ ಹೆಚ್ಚುತ್ತಿದೆ. ಈಗ ಮೊದಲ ಬಾರಿಗೆ ಇಲ್ಲಿ ಕಲ್ಲಿದ್ದಲು ಉತ್ಪಾದನೆ ಒಂದು ಬಿಲಿಯನ್ ಟನ್, ಅಥವಾ ನೂರು ಕೋಟಿ ಟನ್​​ಗಳ ಮೈಲಿಗಲ್ಲು ಮುಟ್ಟಿದೆ. ಚೀನಾ ಬಿಟ್ಟರೆ ಬೇರೆ ಯಾವ ದೇಶವೂ ಕೂಡ ಈ ಮೈಲಿಗಲ್ಲು ತಲುಪಿಲ್ಲ. ಚೀನಾ ದೇಶದ ವಾರ್ಷಿಕ ಕಲ್ಲಿದ್ದಲು ಉತ್ಪಾದನೆ 436 ಕೋಟಿ ಟನ್​​ಗಳಿಷ್ಟಿದೆ.

ಭಾರತ ಕಳೆದ 10 ವರ್ಷಗಳಿಂದ ಕಲ್ಲಿದ್ದಲು ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿದೆ. 2014-15ರಲ್ಲಿ 609 ಮೆಟ್ರಿಕ್ ಟನ್​​ಗಳಷ್ಟು ಕೋಲ್ ಪ್ರೊಡಕ್ಷನ್ ಆಗುತ್ತಿತ್ತು. ಈಗ ಅದು 1,000 ಮೆಟ್ರಿಕ್ ಟನ್ ಮುಟ್ಟಿದೆ.

ಇದನ್ನೂ ಓದಿ
ಮರುಗಾಡಿನಲ್ಲಿ ಸೇಬು ಬೆಳೆದ ರಾಜಸ್ಥಾನದ ರೈತರು
ಭಾರತ ಸರ್ಕಾರ ವಿರುದ್ಧ ಎಕ್ಸ್​ನಿಂದ ಕಾನೂನು ಮೊಕದ್ದಮೆ
ಕರ್ನಾಟಕದಲ್ಲಿ ಪೆಟ್ರೋಲ್​​ಗೆ ಕೇಂದ್ರ, ರಾಜ್ಯದ ತೆರಿಗೆಗಳೆಷ್ಟು?
ರಾಜಸ್ಥಾನದಲ್ಲಿ 700 ಮೆ.ವ್ಯಾ. ಅಣು ವಿದ್ಯುತ್ ಸ್ಥಾವರ ಆರಂಭ

ಚೀನಾ 4,362 ಮೆಟ್ರಿಕ್ ಟನ್​​ಗಳೊಂದಿಗೆ ಅಗ್ರಗಣ್ಯ ಕಲ್ಲಿದ್ದಲು ಉತ್ಪಾದಕ ದೇಶವಾಗಿದೆ. ಭಾರತ ಎರಡನೇ ಸ್ಥಾನದಲ್ಲಿದ್ದರೆ ಅಮೆರಿಕ 781 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದಿಸುತ್ತದೆ. ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾ ದೇಶಗಳು ಟಾಪ್-5ನಲ್ಲಿರುವ ಇತರ ಎರಡು ದೇಶಗಳಾಗಿವೆ.

ಇದನ್ನೂ ಓದಿ: ಕಾಶ್ಮೀರ, ಹಿಮಾಚಲ ಅಲ್ಲ, ಮರಳುಗಾಡಿನಲ್ಲಿ ಸೇಬು ಬೆಳೆದು ಸೈ ಎನಿಸಿದ ರಾಜಸ್ಥಾನದ ರೈತರು

ಎಕ್ಸ್​​​ನಲ್ಲಿ ಪ್ರಕಟಿಸಿದ ಸಚಿವ ರೆಡ್ಡಿ

ಭಾರತ 1,000 ಮೆಟ್ರಿಕ್ ಟನ್ ಅಥವಾ ಒಂದು ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯ ಮೈಲಿಗಲ್ಲು ಮುಟ್ಟಿದ ಸಂಗತಿಯನ್ನು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಳ ಸಚಿವ ಜಿ ಕಿಶನ್ ರೆಡ್ಡಿ ತಮ್ಮ ಎಕ್ಸ್​​ನಲ್ಲಿ ಪ್ರಕಟಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಜಾಗತಿಕ ವಿದ್ಯುತ್ ಕ್ಷೇತ್ರದಲ್ಲಿ ಮುಂಚೂಣಿಗೆ ಬರುತ್ತಿದೆ ಎಂದು ಹೇಳಿದ್ದಾರೆ. ಸಚಿವರು ಕಲ್ಲಿದ್ದಲು ವಲಯದ ಕಾರ್ಮಿಕರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಹೇಳಿದ್ದಾರೆ.

‘ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಪರಿಣಾಮಕಾರಿ ವಿಧಾನಗಳಿಂದ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸುರುವುದು ಮಾತ್ರವಲ್ಲ, ಜವಾಬ್ದಾರಿಯುತವಾಗಿಯೂ ಗಣಿಗಾರಿಕೆ ನಡೆಸಲಾಗುತ್ತಿದೆ. ಹೆಚ್ಚುತ್ತಿರುವ ನಮ್ಮ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಮತ್ತು ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀಡಲು ಹಾಗೂ ಪ್ರತಿಯೊಬ್ಬ ಭಾರತೀಯನಿಗೂ ಉತ್ತಮ ಭವಿಷ್ಯ ಸಾಕಾರಗೊಳಿಸಲು ಈ ಸಾಧನೆಯು ಮತ್ತಷ್ಟು ಉತ್ಸಾಹ ತುಂಬಲಿದೆ,’ ಎಂದು ಸಚಿವ ಕಿಶನ್ ರೆಡ್ಡಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಿಶನ್ ರೆಡ್ಡಿ ಅವರ ಪೋಸ್ಟ್​​​ಗೆ ಪ್ರತಿಕ್ರಿಯಿಸಿ, ಭಾರತಕ್ಕಿದು ಹೆಮ್ಮೆಯ ಕ್ಷಣ ಎಂದಿದ್ದಾರೆ.

ಶೇ. 75ರಷ್ಟು ವಿದ್ಯುತ್​​ಗೆ ಕಲ್ಲಿದ್ದಲು ಶಕ್ತಿ

ಭಾರತದಲ್ಲಿ ವಿದ್ಯುತ್ ಬೇಡಿಕೆ ಪೂರೈಸಲು ವಿವಿಧ ಶಕ್ತಿ ಮೂಲಗಳನ್ನು ಬಳಸಲಾಗುತ್ತಿದೆ. ಜಲವಿದ್ಯುತ್, ಸೌರಶಕ್ತಿ, ವಾಯುಶಕ್ತಿಯ ಬಳಕೆ ಇದ್ದರೂ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಈಗಲೂ ಪ್ರಮುಖ ಶಕ್ತಿ ಮೂಲವಾಗಿದೆ. ಶೇ. 75ರಷ್ಟು ವಿದ್ಯುತ್ ಉತ್ಪಾದನೆಯು ಕಲ್ಲಿದ್ದಲು ಮೂಲಕವೇ ಆಗುತ್ತಿದೆ. ಇದನ್ನು 2030ರಷ್ಟರಲ್ಲಿ ಶೇ. 64ಕ್ಕೆ ಇಳಿಸುವುದು ಸರ್ಕಾರದ ಗುರಿಯಾಗಿದೆ.

ಇದನ್ನೂ ಓದಿ: ಯುಪಿಐ, ರುಪೇ ಕಾರ್ಡ್ ಪಾವತಿಗೆ ಸರ್ಕಾರದ ಸಬ್ಸಿಡಿಯಲ್ಲಿ ಖೋತಾ; ಪೇಮೆಂಟ್ ಉದ್ಯಮ ಕಂಗಾಲು

ಭಾರತದಲ್ಲಿ ಜಾರ್ಖಂಡ್​​ನಲ್ಲಿ ಅತಿಹೆಚ್ಚು ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತದೆ. ಒಡಿಶಾ, ಛತ್ತೀಸ್​​ಗಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಕಲ್ಲಿದ್ದಲು ನಿಕ್ಷೇಪಗಳಿವೆ. ದಕ್ಷಿಣ ಭಾರತದಲ್ಲಿ ತೆಲಂಗಾಣ ರಾಜ್ಯದಲ್ಲಿ ಮಾತ್ರವೇ ಒಂದು ಮೈನಿಂಗ್ ನಡೆಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:30 pm, Fri, 21 March 25