ಕ್ರೀಮ್ ಬನ್ ಮೂಲಕ ಹಣಕಾಸು ಸಚಿವೆಗೆ ಜಿಎಸ್​ಟಿ ಟಾಂಟ್ ಕೊಟ್ಟ ಹೋಟೆಲ್ ಉದ್ಯಮಿ; ನಿರ್ಮಲಾ ಕೊಟ್ಟ ಉತ್ತರ ಇದು

|

Updated on: Sep 13, 2024 | 3:38 PM

Cream Bun and Nirmala Sitharaman: ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೋಟೆಲ್ ಉದ್ಯಮಿಯೊಬ್ಬರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟಾಂಟ್ ಕೊಟ್ಟ ಘಟನೆ ನಡೆದಿದೆ. ಬನ್​ಗೆ ಜಿಎಸ್​ಟಿ ಇಲ್ಲ, ಆದರೆ ಬನ್​ಗೆ ಕ್ರೀಮ್ ಹಾಕಿದ್ರೆ ಶೇ. 12 ಜಿಎಸ್​ಟಿ ಇರುತ್ತೆ. ಹೋಟೆಲ್ ಗ್ರಾಹಕರು ಬನ್ ಬೇರೆ, ಕ್ರೀಮ್ ಬೇರೆ ಕೊಡಿ ಎನ್ನುತ್ತಿದ್ದಾರಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರೆದುರು ಡಿ ಶ್ರೀನಿವಾಸನ್ ತಮಾಷೆಯ ಪ್ರಸಂಗ ವಿವರಿಸಿದರು.

ಕ್ರೀಮ್ ಬನ್ ಮೂಲಕ ಹಣಕಾಸು ಸಚಿವೆಗೆ ಜಿಎಸ್​ಟಿ ಟಾಂಟ್ ಕೊಟ್ಟ ಹೋಟೆಲ್ ಉದ್ಯಮಿ; ನಿರ್ಮಲಾ ಕೊಟ್ಟ ಉತ್ತರ ಇದು
ನಿರ್ಮಲಾ ಸೀತಾರಾಮನ್
Follow us on

ಕೊಯಮತ್ತೂರು, ಸೆಪ್ಟೆಂಬರ್ 13: ಬಜೆಟ್, ತೆರಿಗೆ ಮತ್ತು ನಿರ್ಮಲಾ ಸೀತಾರಾಮನ್ ಸದ್ಯ ಒಳ್ಳೆಯ ಟ್ರೋಲಿಂಗ್ ಸರಕಾಗಿವೆ. ಸಿಕ್ಕಿದ್ದಕ್ಕೆಲ್ಲಾ ಟ್ಯಾಕ್ಸ್ ಹಾಕಲಾಗುತ್ತಿದೆ ಎನ್ನುವ ಮೀಮ್ಸ್​​ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೇ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತಿಯಲ್ಲೇ ಹೋಟೆಲ್ ಉದ್ಯಮಿಯೊಬ್ಬರು ಜಿಎಸ್​ಟಿಯನ್ನು ಟ್ರೋಲ್ ಮಾಡಿದ ಘಟನೆ ನಡೆದಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಹೋಟೆಲ್ ಉದ್ಯಮಿ ಮತ್ತು ಕೊಯಮತ್ತೂರು ಜಿಲ್ಲಾ ಹೋಟೆಲ್ ಉದ್ಯಮಿಗಳ ಸಂಘದ ಅಧ್ಯಕ್ಷರೂ ಆಗಿರುವ ಡಿ ಶ್ರೀನಿವಾಸನ್ ಅವರು ಜಿಎಸ್​ಟಿ ತೆರಿಗೆಯ ಸಂಕೀರ್ಣತೆ ತಿಳಿಸಲು ಕ್ರೀಮ್ ಬನ್ ಉದಾಹರಣೆ ನೀಡಿದರು.

‘ಮೇಡಮ್, ಬನ್​ಗೆ ಜಿಎಸ್​ಟಿ ಇಲ್ಲ. ಆದರೆ, ಅದೇ ಬನ್​ಗೆ ಕ್ರೀಮ್ ಹಾಕಿ ಕ್ರೀಮ್ ಬನ್ ಆಗಿ ಮಾಡಿದರೆ ಅದಕ್ಕೆ ಶೇ. 12ರಷ್ಟು ಜಿಎಸ್​ಟಿ ಆಗುತ್ತದೆ. ಗ್ರಾಹಕರು ನಮಗೆ ಬನ್ ಮತ್ತು ಕ್ರೀಮ್ ಸಪರೇಟ್ ಆಗಿ ಕೊಡಿ, ನಾವೇ ಕ್ರೀಮ್ ಬನ್ ಮಾಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ’ ಎಂದು ಶ್ರೀನಿವಾಸನ್ ಈ ವೇದಿಕೆಯಲ್ಲಿ ಹೇಳಿದ್ದರು. ಅವರ ಮಾತಿಗೆ ಸಭಾಂಗಣದಲ್ಲಿದ್ದವರೆಲ್ಲರೂ ಘೊಳ್ಳೆಂದು ನಕ್ಕರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಅಲ್ಲಿಯೇ ಇದ್ದರು.

ಇದನ್ನೂ ಓದಿ: Maharatna PSU: ನವರತ್ನದಿಂದ ಮಹಾರತ್ನ ಸ್ಥಾನಮಾನ ಪಡೆಯಲಿರುವ ಬೆಂಗಳೂರಿನ ಎಚ್​ಎಎಲ್

ವಿವಿಧ ಜಿಎಸ್​ಟಿ ದರಗಳು ಹೋಟೆಲ್ ಉದ್ಯಮಿಗಳಿಗೆ ತಲೆನೋವಾಗಿದೆ ಎನ್ನುವ ಸಂಗತಿಯನ್ನು ವಿವರಿಸುವ ಪ್ರಯತ್ನ ಡಿ ಶ್ರೀನಿವಾಸನ್ ಅವರಿಂದಾಯಿತು. ಹೋಟೆಲ್​ಗೆ ಬರುವ ಕುಟುಂಬಗಳು ವಿವಿಧ ಆಹಾರವನ್ನು ಆರ್ಡರ್ ಮಾಡಿದಾಗ ಎಷ್ಟು ತೆರಿಗೆ ವಿಧಿಸಬೇಕು ಎಂದು ಲೆಕ್ಕ ಹಾಕಲು ಕಂಪ್ಯೂಟರ್ ಸಿಸ್ಟಂಗೂ ಕಷ್ಟವಾಗುತ್ತಿದೆ ಎಂದು ತಮಾಷೆ ಮಾಡಿದ ಶ್ರೀನಿವಾಸನ್, ಎಲ್ಲಾ ಆಹಾರವಸ್ತುಗಳಿಗೂ ಸಮಾನ ಜಿಎಸ್​ಟಿ ತೆರಿಗೆ ವಿಧಿಸಬೇಕೆಂದು ಮನವಿ ಮಾಡಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಮಾತಿಗೆ ಕೆಲ ಹೊತ್ತಿನ ಬಳಿಕ ಪ್ರತಿಕ್ರಿಯಿಸಿದರು. ‘ಬಿಸಿನೆಸ್​ನಲ್ಲಿ ಬಹಳ ಅನುಭವ ಇರುವ ಹಿರಿಯ ವ್ಯಕ್ತಿ ಅವರು. ಜಿಎಸ್​ಟಿ ಮಂಡಳಿ ಎಲ್ಲವನ್ನೂ ಗಮನಿಸುತ್ತಿರುತ್ತದೆ. ಇಂಥ ತಮಾಷೆಯ ಮಾತುಗಳು ಜಿಎಸ್​ಟಿಯನ್ನು ಪ್ರಬಲವಾಗಿ ವಿರೋಧಿಸುವವರನ್ನು ಪ್ರಚೋದನೆಗೊಳಿಸುತ್ತದೆ’ ಎಂದು ಗಂಭೀರವಾಗಿ ತಿರುಗೇಟು ನೀಡಿದರು.

ಇದನ್ನೂ ಓದಿ: ಟಾಟಾ ಕನ್ಸಲ್ಟೆನ್ಸಿಯ 30,000 ಉದ್ಯೋಗಿಗಳಿಗೆ ಐಟಿ ಇಲಾಖೆಯಿಂದ ನೋಟೀಸ್; ತಂತ್ರಾಂಶ ದೋಷ ಕಾರಣ?

‘ಅವರು ಉಪ್ಪಿನಕಾಯಿ ಆಂಟಿಯನ್ನು ಪ್ರಶ್ನಿಸುತ್ತಿದ್ದರೆ ಹೇಗೆ ಪ್ರತಿಯೊಬ್ಬರೂ ನಗುತ್ತಿದ್ದಾರೆ ನೋಡಿ. ಆಕೆಗೆ ಏನಾದರೂ ಗೊತ್ತಾ. ನನಗೇನೂ ಬೇಸರವಾಗುವುದಿಲ್ಲ. ಜಿಎಸ್​ಟಿ ಬಹಳ ಸುಗಮವಾಗಿ ನಡೆಯಲು ಮತ್ತು ಜನರಿಗೆ ಹೊರೆಯಾಗದಂತಾಗಲು ಎಲ್ಲಾ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಜಿಎಸ್​ಟಿ ಮಂಡಳಿಯ ಎಲ್ಲಾ ಸಚಿವರೂ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ