Collateral free loan: ಪೇಪಾಲ್- ಫ್ಲೆಕ್ಸಿಲೋನ್ಸ್ ಸೇರಿ ನೀಡಲಿವೆ 50,000 ರೂ.ನಿಂದ 1,00,00,000 ತನಕ ಟರ್ಮ್ ಸಾಲ

|

Updated on: Apr 06, 2021 | 4:30 PM

ಕೋವಿಡ್ - 19 ಬಿಕ್ಕಟ್ಟಿನಿಂದ ದಣಿದಿರುವ ಉದ್ಯಮ, ಉದ್ಯಮಿಗಳು ಹಾಗೂ ಫ್ರೀಲ್ಯಾನ್ಸರ್​ಗಳಿಗೆ ಯಾವುದೇ ಅಡಮಾನ ಇಲ್ಲದ ಸಾಲ ನೀಡಲು ಪೇಪಾಲ್ ಹಾಗೂ ಫ್ಲೆಕ್ಸಿಲೋನ್ಸ್ ಸಹಭಾಗಿತ್ವ ವಹಿಸಿವೆ. ಈ ಮೂಲಕ ರೂ. 50,000ದಿಂದ ರೂ. 1 ಕೋಟಿ ತನಕ ಸಾಲ ದೊರೆಯುತ್ತದೆ.

Collateral free loan: ಪೇಪಾಲ್- ಫ್ಲೆಕ್ಸಿಲೋನ್ಸ್ ಸೇರಿ ನೀಡಲಿವೆ 50,000 ರೂ.ನಿಂದ 1,00,00,000 ತನಕ ಟರ್ಮ್ ಸಾಲ
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಫ್ಲೆಕ್ಸಿಲೋನ್ಸ್ (FlexiLoans) ಜತೆಗೆ ಸಹಭಾಗಿತ್ವ ವಹಿಸಿರುವ ಪೇಪಾಲ್ (PayPal), ಫ್ರೀಲ್ಯಾನ್ಸರ್​ಗಳು, ಮಹಿಳಾ ಉದ್ಯಮಿಗಳು, ಏಕವ್ಯಕ್ತಿ ಮಾಲೀಕರು ಮತ್ತು ಎಂಎಸ್​ಎಂಇಗಳಿಗೆ ಅಡಮಾನರಹಿತವಾದ (ಕೊಲ್ಯಾಟರಲ್ ಫ್ರೀ) ಉದ್ಯಮ ಸಾಲವನ್ನು ನೀಡಲಿದೆ. ಉದ್ಯಮ ವಿಸ್ತರಣೆಗಾಗಿ ಕಾರ್ಯ ನಿರ್ವಹಣೆ ಬಂಡವಾಳ ಒದಗಿಸುವುದು, ಸರಕು- ವಸ್ತುಗಳ ಖರೀದಿಗೆ ಸಾಲ, ಉದ್ಯಮಕ್ಕೆ ಸಂಬಂಧಿಸಿದ ಇತರ ಖರ್ಚುಗಳಿಗೆ ಎಂಎಸ್​ಎಂಇಗಳಿಗೆ ಸಾಲ ಒದಗಿಸುವ ಗುರಿಯನ್ನು ಪೇಪಾಲ್- ಫ್ಲೆಕ್ಸಿಲೋನ್ಸ್ ಹಾಕಿಕೊಂಡಿವೆ. ಕೋವಿಡ್- 19 ಜಾಗತಿಕ ಬಿಕ್ಕಟ್ಟಿನ ಕಾರಣಕ್ಕೆ ಸಣ್ಣ- ಪುಟ್ಟ ಉದ್ಯಮಗಳು, ಫ್ರೀಲ್ಯಾನ್ಸರ್​ಗಳು ಮತ್ತು ಉದ್ಯಮಿಗಳು ಆರ್ಥಿಕವಾಗಿ ದಣಿದಿದ್ದಾರೆ. ಸದ್ಯಕ್ಕೆ ಸವಾಲಿನಿಂದ ಚೇತರಿಸಿಕೊಂಡು, ಉದ್ಯಮವನ್ನು ಉಳಿಸಿಕೊಳ್ಳುವ ತುರ್ತಿನಲ್ಲಿದ್ದಾರೆ.

ಅಗತ್ಯ ಇರುವವರಿಗೆ ಪೇಪಾಲ್- ಫ್ಲೆಕ್ಸಿಲೋನ್ಸ್ ಸೇರಿ 50,000 ರೂಪಾಯಿಯಿಂದ 1,00,00,000 ತನಕ ಟರ್ಮ್ ಸಾಲವನ್ನು ಒದಗಿಸಲಿವೆ. ಭಾರತದ 1500 ನಗರಗಳಲ್ಲಿ ಈ ರೀತಿ ಸಾಲ ಒದಗಿಸಲಿದ್ದು, ಕನಿಷ್ಠ ಮಟ್ಟದ ದಾಖಲಾತಿಗಳನ್ನು ವರ್ತಕರು ಒದಗಿಸಬೇಕಾಗುತ್ತದೆ. ಸದ್ಯಕ್ಕೆ 10,000 ಪೇಪಾಲ್ ವರ್ತಕರಿಗೆ ಸಾಲವು ಸಿಗುತ್ತಿದೆ.

ಈ ಬಗ್ಗೆ ಪೇಪಾಲ್​​ನ ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದ ಉಪಾಧ್ಯಕ್ಷ ಅನುಪಮ್ ಪಹುಜಾ ಹೇಳಿಕೆಯಲ್ಲಿ ತಿಳಿಸಿರುವ ಪ್ರಕಾರ, ಕೊರೊನಾ ಬಿಕ್ಕಟ್ಟಿನಿಂದ ಭಾರತದಾದ್ಯಂತ ಆರ್ಥಿಕ ಚಟುವಟಿಕೆ ತೀವ್ರವಾಗಿ ಪರಿಣಾಮ ಬೀರಿದೆ. ಈಗ ನಮ್ಮ ಎಂಎಸ್​ಎಂಇ (ಮಧ್ಯಮ, ಸಣ್ಣ ಹಾಗೂ ಕಿರು ಸಂಸ್ಥೆಗಳು), ಫ್ರೀಲ್ಯಾನ್ಸರ್​ಗಳು ತಮ್ಮ ಉದ್ಯಮ ಚಟುವಟಿಕೆಯನ್ನು ತಕ್ಷಣ ಆರಂಭಿಸಲು ಪರಿಹಾರ ಬೇಕಿದೆ. ಸಾಂಪ್ರದಾಯಿಕ ವಿಧಾನದಲ್ಲಿ ಬಂಡವಾಳ ಪಡೆದುಕೊಳ್ಳುವುದು ಸಣ್ಣ ಉದ್ಯಮಗಳಿಗೆ ಸವಾಲಿನ ಸಂಗತಿ. ಫ್ಲೆಕ್ಸಿಲೋನ್ಸ್ ಜತೆಗಿನ ಸಹಭಾಗಿತ್ವದ ಮೂಲಕ ಈಗ ಸಾಲ ಪಡೆಯುವುದಕ್ಕೆ ಇರುವ ಕಂದಕ ಕಡಿಮೆ ಮಾಡಲು ಅನುಕೂಲ ಆಗಲಿದೆ. ಜತೆಗೆ ವೋಕಲ್ ಫಾರ್ ಲೋಕಲ್ ಮತ್ತು ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ವೇಗ ನೀಡುತ್ತದೆ ಎಂದಿದ್ದಾರೆ.

ಅತ್ಯುನ್ನತ ಗುಣಮಟ್ಟದ ಸಾಲದ ಪರಿಹಾರ ಒದಗಿಸುವುದಕ್ಕೆ ಹಾಗೂ ಭಾರತದ ಎಸ್​ಎಂಇ ವಲಯಕ್ಕೆ ಅತ್ಯುತ್ತಮ ಅನುಭವ ಒದಗಿಸಲು ನಾವು ಬದ್ಧರಾಗಿದ್ದೇವೆ. ಈ ಸಹಭಾಗಿತ್ವವು ಮಹತ್ವವಾದ ಹೆಜ್ಜೆಯಾಗಿದೆ. ನಮ್ಮ ಅತ್ಯಾಧುನಿಕ ಡೇಟಾ ಸೈನ್ಸ್ ಮಾದರಿಗಳಿಂದ ಮತ್ತು ಹತ್ತಾರು ಲಕ್ಷ ಎಂಎಸ್​ಎಂಇಗಳನ್ನು ಡಿಜಿಟಲ್ ವ್ಯವಸ್ಥೆ ಮೂಲಕ ಮೌಲ್ಯಮಾಪನ ಮಾಡಲು ನಾವು ತಜ್ಞರಾಗಿದ್ದೇವೆ. ಪೇಪಾಲ್ ಜತೆಗೆ ಸಹಭಾಗಿತ್ವ ವಹಿಸಲು ಉತ್ಸುಕರಾಗಿದ್ದೇವೆ. ಕೋವಿಡ್​ನಿಂದ ಸಂಕಷ್ಟಕ್ಕೆ ಈಡಾಗಿರುವ ಎಂಎಸ್​ಎಂಇಗಳು ಮತ್ತೆ ಬೆಳವಣಿಗೆಗೆ ಹಿಂತಿರುಗಲು ಹಾಗೂ ಹೊಸ ಅವಕಾಶ ದೊರಕಿಸಲು ಪ್ರಯತ್ನಿಸುತ್ತೇವೆ ಎಂದು ಫ್ಲೆಕ್ಸಿಲೋನ್ಸ್.ಕಾಮ್ ಸಹ ಸಂಸ್ಥಾಪಕ ಅಭಿಷೇಕ್ ಕೊಠಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Business loan: ಉದ್ಯಮಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಟಾಪ್ 10 ಬ್ಯಾಂಕ್​ಗಳಿವು

(PayPal and FlexiLoans become partners to provide collateral-free business loan to small business.)