
ದುಬೈ, ಡಿಸೆಂಬರ್ 14: ಸದ್ಯ ವಿಶ್ವದಲ್ಲಿ ಅತಿಹೆಚ್ಚು ಜನಪ್ರಿಯವಾಗಿರುವ ಭಾರತೀಯ ನಟ ಯಾರೆಂದರೆ ಅದು ಶಾರುಕ್ ಖಾನ್. ಬಾಲಿವುಡ್ ಬಾದ್ಶಾ ಶಾರುಖ್ ಖಾನ್ (Shah Rukh Khan) ಎಂದರೆ ಭಾರತದಲ್ಲಿ ಮಾತ್ರವಲ್ಲ, ಅನೇಕ ದೇಶಗಳಲ್ಲಿ ಕ್ರೇಜ್ ಇದೆ. ಯುಎಇ ದೇಶದ ದುಬೈನಲ್ಲಿ ಶಾರುಖ್ ಖಾನ್ ಹೆಸರಿನ ಕಮರ್ಷಿಯಲ್ ಟವರ್ನಲ್ಲಿರುವ ಎಲ್ಲಾ ಆಫೀಸ್ ಸ್ಪೇಸ್ಗಳೂ ಮಾರಾಟವಾಗಿವೆ. ನಿರ್ಮಾಣ ಪೂರ್ಣಗೊಳ್ಳುವ ಮುನ್ನವೇ 5,000 ಕೋಟಿ ರೂಗಳಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿರುವುದು ತಿಳಿದುಬಂದಿದೆ.
ಭಾರತ ಮೂಲದವರೇ ಆದ ರಿಜ್ವಾನ್ ಸಾಜನ್ (Rizwan Sajan) ಮಾಲಕತ್ವದ ಡ್ಯಾನೂಬ್ ಗ್ರೂಪ್ (Danube Group) ಈ ಕಮರ್ಷಿಯಲ್ ಟವರ್ ಅನ್ನು 3,500 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿದೆ. ಈ ಟವರ್ನ ಆಫೀಸ್ ಸ್ಪೇಸ್ಗಳಿಗೆ ಬಲು ಡಿಮ್ಯಾಂಡ್ ಸೃಷ್ಟಿಯಾಗಿದ್ದು, 2.1 ಬಿಲಿಯನ್ ದಿನಾರ್ಗಳಿಗೆ (ಸುಮಾರು 5,000 ಕೋಟಿ ರೂ) ಇವು ಮಾರಾಟವಾಗಿವೆ. ಡ್ಯಾನೂಬ್ ಗ್ರೂಪ್ ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿರುವುದು ಗಮನಾರ್ಹ.
ಇದನ್ನೂ ಓದಿ: ಕರ್ನಾಟಕದ ಚರ್ಮಕಾರರಿಗೆ ಭರ್ಜರಿ ಆದಾಯ? ಕೊಲ್ಹಾಪುರಿ ಚಪ್ಪಲಿಗಾಗಿ ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ ಪ್ರದಾ ಡೀಲ್
3,500 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 55 ಮಹಡಿಯ ಈ ಕಮರ್ಷಿಯಲ್ ಟವರ್ ಪ್ರತಿಷ್ಠಿತ ಶೇಖ್ ಜಾಯೇದ್ (Sheikh Zayed road) ರಸ್ತೆಯಲ್ಲಿದೆ. ಒಂದು ಮಿಲಿಯನ್ ಚದರಡಿ ವಿಸ್ತೀರ್ಣ ಹೊಂದಿದ ಟವರ್ ಇದಾಗಿದೆ. 488 ಯೂನಿಟ್ಗಳು ಇದರಲ್ಲಿ ಇದ್ದು ಪ್ರತಿಯೊಂದು ಕೂಡ ಕನಿಷ್ಠ 2 ಮಿಲಿಯನ್ ದಿನಾರ್ ಬೆಲೆಯಿಂದ ಆರಂಭವಾಗುತ್ತದೆ. ಆದರೂ ಕೂಡ ಈ ಟವರ್ಗೆ ಬೇಡಿಕೆ ಬಹಳ ಬಂದಿದೆ.
ಶಾರುಖ್ ಖಾನ್ ಹೆಸರಿನಲ್ಲಿ ಈ ಟವರ್ ನಿರ್ಮಿಸಲಾಗುತ್ತಿದೆ. ಶಾರುಖ್ ಖಾನ್ ಇಲ್ಲಿ ಬಹಳ ಜನಪ್ರಿಯವಾದ ನಟ. Shahrukhz ಟವರ್ಸ್ ಅನ್ನು ಬೇರೆ ಬೇರೆ ಕಡೆ ನಿರ್ಮಿಸಲು ಡ್ಯಾನೂಬ್ ಗ್ರೂಪ್ ನಿರ್ಧರಿಸಿದೆ. ದುಬೈನಲ್ಲೇ ಮತ್ತೊಂದು ಶಾರುಖ್ ಟವರ್ ತಲೆ ಎತ್ತಲಿದೆ. ನ್ಯೂಯಾರ್ಕ್, ಲಂಡನ್ನಲ್ಲೂ ಈ ಟವರ್ಗಳು ನಿರ್ಮಾಣವಾಗಲಿವೆ. ದೆಹಲಿ ಮತ್ತು ಮುಂಬೈನಲ್ಲೂ ನಿರ್ಮಾಣವಾಗಲಿವೆ ಎನ್ನಲಾಗುತ್ತಿದೆ.
ಅಂದಹಾಗೆ, ಡ್ಯಾನೂಬ್ ಗ್ರೂಪ್ ಸಾಧಾರಣ ಕಂಪನಿಯಲ್ಲ. ದುಬೈನ ವಿಶ್ವಖ್ಯಾತ ಬುರ್ಜ್ ಖಾಲೀಫಾ ಟವರ್ ನಿರ್ಮಾಣದಲ್ಲಿ ಈ ಕಂಪನಿಯು ಕಟ್ಟಡ ನಿರ್ಮಾಣ ಸಾಮಗ್ರಿ ಪೂರೈಕೆ ಮಾಡಿತ್ತು. ಕನ್ಸ್ಟ್ರಕ್ಷನ್ ಮೆಟೀರಿಯಲ್ ಪೂರೈಸುವುದರಿಂದ ಹಿಡಿದು, ಅನೇಕ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸುವವರೆಗೂ ಈ ಕಂಪನಿ ಬೆಳೆದಿದೆ.
ಡ್ಯಾನೂಬ್ ಗ್ರೂಪ್ನ ಮಾಲೀಕರಾದ ರಿಜ್ವಾನ್ ಸಾಜನ್ ಅವರು ಮುಂಬೈ ಮೂಲದವರು. 16ನೇ ವಯಸ್ಸಿನಲ್ಲಿ ದುಬೈಗೆ ಹೋಗಿ ತಮ್ಮ ತಂದೆಯ ಅಂಗಡಿಯಲ್ಲಿ ಕೆಲಸ ಮಾಡತೊಡಗಿದ್ದರು. ಇವತ್ತು ಅವರು ದುಬೈನ ಪ್ರಮುಖ ವಾಣಿಜ್ಯೋದ್ಯಮಿಗಳಲ್ಲಿ ಒಬ್ಬರೆಂದನಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ