ಇ-ಕಾಮರ್ಸ್ ವೆಬ್​​ಸೈಟ್​ಗಳಲ್ಲಿ ನಕಲಿ ರಿವ್ಯೂಗೆ ಬೀಳಲಿದೆ ಕಡಿವಾಣ; ಶೀಘ್ರದಲ್ಲೇ ಬರಲಿದೆ ನಿಯಮ

| Updated By: Ganapathi Sharma

Updated on: Nov 21, 2022 | 11:42 AM

ಇ-ಕಾಮರ್ಸ್ ತಾಣಗಳಲ್ಲಿ ವಸ್ತುಗಳನ್ನು ವರ್ಚುವಲ್ ಆಗಿ ಖರೀದಿ ಮಾಡಬೇಕಿರುವುದರಿಂದ ಗ್ರಾಹಕರಿಗೆ ನೇರವಾಗಿ ಅವುಗಳನ್ನು ಪರೀಕ್ಷಿಸಿ ನೋಡಲಾಗುವುದಿಲ್ಲ. ಹೀಗಾಗಿ ವೆಬ್​ಸೈಟ್​ಗಳಲ್ಲಿ ಕಾಣಿಸುವ ರಿವ್ಯೂ ಹಾಗೂ ರೇಟಿಂಗ್​ಗಳು ಬಹಳ ಮುಖ್ಯವಾಗುತ್ತವೆ.

ಇ-ಕಾಮರ್ಸ್ ವೆಬ್​​ಸೈಟ್​ಗಳಲ್ಲಿ ನಕಲಿ ರಿವ್ಯೂಗೆ ಬೀಳಲಿದೆ ಕಡಿವಾಣ; ಶೀಘ್ರದಲ್ಲೇ ಬರಲಿದೆ ನಿಯಮ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಇ-ಕಾಮರ್ಸ್ ವೆಬ್​ಸೈಟ್​ಗಳು (e-commerce websites), ಹೋಟೆಲ್ ಮತ್ತು ಟ್ರಾವೆಲ್ ಬುಕಿಂಗ್ ತಾಣಗಳಲ್ಲಿ ನಕಲಿ ರಿವ್ಯೂಗಳು (Fake Reviews) ಮತ್ತು ಅನಧಿಕೃತ ರೇಟಿಂಗ್​ಗಳ ಹಾವಳಿ ತಡೆಯುವುದಕ್ಕಾಗಿ ನಿಯಮ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ವಿಚಾರವಾಗಿ ಮುಂದಿನ ವಾರ ಸರ್ಕಾರ ಚೌಕಟ್ಟು ಅಂತಿಮಗೊಳಿಸಲಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ (Consumer Affairs Secretary) ರೋಹಿತ್ ಕುಮಾರ್ ಸಿಂಗ್ (Rohit Kumar Singh) ತಿಳಿಸಿದ್ದಾರೆ.

ಇ-ಕಾಮರ್ಸ್ ತಾಣಗಳಲ್ಲಿ ವಸ್ತುಗಳನ್ನು ವರ್ಚುವಲ್ ಆಗಿ ಖರೀದಿ ಮಾಡಬೇಕಿರುವುದರಿಂದ ಗ್ರಾಹಕರಿಗೆ ನೇರವಾಗಿ ಅವುಗಳನ್ನು ಪರೀಕ್ಷಿಸಿ ನೋಡಲಾಗುವುದಿಲ್ಲ. ಹೀಗಾಗಿ ವೆಬ್​ಸೈಟ್​ಗಳಲ್ಲಿ ಕಾಣಿಸುವ ರಿವ್ಯೂ ಹಾಗೂ ರೇಟಿಂಗ್​ಗಳು ಬಹಳ ಮುಖ್ಯವಾಗುತ್ತವೆ. ಈಗಾಗಲೇ ಖರೀದಿಸಿರುವವರ ಅಥವಾ ಸೇವೆ ಪಡೆದವರ ಅಭಿಪ್ರಾಯಗಳು ಹಾಗೂ ಅವರು ನೀಡಿರುವ ರೇಟಿಂಗ್​ ಅನ್ನು ಅನುಸರಿಸಿ ಗ್ರಾಹಕರು ವಸ್ತುಗಳ ಖರೀದಿಗೆ ಅಥವಾ ಸೇವೆಗಳ ಆಯ್ಕೆಗೆ ಮುಂದಾಗುತ್ತಾರೆ. ಇಂಥ ಸಂದರ್ಭಗಳಲ್ಲಿ ನಕಲಿ ರಿವ್ಯೂಗಳು ಹಾಗೂ ರೇಟಿಂಗ್​​ಗಳು ಗ್ರಾಹಕರ ಹಾದಿ ತಪ್ಪಿಸುತ್ತವೆ.

ಪ್ರಸ್ತುತ ಇ-ಕಾಮರ್ಸ್ ತಾಣಗಳು ಅನುಸರಿಸುತ್ತಿರುವ ಕಾರ್ಯತಂತ್ರಗಳು ಮತ್ತು ತಂತ್ರಾಂಶಗಳನ್ನು ಗಮನದಲ್ಲಿಟ್ಟುಕೊಂಡು, ಜಾಗತಿಕವಾಗಿ ಜಾರಿಯಲ್ಲಿರುವ ಉತ್ತಮ ಅಭ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕ ವ್ಯವಹಾರಗಳ ಇಲಾಖೆ (DoCA) ಚೌಕಟ್ಟು ಅಂತಿಮಗೊಳಿಸಲಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

ನಕಲಿ ರಿವ್ಯೂ ತಡೆಗೆ ಚೌಕಟ್ಟು; ಮೊದಲ ದೇಶ ಭಾರತ

‘ಬಂಡವಾಳಗಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಕಲಿ ರಿವ್ಯೂಗಳ ತಡೆಗೆ ಚೌಕಟ್ಟು ಅಂತಿಮಗೊಳಿಸಲಿದ್ದೇವೆ. ಭಾರತೀಯ ಗುಣಮಟ್ಟ ಬ್ಯುರೋ (ಬಿಐಎಸ್) ಕೂಡ ಮಾನದಂಡಗಳನ್ನು ಸೂಚಿಸಿದೆ. ನಕಲಿ ರಿವ್ಯೂ ನಿರ್ವಹಣೆ ಚೌಕಟ್ಟಿನ ಬಗ್ಗೆ ಮುಂದಿನ ವಾರ ಮಾಹಿತಿ ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.

ಈ ಕ್ರಮದೊಂದಿಗೆ, ನಕಲಿ ರಿವ್ಯೂ ಮತ್ತು ರೇಟಿಂಗ್​ ತಡೆಗೆ ಚೌಕಟ್ಟು ರೂಪಿಸಿದ ಮೊದಲ ದೇಶವಾಗಲಿದೆ ಭಾರತ. ಆರಂಭದಲ್ಲಿ ಸ್ವಯಂಪ್ರೇರಿತರಾಗಿ ಚೌಕಟ್ಟುಗಳನ್ನು ಅನುಸರಿಸುವಂತೆ ನಿರ್ದೇಶನ ನೀಡಲಾಗುವುದು. ಕ್ರಮೇಣ ಕಡ್ಡಾಯಗೊಳಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಈ ಮಧ್ಯೆ, ತಾವು ಈಗಾಗಲೇ ನಕಲಿ ರಿವ್ಯೂಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಚೌಕಟ್ಟುಗಳನ್ನು ಹೊಂದಿದ್ದೇವೆ ಎಂದು ಇ-ಕಾಮರ್ಸ್ ಕಂಪನಿಗಳ ಬಂಡವಾಳಗಾರರು ಹೇಳಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ