Budget 2023-24: ಬಜೆಟ್ಗೆ ಸಿದ್ಧತೆ ಶುರು; ಕೈಗಾರಿಕೋದ್ಯಮಿಗಳ ಜತೆ ನಿರ್ಮಲಾ ಸೀತಾರಾಮನ್ ಸಭೆ
ವ್ಯಾಪಾರಿ ಒಕ್ಕೂಟದ ಪ್ರತಿನಿಧಿಗಳು ಮತ್ತು ಅರ್ಥಶಾಸ್ತ್ರಜ್ಞರ ಜತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನವೆಂಬರ್ 28ರಂದು ಸಭೆ ನಡೆಸಲಿದ್ದಾರೆ. ಬಜೆಟ್ ಪೂರ್ವ ಎಲ್ಲ ಸಭೆಗಳೂ ವರ್ಚುವಲ್ ಆಗಿ ನಡೆಯಲಿವೆ.
ನವದೆಹಲಿ: ಮುಂದಿನ ಹಣಕಾಸು ವರ್ಷದ ಮುಂಗಡ ಪತ್ರಕ್ಕೆ (Budget 2023-24) ಸಿದ್ಧತೆ ಆರಂಭಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕೈಗಾರಿಕೋದ್ಯಮಿಗಳು ಮತ್ತು ಹವಾಮಾನ ಬದಲಾವಣೆ ತಜ್ಞರ ಜತೆ ಸೋಮವಾರ ಸಭೆ ನಡೆಸಿದರು. ಮುಂದಿನ ಕೆಲವು ವಾರಗಳಲ್ಲಿ ವಿವಿಧ ಕೈಗಾರಿಕೋದ್ಯಮಿಗಳು, ತಜ್ಞರು ಹಾಗೂ ಬಂಡವಾಳಗಾರರ ಜತೆ ಸಚಿವರು ಸಮಾಲೋಚನೆ ನಡೆಸಲಿದ್ದಾರೆ. ಮುಂದಿನ ವರ್ಷದ ಬಜೆಟ್ 2023ರ ಫೆಬ್ರುವರಿ 1ರಂದು ಸಂಸತ್ನಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ.
ಹಣಕಾಸು ಇಲಾಖೆಯ ಸಹಾಯಕ ಸಚಿವ ಪಂಕಜ್ ಚೌಧರಿ, ಭಾಗವತ್ ಕೃಷ್ಣರಾವ್ ಕರಾಡ್, ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್, ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಕೃಷಿ, ಕೃಷಿ ಸಂಸ್ಕರಣಾ ಕೈಗಾರಿಕೆ, ಹಣಕಾಸು ಮತ್ತು ಬಂಡವಾಳ ಮಾರುಕಟ್ಟೆ ಪ್ರತಿನಿಧಿಗಳನ್ನು ಮಂಗಳವಾರ ಸಚಿವರು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ. ಸೇವಾ ಕ್ಷೇತ್ರ, ವ್ಯಾಪಾರ ಮಂಡಳಿಗಳ ಪ್ರತಿನಿಧಿಗಳು, ಸಾಮಾಜಿಕ, ಆರೋಗ್ಯ, ಶಿಕ್ಷಣ, ನೀರು ಮತ್ತು ನೈರ್ಮಲ್ಯ ಕ್ಷೇತ್ರಗಳ ತಜ್ಞರ ಜತೆಗೂ ಸಚಿವರು ಸಮಾಲೋಚನೆ ನಡೆಸಲಿದ್ದಾರೆ. ವ್ಯಾಪಾರಿ ಒಕ್ಕೂಟದ ಪ್ರತಿನಿಧಿಗಳು ಮತ್ತು ಅರ್ಥಶಾಸ್ತ್ರಜ್ಞರ ಜತೆ ನವೆಂಬರ್ 28ರಂದು ಸಭೆ ನಡೆಸಲಿದ್ದಾರೆ. ಬಜೆಟ್ ಪೂರ್ವ ಎಲ್ಲ ಸಭೆಗಳೂ ವರ್ಚುವಲ್ ಆಗಿ ನಡೆಯುತ್ತಿವೆ ಎಂದು ‘ಎಎನ್’ ಸುದ್ದಿಸಂಸ್ಥೆ ವರದಿ ತಿಳಿಸಿದೆ.
ತಿಂಗಳುಗಳ ಮೊದಲೇ ಆರಂಭವಾಗುವ ಬಜೆಟ್ ಸಿದ್ಧತೆ
ಬಜೆಟ್ ಮಂಡನೆ ಎಂಬುದೇ ಒಂದು ದೊಡ್ಡ ಪ್ರಕ್ರಿಯೆಯಾದರೆ ಅದಕ್ಕೆ ಸಿದ್ಧತೆಯೂ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಸಾಮಾನ್ಯವಾಗಿ ಬಜೆಟ್ ಪ್ರತಿ ಸಿದ್ಧಪಡಿಸಲು ಮಂಡನೆಯ ದಿನಕ್ಕಿಂತಲೂ ಮೂರ್ನಾಲ್ಕು ತಿಂಗಳುಗಳ ಮೊದಲೇ ಪ್ರಕ್ರಿಯೆಗಳು ಆರಂಭವಾಗುತ್ತವೆ. ಅದರ ಮೊದಲ ಹಂತವೇ ಹಣಕಾಸು ಸಚಿವರು ವಿವಿಧ ಕ್ಷೇತ್ರಗಳ ತಜ್ಞರು, ಕೈಗಾರಿಕೋದ್ಯಮಿಗಳ ಜತೆ ಸಭೆ ನಡೆಸುವುದು. ಸರಿಸುಮಾರು ಅಕ್ಟೋಬರ್ ನವೆಂಬರ್ ತಿಂಗಳಲ್ಲೇ ಬಜೆಟ್ ಸಿದ್ಧತೆ ಕೆಲಸಗಳು ಒಂದೊಂದಾಗಿ ಆರಂಭವಾಗುತ್ತವೆ. 2018ಕ್ಕಿಂತ ಹಿಂದಿನ ವರ್ಷಗಳಲ್ಲಿ ಕೇಂದ್ರ ಬಜೆಟ್ ಸಾಮಾನ್ಯವಾಗಿ ಫೆಬ್ರುವರಿ ತಿಂಗಳ ಕೊನೆಯಲ್ಲಿ ಮಂಡನೆಯಾಗುತ್ತಿತ್ತು. 2018ರ ನಂತರ ಫೆಬ್ರುವರಿ ಮೊದಲ ದಿನವೇ ಮಂಡನೆ ಮಾಡಲಾಗುತ್ತಿದೆ. ರೈಲ್ವೆ ಬಜೆಟ್ ಅನ್ನೂ ಸಹ ಕೆಲವು ವರ್ಷಗಳಿಂದ ಕೇಂದ್ರ ಬಜೆಟ್ನೊಂದಿಗೆ ವಿಲೀನಗೊಳಿಸಲಾಗಿದೆ.
ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್
2023ರ ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಮಂಡಿಸುವುದೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿರಲಿದೆ. ಯಾಕೆಂದರೆ, 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಸಾಮಾನ್ಯವಾಗಿ ಚುನಾವಣೆ ವರ್ಷದಲ್ಲಿ ಹಾಲಿ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದಿಲ್ಲ. ಚುನಾವಣೆ ನಂತರ ಆಯ್ಕೆಯಾಗಿ ರಚಿಸಲ್ಪಟ್ಟ ಹೊಸ ಸರ್ಕಾರ ಬಜೆಟ್ನಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಕ್ತವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Mon, 21 November 22