ಕೋವಿಡ್- 19ನಿಂದ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ 2 ವರ್ಷ ವೇತನ, ಮಕ್ಕಳಿಗೆ ಉಚಿತ ಶಿಕ್ಷಣ ಘೋಷಿಸಿದ ಬೋರೋಸಿಲ್

|

Updated on: May 01, 2021 | 1:39 PM

ಕೋವಿಡ್ 19ಗೆ ಸಿಬ್ಬಂದಿ ಬಲಿಯಾದರೆ ಅವರ ಕುಟುಂಬಕ್ಕೆ ಎರಡು ವರ್ಷ ವೇತನ, ಸಿಬ್ಬಂದಿಯ ಮಕ್ಕಳಿಗೆ ಪದವಿ ಹಂತದ ತನಕ ಶಿಕ್ಷಣ ಕೊಡಿಸುವುದಾಗಿ ಬೋರೋಸಿಲ್ ಲಿಮಿಟೆಡ್ ಮತ್ತು ಬೋರೋಸಿಲ್ ರಿನೀವಬಲ್ಸ್​ ಘೋಷಿಸಿದೆ.

ಕೋವಿಡ್- 19ನಿಂದ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ 2 ವರ್ಷ ವೇತನ, ಮಕ್ಕಳಿಗೆ ಉಚಿತ ಶಿಕ್ಷಣ ಘೋಷಿಸಿದ ಬೋರೋಸಿಲ್
ಪ್ರಾತಿನಿಧಿಕ ಚಿತ್ರ
Follow us on

ಬೋರೋಸಿಲ್ ಲಿಮಿಟೆಡ್ ಮತ್ತು ಬೋರೋಸಿಲ್ ರಿನೀವಬಲ್ಸ್​ನಿಂದ ಘೋಷಣೆಯೊಂದನ್ನು ಮಾಡಿದ್ದು, ಒಂದು ವೇಳೆ ಸಿಬ್ಬಂದಿಯು ಕೋವಿಡ್-19ನಿಂದ ಮೃತಪಟ್ಟಲ್ಲಿ, ಆತನ ಅಥವಾ ಆಕೆಯ ಕುಟುಂಬಕ್ಕೆ ಮುಂದಿನ ಎರಡು ವರ್ಷಗಳ ಕಾಲ ವೇತನ ನೀಡಲಾಗುವುದು. ಇದರ ಜತೆಗೆ ಸಿಬ್ಬಂದಿಗೆ ಏನೆಲ್ಲ ಹೆಚ್ಚುವರಿ ಅನುಕೂಲಗಳು ದೊರೆಯುತ್ತಿತ್ತೋ ಅವೆಲ್ಲಕ್ಕೂ ಕುಟುಂಬದವರು ಸಹ ಅರ್ಹರಾಗುತ್ತಾರೆ. ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ಬೋರೋಸಿಲ್ ಲಿಮಿಟೆಡ್​ನ ಮಾರ್ಕೆಟಿಂಗ್ ಮುಖ್ಯಸ್ಥ ಸ್ವಪ್ನಿಲ್ ವಲುಂಜ್ ಈ ಬಗ್ಗೆ ತಿಳಿಸಿದ್ದಾರೆ. ಇನ್ನು ಇವೆಲ್ಲದರ ಜತೆಗೆ ಸಿಬ್ಬಂದಿಯ ಮಕ್ಕಳ ಶಿಕ್ಷಣದ ಹೊಣೆಯನ್ನು ಪದವಿ ಹಂತದ ತನಕ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಕೋವಿಡ್-19 ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಈಡಾದ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗಾಗಿ ಹಲವು ಕಂಪೆನಿಗಳು ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿವೆ. ಏಪ್ರಿಲ್ 30ರಂದು ಅರ್ಬನ್ ಕಂಪೆನಿಯಿಂದ ಅಗರ್ವಾಲ್ ಅವರ ಸ್ಮರಣೆಯಲ್ಲಿ ಮೋಹಿತ್ ಅಗರ್ವಾಲ್ ಕೋವಿಡ್ ಪರಿಹಾರ ನಿಧಿ ಎಂಬುದನ್ನು ಆರಂಭಿಸಿದೆ. ಅಂದಹಾಗೆ ಮೋಹಿತ್ ಕಂಪೆನಿಯ ಡೈರೆಕ್ಟರ್ ಆಫ್ ಎಂಜಿನಿಯರಿಂಗ್ ಆಗಿದ್ದರು. ಕೋವಿಡ್- 19 ಕಾರಣಕ್ಕೆ ಅವರು ನಿಧನರಾದರು.

ಭಾರತದಾದ್ಯಂತ ಕೊರೊನಾ ಎರಡನೇ ಅಲೆಯ ಪರಿಣಾಮವಾಗಿ ದಿನದಿನಕ್ಕೂ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ವೈದ್ಯಕೀಯ ಆಕ್ಸಿಜನ್ ಕೊರತೆ ಮತ್ತು ಆಸ್ಪತ್ರೆಗಳಲ್ಲಿ ಬೆಡ್​ಗಳಿಗೆ ಕೊರತೆ ಪ್ರಮುಖವಾಗಿ ಕಾಡುತ್ತಿದೆ. ಸ್ಥಳೀಯವಾಗಿ ಹಲವು ರಾಜ್ಯಗಳಲ್ಲಿ ಲಾಕ್​ಡೌನ್ ಘೋಷಣೆ ಮಾಡಲಾಗಿದೆ ಹಾಗೂ ಜತೆಗೆ ಲಸಿಕೆ ಹಾಕುವ ಪ್ರಮಾಣಕ್ಕೆ ವೇಗ ನೀಡಲಾಗಿದೆ. ಇಷ್ಟೆಲ್ಲ ಆದ ನಂತರವೂ ಪರಿಸ್ಥಿತಿ ದಿನದಿನಕ್ಕೂ ಬಿಗಡಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಕಂಪೆನಿಗಳು ಸಿಬ್ಬಂದಿಗೆ ವಿವಿಧ ಯೋಜನೆಗಳ ಘೋಷಣೆ ಮಾಡುತ್ತಿವೆ.

ಇದನ್ನೂ ಓದಿ: 7 changes from May: ಮೇ ತಿಂಗಳ ಮೊದಲ ದಿನದಿಂದ ಈ 7 ಬದಲಾವಣೆಗಳನ್ನು ನಿರೀಕ್ಷಿಸಿ, ಸಿದ್ಧರಾಗಿ

(Borosil Company and Borosil Renewables ltd announced covid- 19 relief for employees and their families)