Estate planning: ಏನಿದು ಎಸ್ಟೇಟ್ ಪ್ಲಾನಿಂಗ್ ಸಂಗತಿ, ಇದು ನಿಮಗೆ ಗೊತ್ತಿರಲೇಬೇಕಾದ ಮಾಹಿತಿ
ಈ ಬದುಕು ಅನಿಶ್ಚಿತತೆಯಿಂದ ಇದೆ ಎಂದು ಕೊರೊನಾ ನಂತರ ಪದೇಪದೇ ಅನಿಸುತ್ತಿರುತ್ತದೆ. ನಮ್ಮ ಗೈರಿನಲ್ಲೂ ಕುಟುಂಬ ಸದಸ್ಯರಿಗೆ ಏನೂ ಸಮಸ್ಯೆ ಆಗಬಾರದು ಎಂದಾದಲ್ಲಿ ಎಸ್ಟೇಟ್ ಪ್ಲಾನಿಂಗ್ ಮಾಡೋದು ಉತ್ತಮ.
ಎಲ್ಲ ಕಡೆಯಿಂದ ಕೋವಿಡ್- 19 ಬಗ್ಗೆ ಕೆಟ್ಟ ಸುದ್ದಿ ಬರುತ್ತಲೇ ಇವೆ. ಇದರಿಂದ 40 ವರ್ಷದ ಅಮಿತ್ ಕುಮಾರ್ ನಿದ್ದೆಯನ್ನೇ ಕಳೆದುಕೊಂಡಿದ್ದಾರೆ. ಅಮಿತ್ ಪದೇಪದೇ ದೇಹದ ಟೆಂಪರೇಚರ್ ಪರೀಕ್ಷಿಸಿಕೊಳ್ಳುತ್ತಾರೆ. ತನ್ನ ಸಂಬಂಧಿಕರು, ಸ್ನೇಹಿತರು ಹಾಗೂ ಆಪ್ತರೇ ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಸಿಗದೆ ಒದ್ದಾಡುತ್ತಿದ್ದಾರೆ ಅನ್ನೋದನ್ನು ನೋಡಿದಾಗ ಮನಸ್ಸು ಮತ್ತಷ್ಟು ಮುದುಡುತ್ತದೆ. ಇದರ ಜತೆಗೆ ಸೋಷಿಯಲ್ ಮೀಡಿಯಾ ವಾಲ್ಗಳಲ್ಲಿ ತನಗಿಂತ ಚಿಕ್ಕ ವಯಸ್ಸಿನ, ಓರಗೆಯವರ ಸಾವಿನ ಬಗ್ಗೆ ದುಃಖದ ಸಂದೇಶಗಳನ್ನು ನೋಡಿ ಇನ್ನಷ್ಟು ಕುಸಿದಂತಾಗುತ್ತಾರೆ. “ನನಗೇನಾದರೂ ಬಹಳ ಕೆಟ್ಟದ್ದಾದರೆ ಕುಟುಂಬದವರ ಪರಿಸ್ಥಿತಿ ಏನು ಎಂಬುದೇ ಭಯಕ್ಕೆ ಕಾರಣ ಆಗಿದೆ. ಮನೆಯಲ್ಲಿ ಮುಖ್ಯವಾಗಿ ದುಡಿಯೋನು ನಾನೊಬ್ಬನೇ. ಬೇಕಾದಷ್ಟು ಜವಾಬ್ದಾರಿಗಳಿವೆ,” ಎಂಬುದು ಅವರ ಆತಂಕ.
ಕೋವಿಡ್-19 ಆತಂಕದ ಮಧ್ಯೆ ಅಮಿತ್ ಎಸ್ಟೇಟ್ ಪ್ಲಾನಿಂಗ್ಗೆ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಒಂದು ವೇಳೆ ತನ್ನ ಸಾವೇ ಸಂಭವಿಸಿದರೂ ಕುಟುಂಬಕ್ಕೆ ಆರ್ಥಿಕ ಸಮಸ್ಯೆಗಳು ಆಗಲ್ಲ ಎಂಬುದು ಅವರ ಉದ್ದೇಶ. ಅಮಿತ್ ರೀತಿಯಲ್ಲೇ ಆತಂಕದಿಂದ ಇರುವ ಹಲವರು ಎಸ್ಟೇಟ್ ಪ್ಲಾನಿಂಗ್ನ ಗಂಭೀರ ಆಲೋಚನೆಯಲ್ಲಿ ಇದ್ದಾರೆ. ಎಸ್ಟೇಟ್ ಪ್ಲಾನಿಂಗ್ ಪೈಕಿ ಅತ್ಯಂತ ಜನಪ್ರಿಯವಾದದ್ದು ವಿಲ್ ಮಾಡಿಡುವುದು. ಆಗ ಯಾವುದೇ ಕಾನೂನು ತಗಾದೆಗಳಿಲ್ಲದೆ ಕುಟುಂಬ ಸದಸ್ಯರಿಗೆ ಆಸ್ತಿ ಹಂಚಿಕೆ ಆಗುತ್ತದೆ.
“ಬದುಕಿನ ಅನಿಶ್ಚಿತ ಸಮಯಗಳಲ್ಲಿ ಒಂದು ಅಂದರೆ ಅದು ಸಾವು. ಈಗಿನ ಕೊರೊನಾ ಸಂದರ್ಭದಲ್ಲಿ ನಮ್ಮ ಪ್ರೀತಿಪಾತ್ರರು ಹಲವರನ್ನು ಕಳೆದುಕೊಂಡಿದ್ದೇವೆ. ಅವರಿಗೆ ಹೀಗೆ ಆಗುತ್ತದೆ ಅಂತ ನಾವೆಂದೂ ಅಂದುಕೊಂಡಿರಲಿಲ್ಲ. ಈ ವಿಚಾರವನ್ನು ಹಂಚಿಕೊಳ್ಳಬಾರದು. ಏಕೆಂದರೆ, ಇದು ಅಷ್ಟೇನೋ ಸಂತೋಷದ ಸಂಗತಿ ಅಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ, ನಾನೊಬ್ಬ ಎಸ್ಟೇಟ್ ಪ್ಲಾನರ್ ಆಗಿ, ಈ ಕೊರೊನಾ ಬಿಕ್ಕಟ್ಟಿನ ನಂತರ ನನ್ನ ಪ್ರಾಕ್ಟೀಸ್ ಬಹಳ ಚೆನ್ನಾಗಿ ಆಗಿದೆ. ಕಳೆದ ವರ್ಷ ನೂರಕ್ಕೂ ಹೆಚ್ಚು ಎಸ್ಟೇಟ್ ಪ್ಲಾನಿಂಗ್ ಎಕ್ಸ್ಕ್ಯೂಟ್ ಮಾಡಿದ್ದೀನಿ. ಪ್ರತಿ ದಿನ ಒಬ್ಬರೋ ಇಬ್ಬರೋ ಬರುತ್ತಲೇ ಇದ್ದಾರೆ. ಅದು ಈ ಕೊರೊನಾ ಕಾರಣಕ್ಕೆ,” ಎಂದರು ಬೆಂಗಳೂರು ಮೂಲದ ಎಸ್ಟೇಟ್ ಪ್ಲಾನರ್ ಮತ್ತು ಸರ್ಟಿಫೈಡ್ ಫೈನಾನ್ಷಿಯಲ್ ಪ್ಲಾನರ್ ಎ.ಸುರೇಶ್. ಫೈನಾನ್ಷಿಯಲ್ ಪ್ಲಾನಿಂಗ್ ಆಫ್ ಇಂಡಿಯಾ ಈಚೆಗೆ ಆಯೋಜಿಸಿದ್ದ ವೆಬಿನಾರ್ನಲ್ಲಿ ಅವರು ಈ ವಿಚಾರ ತಿಳಿಸಿದರು.
ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಎಸ್ಟೇಟ್ ಪ್ಲಾನಿಂಗ್ ಹೇಗೆ ಮಾಡಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.
ಏನಿದು ಎಸ್ಟೇಟ್ ಪ್ಲಾನಿಂಗ್? ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ ಅವರ ಆಸ್ತಿಯು ಸಾಮಾನ್ಯವಾಗಿ ಕಾನೂನುಬದ್ಧ ಉತ್ತರಾಧಿಕಾರಿಗೆ ವರ್ಗಾವಣೆ ಆಗುತ್ತದೆ. ಆದರೆ ಹಲವು ಸಲ ಇದು ಕುಟುಂಬ ಸದಸ್ಯರ ಮಧ್ಯೆ ವ್ಯಾಜ್ಯಕ್ಕೆ ಕಾರಣ ಆಗುತ್ತದೆ. ಇದಕ್ಕೆ ಕಾರಣ ಏನೆಂದರೆ, ಆಸ್ತಿಯನ್ನು ಹಂಚಬೇಕು ಎಂಬ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾವಣೆ ಆಗುವಾಗ ಅಂಬಾನಿ ಕುಟುಂಬದಲ್ಲಿ ಉದ್ಭವಿಸಿದ ತಿಕ್ಕಾಟ ನಮ್ಮ ನೆನಪಿನಿಂದ ಇನ್ನೂ ಮಾಸಿಲ್ಲ.
ಮೊದಲೇ ಹೇಳಿದ ಹಾಗೆ, ಎಸ್ಟೇಟ್ ಪ್ಲಾನಿಂಗ್ ಅಂದರೆ ಮುಂದಿನ ತಲೆಮಾರಿಗೆ ಆಸ್ತಿ ವರ್ಗಾವಣೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸುವುದಕ್ಕೆ ಇರುವ ಕ್ರಮಬದ್ಧವಾದ ಮಾರ್ಗ. ಸಂಬಂಧದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಸುಲಭವಾಗಿ ಆಸ್ತಿ ವರ್ಗಾವಣೆ ಆಗಲಿ ಎಂದು ಮಾಡುವುದೇ ಎಸ್ಟೇಟ್ ಪ್ಲಾನಿಂಗ್. ಮನೆಯ ಹಿರಿಯರು ಕಾಲವಾದ ಮೇಲೆ ಆಸ್ತಿ ಹಂಚಿಕೆ ವಿವಾದ ಉದ್ಭವಿಸಿ, ತಲೆಮಾರುಗಳ ನಂತರವೂ ವ್ಯಾಜ್ಯ ಬಗೆಹರಿಯದೆ ಕೋರ್ಟ್-ಕಚೇರಿ ಅಂತ ಅಲೆದಾಡುವುದು ನೋಡಲು ಸಿಗುತ್ತದೆ. ಅಷ್ಟೇ ಅಲ್ಲ, ಇನ್ನೂ ವಿಪರೀತಕ್ಕೆ ಹೋಗಿ ಹೊಡೆದಾಟ- ಕೊಲೆಯ ಮಟ್ಟವನ್ನೂ ಮುಟ್ಟುತ್ತದೆ.
ಎಸ್ಟೇಟ್ ಪ್ಲಾನಿಂಗ್ ಮಾಡುವುದು ಹೇಗೆ? ವಿಲ್ ಸಿದ್ಧಪಡಿಸುವುದು ಉತ್ತರಾಧಿಕಾರಿಗಳಿಗೆ ಆಸ್ತಿ ವರ್ಗಾವಣೆ ಮಾಡುವುದಕ್ಕೆ ಭಾರತದಲ್ಲಿ ಇರುವ ಜನಪ್ರಿಯ ವಿಧಾನ ವಿಲ್ ಮಾಡಿಡುವುದು. ವಿಲ್ ಎಂಬುದು ಲಿಖಿತ ದಾಖಲಾತಿ. ಅದರ ಮೂಲಕವಾಗಿ ಒಬ್ಬ ವ್ಯಕ್ತಿ ತನ್ನ ಸಾವಿನ ನಂತರ ಆಸ್ತಿಯು ಹೇಗೆ ವಿತರಣೆ ಆಗಬೇಕು ಎಂದು ನಿರ್ದೇಶನ ನೀಡಿರುತ್ತಾರೆ. ಸ್ಥಿರಾಸ್ತಿ, ಚರಾಸ್ತಿ, ಕಣ್ಣಿಗೆ ಕಾಣುವಂಥ ಹಾಗೂ ಕಾಣದಂಥ ಸೊತ್ತುಗಳನ್ನು ವಿಲ್ ಮೂಲಕವಾಗಿ ವರ್ಗಾವಣೆ ಮಾಡಬಹುದು. ಇದಕ್ಕೆ ವಕೀಲರೋ ಸಲಹೆಗಾರರೋ ಬೇಕು ಅಂತೇನಿಲ್ಲ. ಇದರಲ್ಲಿ ಮುಖ್ಯ ಕೆಲಸ ಏನೆಂದರೆ, ಬರವಣಿಗೆ ಸರಳವಾಗಿರಬೇಕು. ಕೆಲವೇ ಪದಗಳಲ್ಲಿ ಅಥವಾ ಹಲವು ಪುಟಗಳ ಮಾಹಿತಿಯೊಂದಿಗೆ ಇರಬೇಕು. ಒಂದು ಕಾಗದದಲ್ಲಿ, ಬೇಕಾದ ರೀತಿಯಲ್ಲಿ ಇದನ್ನು ಬರೆಯಬಹುದು.
ಯಾರು ವಿಲ್ ಬರೆಯುತ್ತಾರೋ ಆ ವ್ಯಕ್ತಿಯು ಯಾವುದೇ ಸಂದರ್ಭದಲ್ಲಿ ಬದಲಾವಣೆ ಮಾಡುವುದಕ್ಕೆ ಅವಕಾಶ ಇರುತ್ತದೆ. ಅದಕ್ಕೆ ಮತ್ತೊಂದು ದಾಖಲಾತಿ ಬೇಕಾಗುತ್ತದೆ. ಅದನ್ನು “Codicil” ಎನ್ನಲಾಗುತ್ತದೆ. ಈ ಬಿಲ್ನ ನೋಂದಣಿ ಕಡ್ಡಾಯ ಏನಲ್ಲ. ಭವಿಷ್ಯದಲ್ಲಿ ವ್ಯಾಜ್ಯಗಳಾಗಬಾರದು ಅಂದರೆ ನೋಂದಣಿ ಮಾಡಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಇನ್ನು ವಿಲ್ನಲ್ಲಿ ಇರುವ ಅಂಶಗಳ ಅನುಷ್ಠಾನಕ್ಕಾಗಿ ಎಕ್ಸ್ಕ್ಯೂಟರ್ ನೇಮಕ ಮಾಡುವುದು ಉತ್ತಮ. ಸುರೇಶ್ ಅವರು ವೆಬಿನಾರ್ ಸಂದರ್ಭದಲ್ಲಿ ಇದೇ ಮಾತನ್ನು ಹೇಳಿದರು.
ಟ್ರಸ್ಟ್ ಬಹಳ ಸರಳವಾಗಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯ ಅನುಕೂಲಕ್ಕಾಗಿ ಆಸ್ತಿಯನ್ನು ಇಟ್ಟುಕೊಂಡಿರುತ್ತಾರೆ. ಫಲಾನುಭವಿಗಳ ಅನುಕೂಲಕ್ಕಾಗಿ ಟ್ರಸ್ಟಿಗಳ ಬಳಿ ಆಸ್ತಿ ಇರುತ್ತದೆ. ಟ್ರಸ್ಟ್ನ ಸೆಟ್ಲರ್ ಅಥವಾ ಆಥರ್ನಿಂದ ಟ್ರಸ್ಟಿಗಳಿಗೆ ಆಸ್ತಿ ವರ್ಗಾವಣೆ ಆಗುತ್ತದೆ. ವಿಲ್ ರೀತಿಯಲ್ಲಿ ಇದು ಕೆಲಸ ಮಾಡಲ್ಲ. ಅಂದರೆ, ಆಸ್ತಿಯು ಫಲಾನುಭವಿಗಳಿಗೆ ವರ್ಗಾವಣೆ ಆಗಲ್ಲ. ಆದರೆ ಟ್ರಸ್ಟ್ಗೆ ಆಗುತ್ತದೆ. ಇದರಿಂದಾಗಿ ಆಸ್ತಿ ಕಾಪಾಡಬಹುದು ಹಾಗೂ ಕುಟುಂಬ ಸದಸ್ಯರ ಮಧ್ಯೆ ವ್ಯಾಜ್ಯಗಳನ್ನು ಕಡಿಮೆ ಮಾಡಬಹುದು. ದೊಡ್ಡ ಕುಟುಂಬಗಳಲ್ಲಿ ತಲೆಮಾರಿನಿಂದ ತಲೆಮಾರಿಗೆ ಆಸ್ತಿ ಕಾಪಾಡಿಕೊಳ್ಳುವುದರಲ್ಲಿ ಇದೂ ಒಂದು ವಿಧಾನ. ಅಂದ ಹಾಗೆ ವಿವಿಧ ಬಗೆಯ ಟ್ರಸ್ಟ್ಗಳಿವೆ. ಅವುಗಳು ಈ ಕೆಳಕಂಡಂತಿವೆ.
ರಿವೋಕಬಲ್ ಮತ್ತು ಇರಿವೋಕಬಲ್: ಒಪ್ಪಂದವು ಟ್ರಸ್ಟ್ಗೆ ಚಾಲನೆ ಕೊಡುವ ಅಧಿಕಾರವನ್ನು ಆಥರ್ಗೆ ನೀಡಿದಲ್ಲಿ ಅದನ್ನು ರಿವೋಕಬಲ್ ಎನ್ನಲಾಗುತ್ತದೆ. ಯಾವಾಗ ಒಪ್ಪಂದವು ಆಥರ್ಗೆ ಅಂಥ ಅಧಿಕಾರವನ್ನು ನೀಡುವುದಿಲ್ಲವೋ ಅದನ್ನು ಇರಿವೋಕಬಲ್ ಟ್ರಸ್ಟ್ ಎನ್ನಲಾಗುತ್ತದೆ.
ಸಾರ್ವಜನಿಕ ಮತ್ತು ಖಾಸಗಿ: ಫಲಾನುಭವಿಗಳ ಸ್ಥಾನಮಾನದ ಮೇಲೆ ಇದು ಅವಲಂಬಿತ ಆಗಿರುತ್ತದೆ. ದಾನ ಅಥವಾ ದೇಣಿಗೆ ಉದ್ದೇಶಕ್ಕಾದಲ್ಲಿ ಇದು ಸಾರ್ವಜನಿಕ ಆಗುತ್ತದೆ. ಒಂದು ವೇಳೆ ಕುಟುಂಬ ಸದಸ್ಯರಿಗಾಗಿ ಸೃಷ್ಟಿಯಾಗಿರುವಂಥದ್ದಾದಲ್ಲಿ ಖಾಸಗಿ ಟ್ರಸ್ಟ್ ಆಗುತ್ತದೆ.
ಲಿವಿಂಗ್ ಮತ್ತು ಟೆಸ್ಟಮೆಂಟರಿ: ಲಿವಿಂಗ್ ಟ್ರಸ್ಟ್ ಅಂದರೆ ಆಥರ್ ಜೀವಂತ ಇರುವಾಗಲೇ ಸೃಷ್ಟಿ ಆದಂಥದ್ದು. ಟೆಸ್ಟಮೆಂಟರಿ ಟ್ರಸ್ಟ್ ಅಂದರೆ ವಿಲ್ ಮೂಲಕ ಸೃಷ್ಟಿ ಆಗುವಂಥದ್ದು. ಆಥರ್ ಸಾವಿನ ನಂತರ ಅಸ್ತಿತ್ವಕ್ಕೆ ಬರುತ್ತದೆ.
ಸಂಕಲ್ಪಬದ್ಧ ಮತ್ತು ವಿವೇಚನಾಯುತ ಟ್ರಸ್ಟ್ (ಡೆಟರ್ಮಿನೇಟ್ ಮತ್ತು ಡಿಸ್ಕ್ರಿಷನರಿ ಟ್ರಸ್ಟ್): ಯಾವಾಗ ಟ್ರಸ್ಟಿಗಳು ಫಲಾನುಭವಿಗಳ ಪಾಲನ್ನು ನಿರ್ಧಾರ ಮಾಡುತ್ತಾರೋ ಅದು ವಿವೇಚನಾಯುತ ಟ್ರಸ್ಟ್. ಯಾವಾಗ ಫಲಾನುಭವಿಗಳ ಪಾಲು ನಿಗದಿ ಆಗಿರುತ್ತದೋ ಆಗ ಅದು ಸಂಕಲ್ಪಬದ್ಧ ಟ್ರಸ್ಟ್.
ಆ ನಂತರ ವಿವಾಹಿತ ಮಹಿಳೆಯರ ಆಸ್ತಿ ಕಾಯ್ದೆ ಎಂಬುದಿದೆ. ಉತ್ತರಾಧಿಕಾರಿ ಯೋಜನೆಯಲ್ಲಿ ಅದು ಕೂಡ ಮಹತ್ವದ ಸ್ಥಾನ ವಹಿಸುತ್ತದೆ.
ವಿವಾಹಿತ ಮಹಿಳೆಯರ ಆಸ್ತಿ ಕಾಯ್ದೆ ಸೆಕ್ಷನ್ 6, ವಿವಾಹಿತ ಮಹಿಳೆಯರ ಆಸ್ತಿ ಕಾಯ್ದೆ ಅಡಿಯಲ್ಲಿ ಗಂಡನು ಇನ್ಷೂರೆನ್ಸ್ ಪಾಲಿಸಿಯನ್ನು ಹೆಂಡತಿ ಮತ್ತು/ಅಥವಾ ಮಕ್ಕಳ ಹೆಸರಿಗೆ ಮಾಡಬಹುದು. ಆ ನಂತರ ಅದು ಅವರದೇ ಹಕ್ಕಿರುವ ಆಸ್ತಿ ಆಗುತ್ತದೆ. ಈ ಕ್ಲಾಸ್ ಅನ್ನು ಉತ್ತರಾಧಿಕಾರಿ ಯೋಜನೆಯಲ್ಲಿ ಬಹಳ ವಿಶಾಲವಾಗಿ ಬಳಸಲಾಗಿದೆ. ಈ ಕಾಯ್ದೆ ಅಡಿಯಲ್ಲಿ ಇನ್ಷೂರೆನ್ಸ್ ಪಾಲಿಸಿಯಿಂದ ಬರುವ ಹಣವು ಸಂಪೂರ್ಣವಾಗಿ ಯಾವುದೇ ಋಣಕ್ಕೆ ಒಳಪಟ್ಟಿರುವುದಿಲ್ಲ. ಇನ್ನು ಕಾಯ್ದೆಯ ಹೊರಗಿರುವ ಉದಾಹರಣೆ ಹೇಳುವುದಾದರೆ, ವೇತನದಾರರಾದಲ್ಲಿ ಅವರಿಗೆ ನೀಡಿದ ಸಾಲಕ್ಕೆ, ಬರಬೇಕಾದ ಮೊತ್ತಕ್ಕೆ ಇನ್ಷೂರೆನ್ಸ್ ಮೊತ್ತವನ್ನು ಸಾಲಗಾರರು ಕ್ಲೇಮ್ ಮಾಡಬಹುದು.
ಅದೇ ರೀತಿ ಏಕವ್ಯಕ್ತಿ ವ್ಯಾಪಾರ ಸಂಸ್ಥೆಗೂ ಅನ್ವಯ ಆಗುತ್ತದೆ. ಒಂದು ವೇಳೆ ಮಾಲೀಕ ದಿವಾಳಿಯಾದಲ್ಲಿ ಸಾಲ ನೀಡಿದವರು ಇನ್ಷೂರೆನ್ಸ್ ಹಣದ ಮೇಲೆ ತಮ್ಮ ಹಕ್ಕನ್ನು ಸಾಧಿಸಬಹುದು. ಯಾವುದೇ ಇನ್ಷೂರೆನ್ಸ್ ಮೇಲೆ ಈ ರೀತಿಯ ಋಣಭಾರ ಬಿದ್ದಲ್ಲಿ ಯಾವ ಉದ್ದೇಶಕ್ಕೆ ಅದನ್ನು ಖರೀದಿ ಮಾಡಲಾಗುತ್ತದೋ, ಅಂದರೆ ಕುಟುಂಬದ ನೆರವಿಗೆ ಆ ಮೊತ್ತ ಸಿಗದಂತಾಗುತ್ತದೆ. ಅದೇ ಪಾಲಿಸಿಯನ್ನು ವಿವಾಹಿತ ಮಹಿಳೆಯರ ಆಸ್ತಿ ಕಾಯ್ದೆ ಅಡಿ ತಂದಿದ್ದಲ್ಲಿ ಇನ್ಷೂರೆನ್ಸ್ ಮೊತ್ತವು ಸಂಪೂರ್ಣವಾಗಿ ಆ ವ್ಯಕ್ತಿಯ ಪತ್ನಿಯ/ಮಕ್ಕಳ ಆಸ್ತಿಯಾಗುತ್ತದೆ.
ಸುರೇಶ್ ಏನು ಹೇಳುತ್ತಾರೆ ಗೊತ್ತಾ? ಎಸ್ಟೇಟ್ ಪ್ಲಾನಿಂಗ್ ಇಂಥ ಸಮಯದಲ್ಲೇ ಮಾಡಬೇಕು ಅಂತಿಲ್ಲ. ಯಾವಾಗ ಒಬ್ಬ ವ್ಯಕ್ತಿಗೆ ತನ್ನ ಆಸ್ತಿ ಬಗ್ಗೆ ಗೊತ್ತಾಗುತ್ತದೋ ಮತ್ತು ಎಸ್ಟೇಟ್ ಪ್ಲಾನಿಂಗ್ ಇಲ್ಲದೆ ತನ್ನ ಕುಟುಂಬ ಒಂದೇ ಒಂದು ರಾತ್ರಿ ಕಳೆಯಬಾರದು ಎಂಬ ಅರಿವು ಬರುತ್ತದೋ ಆ ತಕ್ಷಣವೇ ಮಾಡಿಬಿಡಬೇಕು ಎನ್ನುತ್ತಾರೆ.
(ಮೂಲ ಲೇಖಕರು: ಟೀನಾ ಜೈನ್ ಕೌಶಲ್ ಮಾಹಿತಿ ಕೃಪೆ: ಮನಿ9.ಕಾಮ್)
ಇದನ್ನೂ ಓದಿ: Minimum amount for investment: ನನ್ನ ಹೂಡಿಕೆ ಪಯಣ 11 ರೂಪಾಯಿ ಜತೆ ಶುರುವಾಗಿದ್ದು ಹೇಗೆ ಗೊತ್ತಾ?
(What is Estate Planning and why it is so important for an individual while taking major decisions. Here is an explainer)