
ಕ್ಯಾಲಿಫೋರ್ನಿಯಾ, ಜುಲೈ 25: ಕಾರ್ಪೊರೇಟ್ ಜಗತ್ತಿನಲ್ಲಿ ಬೇರೆ ಕಂಪನಿಗಳಿಗೆ ಹೋಲಿಸಿದರೆ ತಮ್ಮ ಸಂಸ್ಥೆಯಲ್ಲಿ ಅತಿಹೆಚ್ಚು ಬಿಲಿಯನೇರ್ಗಳಿದ್ದಾರೆ ಎಂದು ಎನ್ವಿಡಿಯಾ ಸಹ-ಸಂಸ್ಥಾಪಕ ಹಾಗೂ ಸಿಇಒ ಜೆನ್ಸೆನ್ ಹುವಾಂಗ್ (Jensen Huang) ಹೇಳಿದ್ದಾರೆ. ಅವರ ಪ್ರಕಾರ ಯಶಸ್ವಿ ಉದ್ಯಮ ನಡೆಸಲು ದೊಡ್ಡ ತಂಡವೇ ಆಗಬೇಕಿಲ್ಲ. ಚಿಕ್ಕದಾದ ಸಣ್ಣ ತಂಡವಿದ್ದರೆ ಸಾಕು.
‘ಜಗತ್ತಿನಲ್ಲಿ ಯಾವುದೇ ಸಿಇಒಗಿಂತ ನನ್ನ ಮ್ಯಾನೇಜ್ಮೆಂಟ್ ಟೀಮ್ನಲ್ಲಿ ನಾನು ಹೆಚ್ಚು ಬಿಲಿಯನೇರ್ಗಳನ್ನು ಸೃಷ್ಟಿಸಿದ್ದೇನೆ. ಅವರು ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ನನ್ನ ಪರಿಧಿಯಲ್ಲಿ ಯಾರ ಬಗ್ಗೆಯೂ ಬೇಸರಪಡುವಂಥದ್ದಿಲ್ಲ’ ಎಂದು ಹುವಾಂಗ್ ತಿಳಿಸಿದ್ದಾರೆ.
ಉದ್ಯಮ ಯಶಸ್ಸಿಗೆ ದೊಡ್ಡ ತಂಡವೇ ಆಗಬೇಕಿಲ್ಲ. ಸಣ್ಣ ತಂಡವಿದ್ದರೆ ಸಾಕು ಎಂದು ಅಭಿಪ್ರಾಯಪಟ್ಟ ಹುವಾಂಗ್, ಇದಕ್ಕೆ ಓಪನ್ಎಐ ಮತ್ತು ಡೀಪ್ಸೀಕ್ ಕಂಪನಿಗಳ ಉದಾಹರಣೆ ಕೊಟ್ಟಿದ್ದಾರೆ. ಈ ಎರಡು ಕಂಪನಿಗಳು ಸುಮಾರು 150 ಎಐ ರಿಸರ್ಚರ್ಗಳೊಂದಿಗೆ ಆರಂಭವಾಗಿದ್ದುವು. ಎನ್ವಿಡಿಯಾ ಸಿಇಒ ಪ್ರಕಾರ ಅಷ್ಟು ಉದ್ಯೋಗಿಗಳನ್ನು ಇಟ್ಟುಕೊಂಡು ಜಾಗತಿಕ ಮಟ್ಟದ ಕಂಪನಿಗಳನ್ನು ನಿರ್ಮಿಸಲು ಸಾಧ್ಯವಂತೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ನಡೆಸುವ ಜನಕಲ್ಯಾಣ ಯೋಜನೆಗಳ ಪಟ್ಟಿ
‘150 ಜನರು ಇರುವುದೇನೂ ಸಣ್ಣ ತಂಡವಲ್ಲ. ಸರಿಯಾದ ಇನ್ಫ್ರಾಸ್ಟ್ರಕ್ಚರ್ ಇರುವ ಒಳ್ಳೆಯ ಗಾತ್ರದ ತಂಡ’ ಎಂದೆನ್ನುತ್ತಾರೆ.
ಪೋಡ್ಕ್ಯಾಸ್ಟ್ವೊಂದರಲ್ಲಿ ಮಾತನಾಡುತ್ತಿದ್ದ ಅವರು, ಮಾತು ಮುಂದುವರಿಸಿ, ಸರಿಯಾದ ಉದ್ಯೋಗಿಗಳಿಗೆ ಉತ್ತಮ ವೇತನ ನೀಡುವುದು ಸರಿಯಾದ ಕ್ರಮ ಎನ್ನುತ್ತಾರೆ.
‘150 ಎಐ ರಿಸರ್ಚರ್ಸ್ ಇರುವ ಒಂದು ಸ್ಟಾರ್ಟಪ್ ಅನ್ನು 20 ಬಿಲಿಯನ್, 30 ಬಿಲಿಯನ್ ಡಾಲರ್ ತೆರಲು ಸಿದ್ಧರಿರುವ ನೀವು ಯಾಕೆ ಒಬ್ಬ ಟಾಪ್ ರಿಸರ್ಚರ್ಗೆ ಅಷ್ಟು ಸಂಭಾವನೆ ಕೊಡಬಾರದು?’ ಎಂದು ಕೇಳಿದ್ದಾರೆ. ಅಂದರೆ, ಒಂದು ಉತ್ತಮ ತಂಡವನ್ನು ದೊಡ್ಡ ಬೆಲೆಗೆ ಖರೀದಿಸುವ ಬದಲು ಉತ್ತಮ ತಂಡವನ್ನು ಸ್ವಂತವಾಗಿ ಕಟ್ಟುವುದು ಸರಿ ಎಂಬುದು ಹುವಾಂಗ್ ಮಾತಿನ ಇಂಗಿತ.
ಇದನ್ನೂ ಓದಿ: ಇವತ್ತು ಆದಾಯ ತೆರಿಗೆ ದಿನ; ಭಾರತದ ಇನ್ಕಮ್ ಟ್ಯಾಕ್ಸ್ ಸಿಸ್ಟಂ ಬಗ್ಗೆ ಕುತೂಹಲಕಾರಿ ಸಂಗತಿಗಳು
ಮೆಟಾ ಸಂಸ್ಥೆಯು ಒಬ್ಬ ಎಐ ರಿಸರ್ಚರ್ ಅನ್ನು ನಾಲ್ಕು ವರ್ಷಗಳಿಗೆ ಒಂದು ಬಿಲಿಯನ್ ಡಾಲರ್ ಮೊತ್ತ ಸಂಭಾವನೆಗೆ ನೇಮಕಾತಿ ಮಾಡಿಕೊಂಡಿದೆ. ಜೆನ್ಸೆನ್ ಹುವಾಂಗ್ ಪ್ರಕಾರ, ಎಐ ರಿಸರ್ಚರ್ಗಳಿಗೆ ಭಾರೀ ಬೇಡಿಕೆ ಇದೆ. ಅವರು ಕೋಡ್ ಅನ್ನಷ್ಟೇ ಬರೆಯುತ್ತಿಲ್ಲ, ಭವಿಷ್ಯ ನಿರ್ಮಿಸುತ್ತಿದ್ದಾರೆ ಎಂದೆನ್ನುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ