ನವದೆಹಲಿ, ಮಾರ್ಚ್ 27: 2023ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ (Current Account Deficit) 10.5 ಬಿಲಿಯನ್ ಡಾಲರ್ಗೆ ಇಳಿದಿದೆ. ಆರ್ಬಿಐ ನಿನ್ನೆ ಮಂಗಳವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಈಗ ಚಾಲ್ತಿ ಖಾತೆ ಅಂತರವು ಜಿಡಿಪಿಗೆ ಶೇ. 1.2ರಷ್ಟಿದೆ. ಹಿಂದಿನ ಕ್ವಾರ್ಟರ್ನಲ್ಲಿ, ಅಂದರೆ 2023ರ ಜುಲೈನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಸಿಎಡಿ 11.4 ಬಿಲಿಯನ್ ಡಾಲರ್ ಇತ್ತು. ಇನ್ನು, ವರ್ಷದ ಹಿಂದೆ ಇದೇ ಅವಧಿಯಲ್ಲಿ, ಅಂದರೆ 2022ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಸಿಎಡಿ 16.8 ಬಿಲಿಯನ್ ಡಾಲರ್ ಇತ್ತು.
ಸರಕು ವ್ಯಾಪಾರ ಕೊರತೆ ಹಿಂದಿನ ಕ್ವಾರ್ಟರ್ಗಿಂತ ತುಸು ಹೆಚ್ಚಿದೆ. ವರದಿ ಪ್ರಕಾರ 2023ರ ಮೂರನೇ ಕ್ವಾರ್ಟರ್ನಲ್ಲಿ ಮರ್ಚಂಡೈಸ್ ಟ್ರೇಡ್ ಡೆಫಿಸಿಟ್ 71.3 ಬಿಲಿಯನ್ ಡಾಲರ್ ಇತ್ತು. ಕೊನೆಯ ಕ್ವಾರ್ಟರ್ನಲ್ಲಿ ಅದು 71.6 ಬಿಲಿಯನ್ ಡಾಲರ್ಗೆ ಏರಿದೆ. ಆದರೆ, ಸರ್ವಿಸ್ ವಲಯದ ರಫ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5.2ರಷ್ಟು ಹೆಚ್ಚಾಗಿದೆ. ಸಾಫ್ಟ್ವೇರ್, ಟ್ರಾವಲ್ ಸರ್ವಿಸ್ನ ರಫ್ತು ಹೆಚ್ಚಾಗಿದೆ.
ಏಪ್ರಿಲ್ನಿಂದ ಡಿಸೆಂಬರ್ವರೆಗೆ ವಿದೇಶೀ ಹೂಡಿಕೆ ಬಹಳಷ್ಟು ಕಡಿಮೆ ಆಗಿರುವುದು ಅಂಕಿ ಅಂಶದಿಂದ ತಿಳಿದುಬರುತ್ತದೆ. 2022ರ ಏಪ್ರಿಲ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ನಿವ್ವಳ ಎಫ್ಡಿಐ ಒಳಹರಿವು 21.6 ಬಿಲಿಯನ್ ಡಾಲರ್ ಇತ್ತು. ಅದೇ 2023ರಲ್ಲಿ ಇದೇ ಅವಧಿಯಲ್ಲಿ ಭಾರತಕ್ಕೆ ಬಂದ ನಿವ್ವಳ ಎಫ್ಡಿಐ ಹೂಡಿಕೆ ಮೊತ್ತ ಕೇವಲ 8.5 ಬಿಲಿಯನ್ ಡಾಲರ್ ಮಾತ್ರ.
ಇದನ್ನೂ ಓದಿ: ಅಮೇಜಾನ್ನಲ್ಲಿ ಮಾರಾಟ ವಂಚನೆ ತಡೆಯಲು 15,000 ಮಂದಿ ಪರಿಣಿತರ ನೇಮಕ; 10,000 ಕೋಟಿ ರೂ ವೆಚ್ಚ
2023ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲಿ ನಿವ್ವಳ ಎಫ್ಡಿಐ ಹೂಡಿಕೆ 4.2 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 2 ಬಿಲಿಯನ್ ಡಾಲರ್ ಮಾತ್ರ ಇತ್ತು. ಇನ್ನು ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆ ವರ್ಷದ ಹಿಂದೆ 4.6 ಬಿಲಿಯನ್ ಡಾಲರ್ ಇದ್ದದ್ದು 2023ರಲ್ಲಿ 12 ಬಿಲಿಯನ್ ಡಾಲರ್ ಆಗಿದೆ.
ಚಾಲ್ತಿ ಖಾತೆ ಅಂತರ ಅಥವಾ ಕೊರತೆ ಎಂದರೆ ದೇಶದ ಒಟ್ಟಾರೆ ಆಮದು ಮತ್ತು ರಫ್ತು ಮಧ್ಯೆ ಇರುವ ಅಂತರವಾಗಿದೆ. ರಫ್ತಿಗಿಂತ ಆಮದು ಪ್ರಮಾಣ ಹೆಚ್ಚಾಗಿದ್ದರೆ ಆಗ ಅದು ಕರೆಂಟ್ ಅಕೌಂಟ್ ಡೆಫಿಸಿಟ್ ಎನಿಸುತ್ತದೆ. ಒಂದು ವೇಳೆ ಆಮದಿಗಿಂತ ರಫ್ತು ಹೆಚ್ಚಾಗಿದ್ದರೆ ಆಗ ಅದನ್ನು ಕರೆಂಟ್ ಅಕೌಂಟ್ ಸರ್ಪ್ಲಸ್ ಎನ್ನುತ್ತಾರೆ.
ಇದನ್ನೂ ಓದಿ: ಭಾರತ ಈಗ ಚಿಪ್ ತಯಾರಿಸುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು: ರಘುರಾಮ್ ರಾಜನ್
ಭಾರತ ಮೊದಲಿಂದಲೂ ಆಮದು ಹೆಚ್ಚಿರುವ ದೇಶವಾಗಿದೆ. ಭಾರತ ಅತಿಹೆಚ್ಚು ಆಮದು ಮಾಡಿಕೊಳ್ಳುವ ಸರಕುಗಳಲ್ಲಿ ಪೆಟ್ರೋಲ್, ಚಿನ್ನ ಪ್ರಮುಖವಾದುದು. ಅಮೆರಿಕದಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ ಅಧಿಕ ಇದೆ. 194.8 ಬಿಲಿಯನ್ ಡಾಲರ್ ಡೆಫಿಸಿಟ್ ಇದೆ. ಜಿಡಿಪಿಗೆ ಹೋಲಿಸಿದರೆ ಇದು ಶೇ. 2.8ರಷ್ಟಿದೆ. ಚೀನಾದಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ 229 ಬಿಲಿಯನ್ ಡಾಲರ್ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ