ತುಟ್ಟಿ ಭತ್ಯೆ (Dearness Allowance) ಮತ್ತು ಡಿಯರ್ನೆಸ್ ರಿಲೀಫ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಬುಧವಾರ ಒಪ್ಪಿಗೆಯನ್ನು ಸೂಚಿಸಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲ ಆಗಲಿದೆ. ಶೇ 17ರಷ್ಟಿರುವುದು ಶೇ 28ಕ್ಕೆ ಏರಿಕೆ ಆಗಲಿದೆ. ಮೂಲಗಳು ಖಾತ್ರಿ ಪಡಿಸಿರುವಂತೆ, ಕಳೆದ ವರ್ಷ ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಡಿಎ ಮತ್ತು ಡಿಆರ್ ಏರಿಕೆಯನ್ನು ತಡೆಯಲಾಗಿತ್ತು. ಅದನ್ನು ಈಗ ಏರಿಕೆ ಮಾಡುವುದಕ್ಕೆ ಕೇಂದ್ರ ಸಂಪುಟವು ತೀರ್ಮಾನ ಕೈಗೊಂಡಿದೆ. ಈ ನಿರ್ಧಾರದಿಂದಾಗಿ ಲಕ್ಷಾಂತರ ಸಂಖ್ಯೆಯ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲ ಆಗಲಿದೆ. ಬಹಳ ಸಮಯದಿಂದ ಈ ಏರಿಕೆಗಾಗಿ ಅವರು ಎದುರು ನೋಡುತ್ತಿದ್ದರು.
ಏಳನೇ ವೇತನ ಆಯೋಗದ ಶಿಫಾರಸಿನಂತೆ ಡಿಯರ್ನೆಸ್ ಅಲೋವೆನ್ಸ್ ಮತ್ತು ಡಿಯರ್ನೆಸ್ ರಿಲೀಫ್ ಜುಲೈನಿಂದ ಮತ್ತೆ ಯಥಾ ಸ್ಥಿತಿಗೆ ಬರುತ್ತದೆ ಎಂಬ ನಿರೀಕ್ಷೆಯೊಂದಿಗೆ ಹಲವು ಮಾಧ್ಯಮಗಳು ವರದಿ ಮಾಡಿದ್ದರು. ಈ ಡಿಎ ಮತ್ತು ಡಿಆರ್ ಹೆಚ್ಚಳದ ಅನುಕೂಲವು ಜುಲೈ 1, 2021ರಿಂದ ಅನ್ವಯ ಆಗುತ್ತದೆ. ಈಗಿನ ನಿರ್ಧಾರದಿಂದ ಸರ್ಕಾರಕ್ಕೆ 34,400 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.
ಈ ಹಿಂದಿನ ವರದಿಗಳ ಪ್ರಕಾರವಾಗಿ, ಹಲವು ಅನುಮತಿಗಳು ಪಡೆಯಬೇಕಾಗಿರುವುದರಿಂದ ಡಿಎ ಹೆಚ್ಚಳಕ್ಕೆ ಇನ್ನೂ ಕೆಲ ಸಮಯ ಬೇಕಾಗಬಹುದು ಎನ್ನಲಾಗಿತ್ತು. ಒಂದು ವೇಳೆ ಆ ವರದಿಯಂತೆಯೇ ತಡವಾದಲ್ಲಿ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಬಾಕಿ ಮೊತ್ತ ಬರಲಿದೆ. ಜುಲೈ 1, 2021ರಿಂದ ಅನ್ವಯ ಆಗುವಂತೆಯೇ ಆ ಬಾಕಿ ಬರಲಿದೆ. ಸಂಪುಟದಿಂದ ಅನುಮತಿ ದೊರೆಯುವ ಮೊದಲಿಗೆ ಕನಿಷ್ಠ ಮೂರು ಡಿಎ ಕಂತು ಬಾಕಿ ಇತ್ತು. ಎರಡು ಕಳೆದ ವರ್ಷದ್ದು ಮತ್ತು ಈ ವರ್ಷದ್ದು ಒಂದು (1.1.2020, 1.7.2020 ಮತ್ತು 1.1.2021). ಮೂರು ಕಂತಿನ ಬಾಕಿ ಸೇರಿಸಿ ಶೇ 11ರಷ್ಟು ಡಿಎ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ.
ಇದನ್ನೂ ಓದಿ: 7th Pay Commission: 3ರಿಂದ 30,000 ರೂ. ತನಕ ಏರಿಕೆ ಆಗಲಿದೆ ಕೇಂದ್ರ ಸರ್ಕಾರಿ ನೌಕರರ ವೇತನ
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ವಾರಕ್ಕೆ 4 ದಿನ- 40 ಗಂಟೆಗಳ ಕೆಲಸದ ಪದ್ಧತಿ ಪರಿಚಯಿಸುವ ಪ್ರಸ್ತಾವ ಇಲ್ಲ
(7th pay commission: Central government approved to hike DA and DR of central government employees and pensioners from 17% to 28%.)
Published On - 4:26 pm, Wed, 14 July 21