ಕೇಂದ್ರ ಸರ್ಕಾರಿ ನೌಕರರಿಗೆ ವಾರಕ್ಕೆ 4 ದಿನ- 40 ಗಂಟೆಗಳ ಕೆಲಸದ ಪದ್ಧತಿ ಪರಿಚಯಿಸುವ ಪ್ರಸ್ತಾವ ಇಲ್ಲ
ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ವಾರಕ್ಕೆ 4 ದಿನ ಅಥವಾ 40 ಗಂಟೆಗಳ ಅವಧಿಯ ಕೆಲಸದ ಪದ್ಧತಿಯನ್ನು ಪರಿಚಯಿಸುವ ಯೋಜನೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ವಾರಕ್ಕೆ ನಾಲ್ಕು ದಿನ ಅಥವಾ 4 ಗಂಟೆಗಳ ಕೆಲಸದ ಪದ್ಧತಿಯನ್ನು ಪರಿಚಯಿಸುವ ಯಾವುದೇ ಯೋಜನೆಯು ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಸರ್ಕಾರವು ಬುಧವಾರ ಸಂಸತ್ನಲ್ಲಿ ಮಾಹಿತಿ ನೀಡಿದೆ. ಕೇಂದ್ರ ಕಾರ್ಮಿಕ ಸಚಿವರಾದ ಸಂತೋಷ್ ಗಂಗ್ವರ್ ಅವರು ಲೋಕಸಭೆಯಲ್ಲಿ ಲಿಖಿತ ಪ್ರತಿಕ್ರಿಯೆಯನ್ನು ನೀಡಿ, ಕೇಂದ್ರ ಸರ್ಕಾರಿ ಅಧಿಕಾರಿಗಳಿಗೆ ಸದ್ಯಕ್ಕೆ ವಾರಕ್ಕೆ 4 ದಿನ ಅಥವಾ ವಾರದಲ್ಲಿ 40 ಗಂಟೆಗಳ ಕೆಲಸದ ಪದ್ಧತಿಯನ್ನು ಪರಿಚಯಿಸುವ ಪ್ರಸ್ತಾವ ಇಲ್ಲ ಎಂದು ಹೇಳಿದ್ದಾರೆ.
ಸಚಿವರು ಮಾತನಾಡಿ, ಕಾರ್ಯನಿರ್ವಹಣೆ ದಿನಗಳು/ರಜಾದಿನ/ಭಾರತ ಸರ್ಕಾರದ ಆಡಳಿತ ಕಚೇರಿಗಳಲ್ಲಿನ ಕಾರ್ಯ ನಿರ್ವಹಣೆ ಅವಧಿಯನ್ನು ಆಯಾ ಕೇಂದ್ರ ವೇತನ ಆಯೋಗವು ಶಿಫಾರಸು ಮಾಡುತ್ತದೆ. ನಾಲ್ಕನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ವಾರದಲ್ಲಿ ಐದು ದಿನಗಳು ಮತ್ತು ದಿನಕ್ಕೆ ಎಂಟೂವರೆ ಗಂಟೆಗಳ ಕೆಲಸವನ್ನು ಭಾರತ ಸರ್ಕಾರದ ನಾಗರಿಕ ಆಡಳಿತಾತ್ಮಕ ಕಚೇರಿಗಳಲ್ಲಿ ಪರಿಚಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಮುಂದುವರಿದು ಮಾತನಾಡಿದ ಕಾರ್ಮಿಕ ಸಚಿವ ಗಂಗ್ವರ್, ಏಳನೇ ವೇತನ ಆಯೋಗದ ಶಿಫಾರಸಿನಂತೆ ಈಗಿರುವ ಸ್ಥಿತಿಯನ್ನೇ ಮುಂದುವರಿಸಿಕೊಂಡು ಹೋಗುವಂತೆ ತಿಳಿಸಲಾಗಿದೆ ಎಂದಿದ್ದಾರೆ. ಹೊಸ ಕಾರ್ಮಿಕ ಸಂಹಿತೆಯಲ್ಲಿ ವಾರದಲ್ಲಿ ನಾಲ್ಕು ದಿನ- 40 ಗಂಟೆಗಳ ಕೆಲಸದ ಪದ್ಧತಿ ಬಗ್ಗೆ ಶಿಫಾರಸು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: New Wage Code: ಏಪ್ರಿಲ್ನಿಂದ ನಿಮ್ಮ ಕೈಗೆ ಬರುವ ಸಂಬಳದ ಲೆಕ್ಕಾಚಾರವೇ ಆಗಲಿದೆ ಬದಲು