GST Collection: ಜನವರಿಯಲ್ಲಿ 1.55 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ; ಏಪ್ರಿಲ್ ನಂತರ ಗರಿಷ್ಠ ಗಳಿಕೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ಟಿ ಸಂಗ್ರಹ 1.50 ಲಕ್ಷ ಕೋಟಿ ದಾಟಿರುವುದು ಇದೇ ಮೂರನೇ ಬಾರಿ ಎಂದು ಹಣಕಾಸು ಸಚಿವಾಲಯ ಹೇಳಿದೆ.
ನವದೆಹಲಿ: ಜನವರಿ ತಿಂಗಳಲ್ಲಿ 1.55 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ತಿಂಗಳೊಂದರಲ್ಲಿ ಸಂಗ್ರಹವಾದ ಎರಡನೇ ಅತಿಹೆಚ್ಚಿನ ಜಿಎಸ್ಟಿ ಸಂಗ್ರಹ (GST Collection) ಇದಾಗಿದೆ. ಈ ಹಿಂದೆ 2022ರ ಏಪ್ರಿಲ್ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಜನವರಿ 31ರ ಸಂಜೆ 5 ಗಂಟೆ ವೇಳೆಗೆ ತಿಂಗಳ ಜಿಎಸ್ಟಿ ಸಂಗ್ರಹ 1,55,922 ಕೋಟಿ ರೂ. ಆಗಿದೆ. ಈ ಪೈಕಿ 28,963 ಕೋಟಿ ರೂ. ಕೇಂದ್ರ ಜಿಎಸ್ಟಿ, 36,730 ಕೋಟಿ ರೂ. ರಾಜ್ಯ ಜಿಎಸ್ಟಿ, 79,599 ಕೋಟಿ ರೂ. ಐಜಿಎಸ್ಟಿ (ಆಮದು ಸರಕುಗಳಿಂದ ಸಂಗ್ರಹಿಸಿದ 37,118 ಕೋಟಿ ರೂ. ಸೇರಿ) ಹಾಗೂ 10,630 ಕೋಟಿ ರೂ. ಸೆಸ್ (ಆಮದು ಸರಕುಗಳಿಂದ ಸಂಗ್ರಹಿಸಿರುವ 768 ಕೋಟಿ ರೂ. ಸೇರಿ) ಒಳಗೊಂಡಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ಹಣಕಾಸು ವರ್ಷದ ಜನವರಿ ವರೆಗಿನ ಅವಧಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ 2023ರ ಜನವರಿ ವರೆಗೆ ಜಿಎಸ್ಟಿ ಆದಾಯ ಶೇ 24ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ಟಿ ಸಂಗ್ರಹ 1.50 ಲಕ್ಷ ಕೋಟಿ ದಾಟಿರುವುದು ಇದೇ ಮೂರನೇ ಬಾರಿ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಇಂದು ಕೇಂದ್ರ ಬಜೆಟ್; ಮಂಡನೆ ಸಮಯ, ಲೈವ್ ವಿಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ
‘ಕಳೆದ ಒಂದು ವರ್ಷದಲ್ಲಿ ತೆರಿಗೆ ಮೂಲಗಳನ್ನು ಹೆಚ್ಚಿಸಲು ಮತ್ತು ಸಹಕಾರ ಹೆಚ್ಚಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಎಸ್ಟಿ ರಿಟರ್ನ್ಸ್ ಫೈಲ್ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ’ ಎಂದು ಸಚಿವಾಲಯ ಹೇಳಿದೆ.
2022ರ ಅಕ್ಟೋಬರ್ – ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟು 2.42 ಕೋಟಿ ಜಿಎಸ್ಟಿ ರಿಟರ್ನ್ಸ್ ಫೈಲ್ ಮಾಡಲಾಗಿದೆ. ಅದಕ್ಕೂ ಹಿಂದಿನ ವರ್ಷದ ಅಕ್ಟೋಬರ್ – ಡಿಸೆಂಬರ್ ತ್ರೈಮಾಸಿಕದಲ್ಲಿ 2.19 ಕೋಟಿ ಜಿಎಸ್ಟಿ ರಿಟರ್ನ್ಸ್ ಫೈಲ್ ಮಾಡಲಾಗಿತ್ತು. ಇದು ತೆರಿಗೆ ಮೂಲಗಳನ್ನು ಹೆಚ್ಚಿಸಲು ಮತ್ತು ಸಹಕಾರ ಹೆಚ್ಚಿಸಲು ಕೈಗೊಂಡಿರುವ ಹಲವು ಕ್ರಮಗಳ ಪರಿಣಾಮವಾಗಿದೆ ಎಂದೂ ಸಚಿವಾಲಯ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ