GST Council Meeting: ತೆರಿಗೆ ಹೆಚ್ಚಳ ಇಲ್ಲ, ಅಪರಾಧ ನಿಯಮ ತುಸು ಸಡಿಲ; ಜಿಎಸ್ಟಿ ಮಂಡಳಿ ಸಭೆ ಬಳಿಕ ನಿರ್ಮಲಾ ಸೀತಾರಾಮನ್
ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸರಕು ಮತ್ತು ಸೇವಾ ತೆರಿಗೆ (GST) ಮಂಡಳಿಯ 48ನೇ ಸಭೆಯ ಬಳಿಕ ನಿರ್ಮಲಾ ಸೀತಾರಾಮನ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ನವದೆಹಲಿ: ಆನ್ಲೈನ್ ಗೇಮಿಂಗ್ (Online Gaming) ಮೇಲಿನ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ಪ್ರಮುಖ ಅಜೆಂಡಾಗಳ ಬಗ್ಗೆ ಈ ಬಾರಿಯ ಸರಕು ಮತ್ತು ಸೇವಾ ತೆರಿಗೆ (GST) ಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದರು. ಜಿಎಸ್ಟಿ ಮಂಡಳಿಯ 48ನೇ ಸಭೆ ಮುಕ್ತಾಯಗೊಂಡ ಬಳಿಕ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿಯ ಸಭೆಯಲ್ಲಿ ಯಾವುದೇ ರೀತಿಯ ತೆರಿಗೆ ಹೆಚ್ಚಳದ ನಿರ್ಧಾರ ಕೈಗೊಂಡಿಲ್ಲ. ಹೊಸದಾಗಿ ಯಾವುದೇ ವಸ್ತುವಿನ ಮೇಲೆ ತೆರಿಗೆ ವಿಧಿಸಿಲ್ಲ. ಕೇವಲ ಸ್ಪಷ್ಟೀಕರಣ ನೀಡಲು ಒತ್ತು ನೀಡಲಾಗಿದೆ ಮತ್ತು ಜಿಎಸ್ಟಿ ಅಪರಾಧಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಮಾತ್ರ ತುಸು ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು. ತಂಬಾಕು ಮತ್ತು ಗುಟ್ಖಾ ಮೇಲಿನ ತೆರಿಗೆ ಬಗ್ಗೆ ಚರ್ಚಿಸಲು ಸಮಯದ ಅಭಾವದ ಕಾರಣ ಈ ಸಭೆಯಲ್ಲಿ ಸಾಧ್ಯವಾಗಿಲ್ಲ. ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಬಳಿಕ ಮಾತನಾಡಿದ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ, ಜಿಎಸ್ಟಿ ಕಾನೂನಿನ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗಿರುವ ಕೆಲವು ನಿಯಮಗಳಲ್ಲಿ ತುಸು ಸಡಿಲಿಕೆ ಮಾಡಲಾಗಿದೆ. ನಕಲಿ ಇನ್ವಾಯ್ಸ್ ಸಲ್ಲಿಸುವುದನ್ನು ಹೊರತುಪಡಿಸಿದಂತೆ ಇತರ ಅಪರಾಧಗಳ ಮೇಲಿನ ಕಾನೂನು ಕ್ರಮ ಕೈಗೊಳ್ಳುವ ಮಿತಿಯನ್ನು 1 ಕೋಟಿ ರೂ.ನಿಂದ 2 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಪಶು ಆಹಾರ ತಯಾರಿಕಾ ವಲಯದ ಬೇಡಿಕೆ ಗಮನದಲ್ಲಿಟ್ಟುಕೊಂಡು ಬೇಳೆಕಾಳುಗಳ ಸಿಪ್ಪೆಯ ಮೇಲೆ ವಿಧಿಸಲಾಗುತ್ತಿದ್ದ ಶೇಕಡಾ 5ರ ಜಿಎಸ್ಟಿಯನ್ನು ರದ್ದುಪಡಿಸಲಾಗಿದೆ ಎಂದೂ ಅವರು ತಿಳಿಸಿದರು. ವೈದ್ಯಕೀಯ, ಆರೋಗ್ಯ ವಿಮೆಯ ನೋಕ್ಲೇಮ್ ಬೋನಸ್ ಮೇಲೆ ಯಾವುದೇ ರೀತಿಯ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Union Budget 2023: ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್; ನಿರ್ಮಲಾ ಸೀತಾರಾಮನ್
ಈ ಬಾರಿಯ ಜಿಎಸ್ಟಿ ಮಂಡಳಿ ಸಭೆಯಲ್ಲಿ ಆನ್ಲೈನ್ ಗೇಮಿಂಗ್ ಮೇಲೆ ಜಿಎಸ್ಟಿ ಪ್ರಮಾಣ ಹೆಚ್ಚಿಸುವುದೂ ಸೇರಿದಂತೆ ಹಲವು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ, ಸಮಯದ ಅಭಾವದ ಕಾರಣ ಈ ಯಾವ ವಿಚಾರಗಳನ್ನೂ ಈ ಬಾರಿ ಪರಿಗಣಿಸಿಲ್ಲ. ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ಜಿಎಸ್ಟಿ ಮಂಡಳಿಯ 47ನೇ ಸಭೆ ಜೂನ್ 28 ಮತ್ತು 29ರಂದು ಚಂಡೀಗಢದಲ್ಲಿ ನಡೆದಿತ್ತು. ಪ್ಯಾಕೇಜ್ಡ್ ಮತ್ತು ಲೇಬಲ್ ಅಂಟಿಸಿರುವ ಮೊಸರು, ಲಸ್ಸಿ, ಮಜ್ಜಿಗೆಯನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಮಹತ್ವದ ನಿರ್ಧಾರವನ್ನು 47ನೇ ಸಭೆಯಲ್ಲಿ ಕೈಗೊಳ್ಳಲಾಗಿತ್ತು.
ಜಿಎಸ್ಟಿ ನ್ಯಾಯಾಧಿಕರಣದ ಬಗ್ಗೆ ಚರ್ಚೆ; ಬೊಮ್ಮಾಯಿ
ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂಯೆ ಎಲ್ಲ ರಾಜ್ಯಗಳ ಪ್ರತಿನಿಧಿಗಳೂ ಭಾಗಿಯಾಗಿದ್ದರು. ಬಹಳಷ್ಟು ಜಿಎಸ್ಟಿ ಮೊಕದ್ದಮೆಗಳು ಹೈಕೋರ್ಟ್ ಮೆಟ್ಟಿಲೇರುತ್ತಿವೆ. ಹೀಗಾಗಿ, ಪರ್ಯಾಯವಾಗಿ ಜಿಸ್ಟಿ ನ್ಯಾಯಾಧಿಕರಣ ರಚನೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ನ್ಯಾಯಾಧಿಕರಣ ರಚನೆಯಿಂದ ಬಹಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:16 pm, Sat, 17 December 22