BYJU’s: ಬೈಜೂಸ್ಗೆ ಮತ್ತೊಂದು ಸಂಕಷ್ಟ; ಕೋರ್ಸ್ ಖರೀದಿಗೆ ಒತ್ತಡ ಹೇರಿದ ಆರೋಪದಲ್ಲಿ ರವೀಂದ್ರನ್ಗೆ ಸಮನ್ಸ್
ಪ್ರಕರಣಕ್ಕೆ ಸಂಬಂಧಿಸಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ರವೀಂದ್ರನ್ ಅವರಿಗೆ ಆಯೋಗ ಸೂಚಿಸಿದೆ. ವಿಚಾರಣೆಗೆ ಬರುವಾಗ ಬೈಜೂಸ್ನ ಕೋರ್ಸ್ಗಳಿಗೆ ಸಂಬಂಧಿಸಿದ ವಿವರಗಳು, ಶುಲ್ಕ, ಹಣ ಪಡೆದ ವಿವರ ಇತ್ಯಾದಿ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ಸೂಚಿಸಿದೆ.
ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಹೆಣಗಾಡುತ್ತಿರುವ ಬೆಂಗಳೂರು ಮೂಲದ ಎಜುಟೆಕ್ ಕಂಪನಿ ಬೈಜೂಸ್ಗೆ (BYJU’s) ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕಂಪನಿಯ ಕೋರ್ಸ್ಗಳನ್ನು ಖರೀದಿಸುವಂತೆ ಮಕ್ಕಳು ಮತ್ತು ಪಾಲಕರ ಮೇಲೆ ಒತ್ತಡ ಹೇರಿದ ಆರೋಪದಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಬೈಜು ರವೀಂದ್ರನ್ಗೆ (Byju Raveendran) ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಸಮನ್ಸ್ ನೀಡಿದೆ. ಕಂಪನಿಯು ಅಕ್ರಮಗಳಲ್ಲಿ ತೊಡಗಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಕೆಲವು ಗ್ರಾಹಕರು ತಮ್ಮ ತಮ್ಮ ಹೂಡಿಕೆ ಅಪಾಯಕ್ಕೆ ಸಿಲುಕಿದೆ ಎಂದು ದೂರಿರುವುದಾಗಿ ಆಯೋಗ ತಿಳಿಸಿದೆ.
‘ಮಕ್ಕಳಿಗಾಗಿ ಕೋರ್ಸ್ಗಳನ್ನು ಖರೀದಿಸುವಂತೆ ಪಾಲಕರ ಮೇಲೆ ಬೈಜೂಸ್ ಒತ್ತಡ ಹೇರಿರುವುದು ಮತ್ತು ಅಕ್ರಮಗಳಲ್ಲಿ ತೊಡಗಿಕೊಂಡಿರುವುದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ತಮ್ಮ ಉಳಿತಾಯ ಮತ್ತು ಭವಿಷ್ಯಕ್ಕಾಗಿ ಕೂಡಿಟ್ಟ ಹಣ ಅಪಾಯಕ್ಕೆ ಸಿಲುಕಿದೆ ಎಂದು ಕೆಲವು ಗ್ರಾಹಕರು ದೂರಿರುವುದೂ ವರದಿಗಳಿಂದ ಗೊತ್ತಾಗಿದೆ’ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: BYJU’S Turmoil: ಕೇರಳದಲ್ಲಿ ಕಚೇರಿ ಮುಚ್ಚಿದ ಬೈಜೂಸ್, ಉದ್ಯೋಗಿಗಳ ವಜಾ; ವರದಿ
‘ಪೋಷಕರು ಅಥವಾ ಮಕ್ಕಳನ್ನು ಸಾಲ ಆಧಾರಿತ ಒಪ್ಪಂದಗಳಿಗೆ ಒಳಪಡಿಸಿ ನಂತರ ಶೋಷಣೆಗೆ ಒಳಪಡಿಸುವುದು ಮತ್ತು ಈ ರೀತಿಯ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಮಕ್ಕಳ ಕಲ್ಯಾಣಕ್ಕೆ ವಿರುದ್ಧವಾಗಿದೆ. ಇದು ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯ ಸೆಕ್ಷನ್ 13 ಮತ್ತು 14ರ ಉಲ್ಲಂಘನೆ’ ಎಂದು ಆಯೋಗ ಹೇಳಿದೆ.
ಖುದ್ದು ವಿಚಾರಣೆಗೆ ಹಾಜರಾಗಲು ಸೂಚನೆ
ಪ್ರಕರಣಕ್ಕೆ ಸಂಬಂಧಿಸಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ರವೀಂದ್ರನ್ ಅವರಿಗೆ ಆಯೋಗ ಸೂಚಿಸಿದೆ. ವಿಚಾರಣೆಗೆ ಬರುವಾಗ ಬೈಜೂಸ್ನ ಕೋರ್ಸ್ಗಳಿಗೆ ಸಂಬಂಧಿಸಿದ ವಿವರಗಳು, ಶುಲ್ಕ, ಹಣ ಪಡೆದ ವಿವರ ಇತ್ಯಾದಿ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ಸೂಚಿಸಿದೆ. ವಿಚಾರಣೆಗೆ ಹಾಜರಾಗದಿದ್ದಲ್ಲಿ ನಿಯಮಗಳ ಅನ್ವಯ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ.
ಬೈಜೂಸ್ ಉದ್ಯೋಗಿಗಳನ್ನು ಬಲವಂತವಾಗಿ ಕೆಲಸದಿಂದ ವಜಾಗೊಳಿಸುತ್ತಿದೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ಮೊದಲಿಗೆ ಕಂಪನಿಯ ತಿರುವನಂತಪುರ ಕಚೇರಿಯಿಂದ ಆರೋಪಗಳು ಕೇಳಿಬಂದಿದ್ದವು. ಈ ವಿಚಾರದಲ್ಲಿ ಕೇರಳ ಸರ್ಕಾರವೂ ಮಧ್ಯ ಪ್ರವೇಶಿಸಿತ್ತು. ಬಳಿಕ ಬೆಂಗಳೂರಿನ ಕಚೇರಿಯಿಂದಲೂ ಬಲವಂತವಾಗಿ ಉದ್ಯೋಗಿಗಳ ರಾಜೀನಾಮೆ ಪಡೆಯಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ