Byju’s Layoffs: ಬೈಜೂಸ್ನಿಂದ 2,500 ಉದ್ಯೋಗಿಗಳ ವಜಾ, ವೆಚ್ಚ ಕಡಿತಕ್ಕಾಗಿ ಕ್ರಮ ಎಂದ ಸಿಇಒ
ಕಾರ್ಯಾಚರಣೆ ವೆಚ್ಚ ಕಡಿತ ಮಾಡುವುದಕ್ಕಾಗಿ 2,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಎಜುಟೆಕ್ ಕಂಪನಿ ಬೈಜೂಸ್ ಘೋಷಿಸಿದೆ. ಇದು ಒಟ್ಟು ಉದ್ಯೋಗಿಗಳ ಪೈಕಿ ಶೇಕಡಾ 5ರಷ್ಟಾಗಿರಲಿದೆ ಎಂದು ಕಂಪನಿ ತಿಳಿಸಿದೆ.
ನವದೆಹಲಿ: ಕಾರ್ಯಾಚರಣೆ ವೆಚ್ಚ ಕಡಿತ ಮಾಡುವುದಕ್ಕಾಗಿ 2,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ (Job Cuts) ಎಜುಟೆಕ್ ಕಂಪನಿ ಬೈಜೂಸ್ (Byju’s) ಘೋಷಿಸಿದೆ. ಇದು ಒಟ್ಟು 50,000 ಉದ್ಯೋಗಿಗಳ ಪೈಕಿ ಶೇಕಡಾ 5ರಷ್ಟಾಗಿರಲಿದೆ ಎಂದು ಕಂಪನಿ ತಿಳಿಸಿದೆ. ಉತ್ಪನ್ನ, ಕಂಟೆಂಟ್, ಮಾಧ್ಯಮ, ತಂತ್ರಜ್ಞಾನ ಸೇರಿದಂತೆ ಎಲ್ಲ ವಿಭಾಗಗಳಿಂದ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಕಂಪನಿಯಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿಲ್ಲ ಎಂದು ಒಪ್ಪಿಕೊಂಡಿದ್ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬೈಜು ರವೀಂದ್ರನ್ ಇತ್ತೀಚೆಗೆ ಉದ್ಯೋಗಿಗಳ ಕ್ಷಮೆ ಕೋರಿ ಇ-ಮೇಲ್ ಸಂದೇಶ ಕಳುಹಿಸಿದ್ದರು. ಇದರ ಬೆನ್ನಲ್ಲೇ, ಉದ್ಯೋಗ ಕಡಿತದ ಘೋಷಣೆ ಮಾಡಲಾಗಿದೆ.
ಈ ಪ್ರಕ್ರಿಯೆಯು ನಾವು ಉದ್ದೇಶಿಸಿದಂತೆ ಸುಗಮವಾಗಿಲ್ಲದಿದ್ದರೆ ನಾನು ನಿಮ್ಮ ಕ್ಷಮೆ ಕೋರುತ್ತೇನೆ. ಈ ಪ್ರಕ್ರಿಯೆ ಸುಗಮವಾಗಿ ಮತ್ತು ದಕ್ಷವಾಗಿ ನಡೆಯಬೇಕೆಂಬುದು ನಮ್ಮ ಉದ್ದೇಶವಾದದ್ದರಿಂದ ತರಾತುರಿ ಮಾಡುತ್ತಿಲ್ಲ. ಹೀಗಾಗಿ ಎಲ್ಲ ಸಂಬಂಧಪಟ್ಟ ತಂಡದ ಸದಸ್ಯರಿಗೆ ವೈಯಕ್ತಿಕವಾಗಿ, ಗೌರವದಿಂದ, ಸಹಾನುಭೂತಿಯಿಂದ ಮತ್ತು ತಾಳ್ಮೆಯಿಂದ ತಿಳಿಹೇಳುತ್ತಿದ್ದೇವೆ. ಒಟ್ಟಾರೆ ಉದ್ಯೋಗ ಕಡಿತವು ನಮ್ಮ ಒಟ್ಟು ಸಂಖ್ಯೆಯ ಶೇಕಡಾ 5ಕ್ಕಿಂತ ಹೆಚ್ಚಿರುವುದಿಲ್ಲ ಎಂಬುದನ್ನು ಖಾತರಿಪಡಿಸುತ್ತೇನೆ ಎಂದು ಬೈಜು ರವೀಂದ್ರನ್ ಇ-ಮೇಲ್ ಸಂದೇಶದಲ್ಲಿ ಉಲ್ಲೇಖಿಸಿರುವುದಾಗಿ ‘ಇಂಡಿಯಾ ಟುಡೆ’ ವರದಿ ಮಾಡಿದೆ.
ಇದನ್ನೂ ಓದಿ: ಬಲವಂತದ ರಾಜೀನಾಮೆ ಪಡೆಯುತ್ತಿದೆ ಬೈಜೂಸ್; ಬೆಂಗಳೂರಿನಲ್ಲಿಯೂ ಉದ್ಯೋಗಿಗಳ ಆರೋಪ
ದೊಡ್ಡ ಸಂಸ್ಥೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಬಾಹ್ಯ ಸ್ಥೂಲ ಆರ್ಥಿಕತೆಗಳಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಗಮನಹರಿವುಸುವುದಕ್ಕಾಗಿ ಉದ್ಯೋಗದ ಸಂಖ್ಯೆಯಲ್ಲಿ ಕಡಿತ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಅನೇಕ ಪ್ರತಿಕೂಲ ಸ್ಥೂಲ ಆರ್ಥಿಕ ಅಂಶಗಳು ವಹಿವಾಟಿನ ತಳಹದಿಯನ್ನು ಬದಲಾಯಿಸಿದ ವರ್ಷ ಇದು. ವಿಶ್ವದಾದ್ಯಂತ ತಂತ್ರಜ್ಞಾನ ಕಂಪನಿಗಳ ಸ್ಥಿರತೆ ಮತ್ತು ಬೆಳವಣಿಗೆ ಮೇಲೆ ಈ ವರ್ಷ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.
ಮಾರುಕಟ್ಟೆ ಮತ್ತು ಕಾರ್ಯಾಚರಣೆ ವೆಚ್ಚ ತಗ್ಗಿಸುವುದಕ್ಕಾಗಿ ಬೈಜೂಸ್ ಸಾಮೂಹಿಕ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ತೆರವು ಮಾಡಲಿರುವ ಉದ್ಯೋಗಿಗಳಿಗೆ ಇ-ಮೇಲ್ ಸಂದೇಶವನ್ನೂ ಕಳುಹಿಸುತ್ತಿದೆ. 15 ದಿನಗಳ ನೊಟೀಸ್ ಅವಧಿ ಪೂರೈಸುವಂತೆಯೂ ಕಂಪನಿಯು ಉದ್ಯೋಗಿಗಳಿಗೆ ತಿಳಿಸಿದೆ ಎಂದು ವರದಿ ಉಲ್ಲೇಖಿಸಿದೆ.
21ನೇ ಹಣಕಾಸು ವರ್ಷದಲ್ಲಿ ಬೈಜೂಸ್ 4,588 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ವರದಿಯಾಗಿತ್ತು. 2022ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ ಆದಾಯವು 10,000 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿತ್ತು. ಆದರೆ ಲಾಭವಾಗಿರುವ ಬಗ್ಗೆ ಅಥವಾ ನಷ್ಟ ಆಗಿದೆಯೇ ಎಂಬ ಮಾಹಿತಿ ಬಹಿರಂಗಪಡಿಸಿರಲಿಲ್ಲ.
ಬೈಜೂಸ್ ಕೇರಳದಲ್ಲಿ ಉದ್ಯೋಗಿಗಳನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡುತ್ತಿದೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ಇದರ ಬೆನ್ನಲ್ಲೇ, ಬೆಂಗಳೂರಿನಲ್ಲಿಯೂ ಅಂಥದ್ದೇ ಆರೋಪ ಕೇಳಿಬಂದಿದೆ. ಬಲವಂತದ ರಾಜೀನಾಮೆಗೆ ಸಂಬಂಧಿಸಿ ಬೈಜೂಸ್ ಬೆಂಗಳೂರು ಘಟಕದ 10-12 ಉದ್ಯೋಗಿಗಳು ದೂರು ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ಉದ್ಯೋಗಿಗಳ ಒಕ್ಕೂಟ ತಿಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ