ಬಲವಂತದ ರಾಜೀನಾಮೆ ಪಡೆಯುತ್ತಿದೆ ಬೈಜೂಸ್; ಬೆಂಗಳೂರಿನಲ್ಲಿಯೂ ಉದ್ಯೋಗಿಗಳ ಆರೋಪ
ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಬೇಕು, ಇಲ್ಲವಾದಲ್ಲಿ ವಜಾಗೊಳ್ಳಬೇಕಾಗುತ್ತದೆ ಎಂದು ಬೈಜೂಸ್ ಆಡಳಿತ ಮಂಡಳಿ ಹೇಳಿದೆ ಎಂದು ಬೆಂಗಳೂರಿನ ಉದ್ಯೋಗಿಗಳು ಆರೋಪಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರು: ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ ಎನ್ನಲಾಗಿರುವ ಎಜುಟೆಕ್ ಕಂಪನಿ ಬೈಜೂಸ್ (BYJU’s) ಕೇರಳದಲ್ಲಿ ಉದ್ಯೋಗಿಗಳನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡುತ್ತಿದೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ಇದೀಗ ಬೆಂಗಳೂರಿನಲ್ಲಿಯೂ (Bengaluru) ಅಂಥದ್ದೇ ಆರೋಪ ಕೇಳಿಬಂದಿರುವ ಬಗ್ಗೆ ವರದಿಯಾಗಿದೆ. ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಬೇಕು, ಇಲ್ಲವಾದಲ್ಲಿ ವಜಾಗೊಳ್ಳಬೇಕಾಗುತ್ತದೆ ಎಂದು ಬೈಜೂಸ್ ಆಡಳಿತ ಮಂಡಳಿ ಹೇಳಿದೆ ಎಂದು ಬೆಂಗಳೂರಿನ ಉದ್ಯೋಗಿಗಳು ಆರೋಪಿಸಿದ್ದಾರೆ.
ಕಳೆದ 7ರಿಂದ 10 ದಿನಗಳಲ್ಲಿ ಬೈಜೂಸ್ ಆಡಳಿತ ಮಂಡಳಿ ವಿವಿಧ ಸೆಕ್ಷನ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಉದ್ಯೋಗಿಗಳ ಜತೆ ಮಾತುಕತೆ ನಡೆಸಿದೆ. ಗುಣಮಟ್ಟ ವಿಶ್ಲೇಷಣಾ ತಂಡದ 475 ಮಂದಿ ಉದ್ಯೋಗಿಗಳ ಪೈಕಿ 300 ಮಂದಿಯ ರಾಜೀನಾಮೆ ಕೇಳಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ‘ಬ್ಯುಸಿನೆಸ್ ಲೈನ್’ ವರದಿ ಮಾಡಿದೆ. ಕಳೆದ ವಾರದಿಂದಲೇ ಬೈಜೂಸ್ ಈ ಪ್ರಕ್ರಿಯೆ ಆರಂಭಿಸಿದೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಂದಲೂ ರಾಜೀನಾಮೆ ಕೇಳಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ನೇಮಕಾತಿ ತಂಡದಲ್ಲಿಯೂ ಇರುವ 400 ಮಂದಿಯ ಪೈಕಿ 300 ಮಂದಿಯ ರಾಜೀನಾಮೆ ಕೇಳಲಾಗಿದೆ ಎಂದು ಮೂಲಗಳು ಹೇಳಿವೆ.
ಉದ್ಯೋಗಿಗಳ ಸಂಘಕ್ಕೆ ದೂರು
ಬಲವಂತದ ರಾಜೀನಾಮೆಗೆ ಸಂಬಂಧಿಸಿ ಬೈಜೂಸ್ ಬೆಂಗಳೂರು ಘಟಕದ 10-12 ಉದ್ಯೋಗಿಗಳು ದೂರು ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ಉದ್ಯೋಗಿಗಳ ಒಕ್ಕೂಟ ತಿಳಿಸಿದೆ. ನೂರಾರು ಉದ್ಯೋಗಿಗಳನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡಿರುವುದೂ ಗಮನಕ್ಕೆ ಬಂದಿದೆ. ಇಂಥ ಅಕ್ರಮವನ್ನು ಖಂಡಿಸುತ್ತೇವೆ ಎಂದೂ ಒಕ್ಕೂಟ ಹೇಳಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ವರದಿ ನಿರಾಕರಿಸಿದ ಬೈಜೂಸ್
ಉದ್ಯೋಗಳಿಂದ ಬಲವಂತದ ರಾಜೀನಾಮೆ ಪಡೆಯಲಾಗುತ್ತಿದೆ ಎಂಬ ಆರೋಪವನ್ನು ಬೈಜೂಸ್ ಆಡಳಿತಮಂಡಳಿ ನಿರಾಕರಿಸಿದೆ. ಈ ಕುರಿತು ಬೈಜೂಸ್ ವಕವ್ತಾರರು ಪ್ರತಿಕ್ರಿಯಿಸಿದ್ದು, ಬೆಂಗಳೂರು ಕಚೇರಿಯ ಉದ್ಯೋಗಿಗಳಿಂದ ಬಲವಂತದ ರಾಜೀನಾಮೆ ಪಡೆಯಲಾಗುತ್ತಿದೆ ಎಂಬುದು ಸುಳ್ಳು. ಬೈಜೂಸ್ ಒಂದು ಜವಾಬ್ದಾರಿಯುತ ಸಂಸ್ಥೆ. ದೇಶದಾದ್ಯಂತ 50,000 ಉದ್ಯೋಗಿಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: BYJU’S Turmoil: ಕೇರಳದಲ್ಲಿ ಕಚೇರಿ ಮುಚ್ಚಿದ ಬೈಜೂಸ್, ಉದ್ಯೋಗಿಗಳ ವಜಾ; ವರದಿ
ಬೈಜೂಸ್ ತಿರುವನಂತಪುರದ ಟೆಕ್ನೊಪಾರ್ಕ್ನಲ್ಲಿರುವ ಕಚೇರಿಯನ್ನು ಮುಚ್ಚಿದೆ. ರಾಜೀನಾಮೆ ನೀಡುವಂತೆ ಉದ್ಯೋಗಿಗಳನ್ನು ಒತ್ತಾಯಿಸುತ್ತಿದೆ ಎಂದು ಕೇರಳದ ಸಚಿವ ವಿ. ಶಿವನ್ಕುಟ್ಟಿ ಕಳೆದ ವಾರ ಆರೋಪಿಸಿದ್ದರು. ಬೈಜೂಸ್ ಉದ್ಯೋಗಿಗಳು ಐಟಿ ಉದ್ಯೋಗಿಗಳ ಕಲ್ಯಾಣ ಸಂಘದ ಪದಾಧಿಕಾರಿಗಳ ಜತೆ ಬಂದು ತಮ್ಮನ್ನು ಭೇಟಿಯಾಗಿ ಕಷ್ಟಗಳನ್ನು ಹೇಳಿಕೊಂಡಿದ್ದಾಗಿಯೂ, ಈ ಕುರಿತು ಕಾರ್ಮಿಕ ಇಲಾಖೆ ಗಂಭೀರವಾಗಿ ತಪಾಸಣೆ ನಡೆಸಲಿದೆ ಎಂದೂ ಸಚಿವರು ಹೇಳಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ