ದೆಹಲಿ: ದೀಪಕ್ ದಾಸ್ ಇಂದು (ಆಗಸ್ಟ್ 1) ನೂತನ ಮಹಾ ಲೆಕ್ಕ ನಿಯಂತ್ರಕರಾಗಿ ಅಧಿಕಾರ ವಹಿಸಿಕೊಂಡರು. ದೀಪಕ್ ದಾಸ್ ಈ ಸ್ಥಾನವನ್ನು(ಸಿಜಿಎ) ಅಲಂಕರಿಸಿದ 25ನೇ ಅಧಿಕಾರಿಯಾಗಿದ್ದಾರೆ. 1986ರ ಬ್ಯಾಚ್‌ನ ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆಯ (ಐಸಿಎಎಸ್) ಅಧಿಕಾರಿಯಾದ ದೀಪಕ್ ದಾಸ್ ಅವರನ್ನು ಭಾರತ ಸರಕಾರವು 2021ರ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಮಹಾ ಲೆಕ್ಕ ನಿಯಂತ್ರಕರನ್ನಾಗಿ (ಸಿಜಿಎ) ಆಗಿ ನೇಮಕ ಮಾಡಿದೆ.
ದಾಸ್, ತಮ್ಮ 35 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಹಾಗೂ ಬೃಹತ್ ಕೈಗಾರಿಕೆಗಳ ಉತ್ತೇಜನ ಇಲಾಖೆ, ವಾಣಿಜ್ಯ ಮತ್ತು ಜವಳಿ, ಕೃಷಿ ಮತ್ತು ರೈತರ ಕಲ್ಯಾಣ, ರಸ್ತೆ ಸಾರಿಗೆ, ಹೆದ್ದಾರಿಗಳು, ಹಡಗು, ಗೃಹ ವ್ಯವಹಾರಗಳು ಮತ್ತು ಪರೋಕ್ಷ ತೆರಿಗೆಗಳ ಕೇಂದ್ರ ಮಂಡಳಿ ಮತ್ತು ಕೇಂದ್ರೀಯ ತೆರಿಗೆಗಳ ಮಂಡಳಿ ಹೀಗೆ ವಿವಿಧ ಸಚಿವಾಲಯಗಳಲ್ಲಿ, ವಿವಿಧ ಹಂತಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ದಾಸ್, ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆಯ ತರಬೇತಿ ಅಕಾಡೆಮಿಯಾದ ‘ಇನ್‌ಸ್ಟಿಟ್ಯೂಟ್ ಆಫ್ ಗವರ್ನ್‌ಮೆಂಟ್ ಅಕೌಂಟ್ಸ್ ಅಂಡ್ ಫೈನಾನ್ಸ್’ನ (ಐಎನ್‌ಜಿಎಎಫ್) ನಿರ್ದೇಶಕರೂ ಆಗಿದ್ದಾರೆ.
ದಾಸ್, ಭಾರತ ಸರಕಾರದಲ್ಲಿ ನಿಯೋಜನೆಯಲ್ಲಿದ್ದಾಗ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಅಲ್ಲಿ ಅವರು ರಕ್ಷಣಾ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ಮತ್ತು ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ, ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯದಲ್ಲಿ ಸದಸ್ಯರಾಗಿ (ಹಣಕಾಸು) ಸೇವೆ ಸಲ್ಲಿಸಿದ್ದರು.
‘ಸಿಜಿಎ’ಯ ಉಸ್ತುವಾರಿ ವಹಿಸಿಕೊಳ್ಳುವ ಮೊದಲು, ದಾಸ್ ಅವರು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯಲ್ಲಿ ಲೆಕ್ಕಪತ್ರಗಳ ಪ್ರಧಾನ ಮುಖ್ಯ ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿ ಅವರು ನೇರ ತೆರಿಗೆ ಸಂಗ್ರಹಣೆ, ವರದಿ ಮತ್ತು ರಸೀದಿ ಲೆಕ್ಕಪತ್ರಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ತಂತ್ರಜ್ಞಾನ ಚಾಲಿತ ಉಪಕ್ರಮಗಳಿಗೆ ನಾಂದಿ ಹಾಡಿದರು. ದಾಸ್, ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನ ಹಳೆಯ ವಿದ್ಯಾರ್ಥಿ.
ಇದನ್ನೂ ಓದಿ: GST: ಜುಲೈ ತಿಂಗಳಲ್ಲಿ 1,16,393 ಕೋಟಿ ರೂಪಾಯಿ ಒಟ್ಟು ಜಿಎಸ್ಟಿ ಸಂಗ್ರಹ
Financial Changes: ಆಗಸ್ಟ್ 1ರಿಂದ ಅನ್ವಯ ಆಗುವಂತೆ ಈ 5 ಹಣಕಾಸು ಬದಲಾವಣೆಗಳು ನಿರೀಕ್ಷಿಸಿ, ಸಿದ್ಧರಾಗಿ
(Deepak Das appointed as CGA on August 1 he is the 25th officer to appoint as CGA)