ಪಿಎಫ್ ಸದಸ್ಯರಿಗೆ ಪೆನ್ಷನ್; ಕನಿಷ್ಠ ಪಿಂಚಣಿಯನ್ನು 3,000 ಅಲ್ಲ, 7,500 ರೂಗೆ ಏರಿಸಬೇಕೆಂದು ಒತ್ತಾಯ; ಸರ್ಕಾರದ ಪ್ರತಿಕ್ರಿಯೆಯೇನು?

Demand for rising EPS minimum pension from Rs 1,000 to Rs 7,500: ಇಪಿಎಫ್ ಸದಸ್ಯರಿಗೆ ಲಭ್ಯ ಇರುವ ಇಪಿಎಸ್ ಅಥವಾ ಪೆನ್ಷನ್ ಯೋಜನೆಯಲ್ಲಿ ಕನಿಷ್ಠ ಪಿಂಚಣಿ 1,000 ರೂ ಇದೆ. ಇದನ್ನು 7,500 ರೂಗೆ ಏರಿಸಬೇಕು ಎನ್ನುವ ಆಗ್ರಹವು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಹೊಸ ಇಪಿಎಸ್ 2026 ಸ್ಕೀಮ್​ನಲ್ಲಿ ಕನಿಷ್ಠ ಪಿಂಚಣಿಯನ್ನು ಏರಿಸುವ ಅವಕಾಶ ಕೊಡಲಾಗಿದೆ.

ಪಿಎಫ್ ಸದಸ್ಯರಿಗೆ ಪೆನ್ಷನ್; ಕನಿಷ್ಠ ಪಿಂಚಣಿಯನ್ನು 3,000 ಅಲ್ಲ, 7,500 ರೂಗೆ ಏರಿಸಬೇಕೆಂದು ಒತ್ತಾಯ; ಸರ್ಕಾರದ ಪ್ರತಿಕ್ರಿಯೆಯೇನು?
ಹಣ
Image Credit source: Getty Images

Updated on: Jul 22, 2026 | 5:44 PM

ಮುಖ್ಯಾಂಶಗಳು

  • ಇಪಿಎಫ್ ಸದಸ್ಯರಿಗೆ ಲಭ್ಯ ಇರುವ ಇಪಿಎಸ್ ಯೋಜನೆಯಲ್ಲಿ ಕನಿಷ್ಠ ಪಿಂಚಣಿ 1,000 ರೂ ಇದೆ.
  • ಇದನ್ನು 7,500 ರೂಗೆ ಏರಿಸಬೇಕು ಎನ್ನುವ ಆಗ್ರಹವು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
  • ಹೊಸ ಇಪಿಎಸ್ 2026 ಸ್ಕೀಮ್​ನಲ್ಲಿ ಕನಿಷ್ಠ ಪಿಂಚಣಿಯನ್ನು ಏರಿಸುವ ಅವಕಾಶ ಕೊಡಲಾಗಿದೆ.

ನವದೆಹಲಿ, ಜುಲೈ 22: ಉದ್ಯೋಗಿಗಳ ಪಿಂಚಣಿ ಯೋಜನೆ (EPS-95) ಅಡಿಯಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಕನಿಷ್ಠ ಮಾಸಿಕ ಪಿಂಚಣಿಯನ್ನು ₹1,000 ರಿಂದ ₹7,500 ಕ್ಕೆ ಏರಿಸಬೇಕು. ಜೊತೆಗೆ ತುಟ್ಟಿಭತ್ಯೆಯನ್ನೂ (DA) ನೀಡಬೇಕು ಎಂದು ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಸರ್ಕಾರ ಕೂಡ ಕನಿಷ್ಠ ಇಪಿಎಸ್ ಪಿಂಚಣಿ ಕುರಿತು ಪ್ರಸ್ತಾಪಗಳು ಬಂದಿರುವುದನ್ನು ಒಪ್ಪಿಕೊಂಡಿದೆ. ಲೋಕಸಭೆಯಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಲಿಖಿತ ಉತ್ತರದಲ್ಲಿ ಈ ವಿಚಾರ ತಿಳಿಸಿದ್ದಾರೆ. ಆದರೆ, ಕನಿಷ್ಠ ಪಿಂಚಣಿ ಏರಿಸುವ ಸಂಬಂಧ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಏನಿದು ಇಪಿಎಸ್ ಯೋಜನೆ?

ಇದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​ಒ ನಡೆಸುತ್ತಿರುವ ಪೆನ್ಷನ್ ಸ್ಕೀಮ್. ಇಲ್ಲಿ ಇಪಿಎಫ್ ಮತ್ತು ಇಪಿಎಸ್ ಎರಡೂ ಒಟ್ಟೊಟ್ಟಿಗೆ ಚಾಲ್ತಿಯಲ್ಲಿರುತ್ತದೆ. ಉದ್ಯೋಗಿಗಳಿಗೆ ಇಪಿಎಫ್ ಅಕೌಂಟ್ ಜೊತೆಗೆ ಒಂದು ಇಪಿಎಸ್ ಅಕೌಂಟ್ ಕೂಡ ತೆರೆಯಲಾಗಿರುತ್ತದೆ. ಉದ್ಯೋಗಿಯ ಶೇ. 12ರಷ್ಟು ವೇತನವನ್ನು ಕಡಿತಗೊಳಿಸಿ, ಇಪಿಎಫ್ ಅಕೌಂಟ್​ಗೆ ಜಮೆ ಮಾಡಲಾಗುತ್ತದೆ. ಕಂಪನಿ ವತಿಯಿಂದ ನೀಡಲಾಗುವ ಶೇ. 12ರಷ್ಟು ಹಣದಲ್ಲಿ ಒಂದು ಭಾಗವು ಇಪಿಎಫ್​ ಅಕೌಂಟ್​ಗೆ ಹೋದರೆ, ಮತ್ತೊಂದು ಭಾಗವು ಇಪಿಎಸ್​ಗೆ ಸಂದಾಯವಾಗುತ್ತದೆ. ಶೇ. 12ರಲ್ಲಿ ಇಪಿಎಫ್​ಗೆ ಶೇ. 3.63, ಇಪಿಎಸ್​ಗೆ ಶೇ. 8.33 ಹಣ ಹೋಗುತ್ತದೆ. ಸರ್ಕಾರವು ಶೇ. 1.16ರಷ್ಟು ಕೊಡುಗೆ ನೀಡುತ್ತದೆ. ಜೊತೆಗೆ ಇಡೀ ಅಕೌಂಟ್​ನಲ್ಲಿರುವ ಹಣಕ್ಕೆ ಬಡ್ಡಿಯನ್ನೂ ತುಂಬಿಸುತ್ತದೆ.

ಇದನ್ನೂ ಓದಿ: ಪಿಎಲ್​ಐಗೆ ಮುಂದುವರಿದ ಭರ್ಜರಿ ಸ್ಪಂದನೆ; ಮಾರ್ಚ್ ವೇಳೆಗೆ 2.40 ಲಕ್ಷ ಕೋಟಿ ರೂ ಹೂಡಿಕೆ: ಸಚಿವ ಜಿತಿನ್ ಪ್ರಸಾದ

ಇಪಿಎಫ್ ಹಣವನ್ನು ಉದ್ಯೋಗಿಗಳು ಮಧ್ಯದಲ್ಲಿ ವಿತ್​ಡ್ರಾ ಮಾಡಿಕೊಳ್ಳಬಹುದು. ಆದರೆ, ಇಪಿಎಸ್ ಹಣವು ಪೆನ್ಷನ್​ಗೆಂದೇ ಇರುವುದು. ಉದ್ಯೋಗ ಕಳೆದುಕೊಂಡು ಎರಡು ತಿಂಗಳಿಗೂ ಹೆಚ್ಚು ಕಾಲ ನಿರುದ್ಯೋಗಿಯಾಗಿರುವ ವಿಶೇಷ ಸಂದರ್ಭದಲ್ಲಿ ಮಾತ್ರ ಇಪಿಎಸ್ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಬಹುದು.

ಇಪಿಎಸ್ ಸ್ಕೀಮ್ ಅಡಿಯಲ್ಲಿ ಕನಿಷ್ಠ ಪಿಂಚಣಿ 1,000 ರೂ ಇದೆ. ಪಿಂಚಣಿ ಸಿಗಬೇಕಾದರೆ ಉದ್ಯೋಗಿಯ ಇಪಿಎಸ್ ಅಕೌಂಟ್ 10 ವರ್ಷ ಸಕ್ರಿಯವಾಗಿರಬೇಕು. ಅಂದರೆ, ಉದ್ಯೋಗಿ ಕನಿಷ್ಠ 10 ವರ್ಷ ಕೆಲಸ ಮಾಡಿರಬೇಕು. ಈ ಕನಿಷ್ಠ ಪಿಂಚಣಿಯನ್ನು 3,000 ರೂಗೆ ಏರಿಸಬೇಕು ಎಂದು ಇತ್ತೀಚಿನವರೆಗೂ ಕಾರ್ಮಿಕ ಸಂಘಟನೆಗಳು ಒತ್ತಾಯಿಸಿದ್ದವು. ಈಗ ಈ ಕನಿಷ್ಠ ಪೆನ್ಷನ್ ಅನ್ನು 7,500 ರೂಗೆ ಹೆಚ್ಚಿಸಬೇಕೆಂದು ಆಗ್ರಹಿಸುತ್ತಿವೆ.

ಇದನ್ನೂ ಓದಿ: ಭಾರತಕ್ಕೆ ಸರಾಗವಾಗಿ ಬರುತ್ತಿರುವ ವಿದೇಶೀ ನೇರ ಹೂಡಿಕೆ; ಕರ್ನಾಟಕಕ್ಕೆ ಭರ್ಜರಿ ಹೂಡಿಕೆ ಹೆಚ್ಚಳ; ಎರಡನೇ ಸ್ಥಾನಕ್ಕೆ ಜಿಗಿತ

ಪಿಂಚಣಿ ಏರಿಸುವ ಒತ್ತಾಯಕ್ಕೆ ಶೋಭಾ ಕರಂದ್ಲಾಜೆ ಹೇಳಿದ್ದೇನು?

ಕನಿಷ್ಠ ಪಿಂಚಣಿಯನ್ನು 7,500 ರೂಗೆ ಏರಿಸಲು ಮನವಿ ಸಲ್ಲಿಕೆಯಾಗಿದೆ ಎನ್ನುವ ವಿಚಾರವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಖಚಿತಪಡಿಸಿದ್ದಾರೆ. ಆದರೆ, ಪಿಂಚಣಿ ಏರಿಕೆಯ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸುತ್ತಾ ಎಂಬುದನ್ನು ದೃಢಪಡಿಸಿಲ್ಲ. ಇಪಿಎಸ್ 1995 ಸ್ಕೀಮ್ ಅಡಿ ಸದ್ಯಕ್ಕೆ ಕನಿಷ್ಠ ಪಿಂಚಣಿ 1,000 ರೂ ಅನ್ನು ನೀಡಲಾಗುತ್ತಿದೆ ಎಂದು ಹೇಳುವ ಮೂಲಕ ಅವರು ಮುಂದಿನ ದಿನಗಳಲ್ಲಿ ಪಿಂಚಣಿ ಏರಿಸುವ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ, ಹೊಸ ಇಪಿಎಸ್ 2026 ಸ್ಕೀಮ್​ನಲ್ಲಿ ಹೆಚ್ಚಿನ ಪಿಂಚಣಿ ಅವಕಾಶವನ್ನು ಸೇರಿಸಲಾಗಿದೆ. ಅಂದರೆ, ಪಿಂಚಣಿ ಏರಿಸುವ ಇರಾದೆ ಸರ್ಕಾರಕ್ಕಿರುವುದು ಸ್ಪಷ್ಟವಿದೆ. ಆದರೆ, ಎಷ್ಟು ಏರಿಸುತ್ತದೆ ಎಂಬುದು ಗೊತ್ತಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Wed, 22 July 26

Follow Us