Digital Rupee: ಆರ್​ಬಿಐ ಡಿಜಿಟಲ್ ಕರೆನ್ಸಿ ಪ್ರಯೋಗಕ್ಕೆ ಮುಂಬೈ ಹಣ್ಣಿನ ವ್ಯಾಪಾರಿ; ಇ-ರೂಪಾಯಿ ಬಗ್ಗೆ ಏನಂತಾರೆ ಇವರು?

| Updated By: Ganapathi Sharma

Updated on: Jan 12, 2023 | 12:21 PM

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಇ-ರೂಪಾಯಿ ಬಳಕೆಯ ಪ್ರಯೋಗವನ್ನು ಬೆಂಗಳೂರು, ಮುಂಬೈ, ದೆಹಲಿ ನಗರಗಳಲ್ಲಿ ಆರ್​ಬಿಐ ಇತ್ತೀಚೆಗೆ ಆರಂಭಿಸಿದ್ದು, ಶೀಘ್ರದಲ್ಲೇ ಇತರ ನಗರಗಳಿಗೂ ವಿಸ್ತರಣೆಯಾಗಲಿದೆ. ಪ್ರಯೋಗದ ಫಲಿತಾಂಶದ ಆಧಾರದಲ್ಲಿ ಇ-ರೂಪಾಯಿ ವಹಿವಾಟನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಿದೆ.

Digital Rupee: ಆರ್​ಬಿಐ ಡಿಜಿಟಲ್ ಕರೆನ್ಸಿ ಪ್ರಯೋಗಕ್ಕೆ ಮುಂಬೈ ಹಣ್ಣಿನ ವ್ಯಾಪಾರಿ; ಇ-ರೂಪಾಯಿ ಬಗ್ಗೆ ಏನಂತಾರೆ ಇವರು?
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಕ್ರಿಪ್ಟೋ ಕರೆನ್ಸಿಗಳಿಗೆ ಪರ್ಯಾಯವಾಗಿ ತನ್ನದೇ ಆದ ಡಿಜಿಟಲ್ ಕರೆನ್ಸಿ (Digital Currency) ಇತ್ತೀಚೆಗೆ ಬಿಡುಗಡೆ ಮಾಡಿದ್ದ ಆರ್​ಬಿಐ (RBI), ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಇ-ರೂಪಾಯಿ (e-Rupee) ಬಳಕೆಯ ಪ್ರಯೋಗಕ್ಕೆ ಮುಂದಾಗಿದೆ. ಇ-ರೂಪಾಯಿಯ ಚಿಲ್ಲರೆ ಮಾರಾಟ ಪ್ರಯೋಗಕ್ಕೆ ಆರ್​ಬಿಐ ರಾಷ್ಟ್ರವ್ಯಾಪಿಯಾಗಿ 15,000 ಮಂದಿಯನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಮುಂಬೈಯ ಹಣ್ಣಿನ ವ್ಯಾಪಾರಿ ಬಚ್ಚೇ ಲಾಲ್ ಸಹಾನಿ (Bacche Lal Sahani) ಕೂಡ ಒಬ್ಬರು. ದಕ್ಷಿಣ ಮುಂಬೈಯ ಮಿಂಟ್​ ರಸ್ತೆಯಲ್ಲಿರುವ ಆರ್​ಬಿಐ ಪ್ರಧಾನ ಕಚೇರಿ ಬಳಿಯೇ ಸಹಾನಿ ಅವರ ಅಂಗಡಿ ಇದೆ. ಒಂದು ತಿಂಗಳ ಹಿಂದೆ ಸಹಾನಿ ಅವರನ್ನು ಸಂಪರ್ಕಿಸಿದ್ದ ಆರ್​ಬಿಐ ಅಧಿಕಾರಿಗಳು ಇ-ರೂಪಾಯಿ ಪ್ರಯೋಗದಲ್ಲಿ ಭಾಗಿಯಾಗುವಂತೆ ಮನವೊಲಿಸಿದ್ದರು. ಡಿಜಿಟಲ್ ವಹಿವಾಟಿನ ಭವಿಷ್ಯವನ್ನು ಮನಗಂಡು ಇ-ರೂಪಾಯಿ ವಹಿವಾಟಿಗೆ ಸಮ್ಮತಿಸಿದೆ ಎಂದು ಸಹಾನಿ ತಿಳಿಸಿರುವುದಾಗಿ ‘ಇಂಡಿಯಾ ಟುಡೆ ಟಿವಿ’ ವರದಿ ಮಾಡಿದೆ.

‘ಗೂಗಲ್ ಪೇ ಈಗಾಗಲೇ ನನ್ನ ಬಳಿ ಇದೆ. ಅಧಿಕಾರಿಗಳು ಈಗ ಡಿಜಿಟಲ್ ಕರೆನ್ಸಿ ಬಳಸುವಂತೆ ಕೋರಿದರು. ಭವಿಷ್ಯದಲ್ಲಿ ಹೇಗೂ ಇದು ಕೂಡ ಬೇಕಾಗಬಹುದು. ಹೀಗಾಗಿ ಪ್ರಯೋಗದಲ್ಲಿ ಭಾಗಿಯಾಗಲು ಒಪ್ಪಿಕೊಂಡೆ. ನಂತರ ನನ್ನ ಖಾತೆ ತೆರೆದರು. ಇದೀಗ ಇ-ರೂಪಾಯಿ ವಹಿವಾಟಿಗೆ ಸಿದ್ಧನಿದ್ದೇನೆ. ಈಗಾಗಲೇ ಕೆಲವು ಪಾವತಿಗಳನ್ನೂ ಸ್ವೀಕರಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಸದ್ಯ ಇ-ರೂಪಾಯಿ ಪಾವತಿಯಲ್ಲಿ ತುಸು ಸಮಸ್ಯೆ ಇದೆ. ವೇಗವಾಗಿ ಪಾವತಿಯಾಗುತ್ತಿಲ್ಲ. ಈ ಕುರಿತು ಆರ್​ಬಿಐ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದೇನೆ. ವ್ಯವಸ್ಥೆಯು ಸಂಪೂರ್ಣವಾಗಿ ಅಸ್ತುತ್ವಕ್ಕೆ ಬಂದಾಗ, ಬಳಕೆ ಹೆಚ್ಚಾದಾಗ ಸಮಸ್ಯೆಗಳು ಸರಿಯಾಗಬಹುದು ಎಂದು ಸಹಾನಿ ಹೇಳಿದ್ದಾರೆ.

ಡಿಜಿಟಲ್ ವಹಿವಾಟಿನಿಂದ ಭಾರೀ ಪ್ರಯೋಜನ

ಬಚ್ಚೇ ಲಾಲ್ ಸಹಾನಿ ಮೂಲತಃ ಬಿಹಾರದ ವೈಶಾಲಿಯವರು. ಹಿಂದೆಲ್ಲ ಸಣ್ಣ-ಪುಟ್ಟ ದಾಖಲೆಗಳಿಗಾಗಿ ಬಿಹಾರಕ್ಕೆ ತೆರಳಬೇಕಾಗುತ್ತಿತ್ತು. ಇದೀಗ ಡಿಜಿಟಲ್ ವಹಿವಾಟಿನಿಂದಾಗಿ ಇಲ್ಲಿದ್ದುಕೊಂಡೇ (ಮುಂಬೈ) ಎಲ್ಲ ಪಾವತಿ, ಸ್ವೀಕೃತಿ ಸುಲಭವಾಗಿದೆ. ಮೊಬೈಲ್​ನಲ್ಲೇ ಎಲ್ಲ ವಹಿವಾಟು ನಡೆಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ಇ-ರೂಪಾಯಿ ವಹಿವಾಟು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಯುಪಿಐ ಹೊರತುಪಡಿಸಿ ಮತ್ತೊಂದು ಪಾವತಿ ವ್ಯವಸ್ಥೆಯ ಸೌಲಭ್ಯ ನಮಗೆ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Digital Rupee: ಆರ್​ಬಿಐ ಡಿಜಿಟಲ್ ರೂಪಾಯಿ ವಿಶೇಷತೆ ಬಗ್ಗೆ ಇಲ್ಲಿದೆ ಪೂರ್ಣ ವಿವರ

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಇ-ರೂಪಾಯಿ ಬಳಕೆಯ ಪ್ರಯೋಗವನ್ನು ಬೆಂಗಳೂರು, ಮುಂಬೈ, ದೆಹಲಿ ನಗರಗಳಲ್ಲಿ ಆರ್​ಬಿಐ ಇತ್ತೀಚೆಗೆ ಆರಂಭಿಸಿದ್ದು, ಶೀಘ್ರದಲ್ಲೇ ಇತರ ನಗರಗಳಿಗೂ ವಿಸ್ತರಣೆಯಾಗಲಿದೆ. ಪ್ರಯೋಗದ ಫಲಿತಾಂಶದ ಆಧಾರದಲ್ಲಿ ಇ-ರೂಪಾಯಿ ವಹಿವಾಟನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ