Muhurat Trading: ಷೇರುಪೇಟೆಯಲ್ಲಿನ ದೀಪಾವಳಿ ಮುಹೂರ್ತ ಟ್ರೇಡಿಂಗ್ ವೇಳಾಪಟ್ಟಿ; ಷೇರು ಖರೀದಿ ಶಿಫಾರಸುಗಳು
ದೀಪಾವಳಿ 2021ರ ಮುಹೂರ್ತ ವಹಿವಾಟಿನ ಸಮಯ, ವಿಶೇಷತೆ, ಷೇರು ಖರೀದಿ ಶಿಫಾರಸುಗಳು ಮತ್ತಿತರ ವಿವರ ಈ ಲೇಖನದಲ್ಲಿದೆ.
ಷೇರು ಮಾರುಕಟ್ಟೆ (ಬಿಎಸ್‌ಇ ಮತ್ತು ಎನ್‌ಎಸ್‌ಇ) ಇಂದು (ನವೆಂಬರ್ 4, 2021) ದೀಪಾವಳಿಯ ಮುಹೂರ್ತದ ವಹಿವಾಟಿಗಾಗಿ ಒಂದು ಗಂಟೆ ತೆರೆದಿರುತ್ತವೆ. ಹೊಸ ಸಂವತ್ 2078ರ ಆರಂಭದ ನೆಪಕ್ಕಾಗಿ ಮುಹೂರ್ತದ ವಹಿವಾಟನ್ನು ಮಾಡಲಾಗುತ್ತದೆ. ಸಾಂಪ್ರದಾಯಿಕ ವ್ಯಾಪಾರ ಸಮುದಾಯವು ತಮ್ಮ ಖಾತೆಯ ಪುಸ್ತಕಗಳನ್ನು ತೆರೆಯುವ ದಿನ ಇದು.
ದೀಪಾವಳಿ ಮುಹೂರ್ತದ ವ್ಯಾಪಾರದ ಅವಧಿ: ಷೇರು ಮಾರುಕಟ್ಟೆ ವೇಳಾಪಟ್ಟಿ ಈ ವರ್ಷ, ಮುಹೂರ್ತದ ವ್ಯಾಪಾರದ ಅವಧಿಯು ಗುರುವಾರ, ನವೆಂಬರ್ 4ರಂದು ಸಂಜೆ 6.15ಕ್ಕೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿ 7.15ಕ್ಕೆ ಕೊನೆಗೊಳ್ಳುತ್ತದೆ. ವಿಶೇಷ ವ್ಯಾಪಾರವು ಹಿಂದೂ ಪಂಚಾಂಗದ ನಂತರ ತೆರೆಯುತ್ತದೆ. ಇದು ಹೊಸ ಸಂವತ್ ಅಥವಾ ಸಂವತ್ 2078ರ ಆರಂಭವನ್ನು ಸೂಚಿಸುತ್ತದೆ – ಹಿಂದೂ ಕ್ಯಾಲೆಂಡರ್ ವರ್ಷವು ದೀಪಾವಳಿಯಂದು ಪ್ರಾರಂಭವಾಗುತ್ತದೆ. ಮತ್ತು ಮುಹೂರ್ತದ ವ್ಯಾಪಾರವು ವರ್ಷವಿಡೀ ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗುತ್ತದೆ.
ಪ್ರೀ ಓಪನ್: ಸಂಜೆ 6.00ರಿಂದ ಸಂಜೆ 6.15ರ ವರೆಗೆ ಸಾಮಾನ್ಯ ಮಾರುಕಟ್ಟೆ: ಸಂಜೆ 6.15ರಿಂದ ರಾತ್ರಿ 7.15 ಮುಕ್ತಾಯದ ಅವಧಿ: ರಾತ್ರಿ 7.25ರಿಂದ 7.35 ಫ್ಯೂಚರ್ ಅಂಡ್ ಆಪ್ಷನ್ಸ್, ಕರೆನ್ಸಿ (CDS), MCX: ಸಂಜೆ 6.15ರಿಂದ ರಾತ್ರಿ 7.15
ಮುಹೂರ್ತ ವಹಿವಾಟು ಎಂದರೇನು? ಮುಹೂರ್ತದ ವಹಿವಾಟು ದೀಪಾವಳಿ ಅಮಾವಾಸ್ಯೆಯಂದು (ದೀಪಾವಳಿ) ಒಂದು ಗಂಟೆಗಳ ಕಾಲ ಮಂಗಳಕರವಾದ ಷೇರು ಮಾರುಕಟ್ಟೆಯ ವ್ಯಾಪಾರವಾಗಿದೆ. ಇದು ಸಾಂಕೇತಿಕ ಮತ್ತು ಹಳೆಯ ಆಚರಣೆಯಾಗಿದೆ. ಇದನ್ನು ವರ್ತಕ ಸಮುದಾಯವು ಬಹಳ ಕಾಲದಿಂದ ಉಳಿಸಿಕೊಂಡು ಬಂದಿದೆ. BSEನಲ್ಲಿ 1957ರಲ್ಲಿ ಮತ್ತು 1992ನೇ ಇಸವಿಯಲ್ಲಿ NSEನಲ್ಲಿ ಈ ಅಭ್ಯಾಸವನ್ನು ಪ್ರಾರಂಭಿಸಲಾಯಿತು. ಕಳೆದ ವರ್ಷ, ವಿಶೇಷ ಮುಹೂರ್ತದ ವಹಿವಾಟು ನವೆಂಬರ್ 14ರಂದು ನಡೆಯಿತು. ಮುಹೂರ್ತದ ವಹಿವಾಟಿನ ಅವಧಿಯಲ್ಲಿ ಬಿಎಸ್ಇ ಸೆನ್ಸೆಕ್ಸ್ 43,638ಕ್ಕೆ ಕೊನೆಗೊಂಡರೆ, ಎನ್ಎಸ್ಇ 12,771ಕ್ಕೆ ಕೊನೆಗೊಂಡಿತು. ಇನ್ನು ನಾಳೆಯಿಂದ ಎರಡು ದಿನಗಳ ಕಾಲ ಬಿಎಸ್‌ಇ ಮತ್ತು ಎನ್‌ಎಸ್‌ಇ ಮುಚ್ಚಲಿದೆ. BSEಯ ಷೇರು ಮಾರುಕಟ್ಟೆ ರಜಾ ಕ್ಯಾಲೆಂಡರ್ ಪ್ರಕಾರ ಈ ದಿನಗಳಲ್ಲಿ ಈಕ್ವಿಟಿ, ಡೆರಿವೇಟಿವ್ ಮತ್ತು SLB ವಿಭಾಗಗಳಲ್ಲಿ ಯಾವುದೇ ವ್ಯವಹಾರ ಇರುವುದಿಲ್ಲ.
ಮುಹೂರ್ತ ವಹಿವಾಟಿನ ಸಲುವಾಗಿ ಟಿವಿ9 ಕನ್ನಡ ವೆಬ್ಸೈಟ್ ಓದುಗರಿಗಾಗಿಯೇ ಹೂಡಿಕೆ ತಜ್ಞರಾದ ಡಾ. ಬಾಲಾಜಿ ರಾವ್ ಅವರು 5 ಅತ್ಯುತ್ತಮ ಕಂಪೆನಿಗಳನ್ನು ಆಯ್ಕೆ ಮಾಡಿದ್ದಾರೆ. ಅವುಗಳ ವಿವರ ಇಲ್ಲಿ ನೀಡಲಾಗುತ್ತಿದೆ. ಅವುಗಳನ್ನು ಏಕೆ ಕೊಳ್ಳಬಹುದು ಎಂಬುದಕ್ಕೆ ಕಾರಣವನ್ನೂ ನೀಡಲಾಗುತ್ತಿದೆ.
1) ಐಟಿಸಿ ಭಾರತದ ಅತ್ಯಂತ ಹಳೆಯ ಹಾಗೂ ಅತ್ಯಂತ ವಿಶ್ವಾಸಾರ್ಹ ಕಂಪೆನಿಗಳಲ್ಲಿ ಐಟಿಸಿ ಸಹ ಒಂದು. ಎಫ್ಎಂಸಿಜಿ, ಹೋಟೆಲ್, ಸಿಗರೆಟ್ ಹೀಗೆ ಅದರ ವ್ಯಾಪ್ತಿ ವಿಶಾಲವಾಗಿದೆ. ಈಗಿರುವ ಮಾರುಕಟ್ಟೆ ದರ 225 ರೂಪಾಯಿ. ಈ ಷೇರಿನ ಬೆಲೆ 300 ರೂಪಾಯಿಗೆ ಹೋಗುವ ಸಾಧ್ಯತೆ ಇದೆ. ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದ ಫಲಿತಾಂಶದಂತೆ ಐಟಿಸಿಯ ಮಾರಾಟ ಶೇ 13ರಷ್ಟು ಬೆಳವಣಿಗೆ ದಾಖಲಿಸಿದೆ (ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಆಗಿರುವ ಏರಿಕೆ). ಸಿಗರೆಟ್ನಿಂದ ಒಳ್ಳೆ ಆದಾಯ ಬಂದಿದೆ. ಐಟಿಸಿಯು ವಿತರಣೆ ಜಾಲವನ್ನು ಗಟ್ಟಿ ಮಾಡಲು ಒಳ್ಳೆ ಯೋಜನೆ ಹಾಕಿಕೊಂಡಿದೆ. ಇನ್ನು ಕೊವಿಡ್ ನಿರ್ಬಂಧಗಳು ಕಡಿಮೆ ಆಗಿರುವುದರಿಂದ ಐಟಿಸಿ ಹೋಟೆಲ್ ಉತ್ತಮ ಬೆಳವಣಿಗೆ ದಾಖಲಿಸುವ ಸಾಧ್ಯತೆ ಇದೆ.
2) ಶಾರದಾ ಕ್ರಾಪ್ಕೆಮ್ ಕೀಟನಾಶಕ ಮತ್ತು ಕೃಷಿ ರಾಸಾಯನಿಕ ಕಂಪೆನಿ ಇದು. ದೇಶದ ಮೂರನೇ ಎರಡರಷ್ಟು ಭಾಗ ಕೃಷಿಯಲ್ಲಿ ತೊಡಗಿಕೊಂಡಿದೆ. ಕೃಷಿ ವಲಯಕ್ಕೆ ಸಂಬಂಧಿಸಿದ ಶಾರದಾ ಕ್ರಾಪ್ ಕೆಮ್ ಅಂತ ಕಂಪೆನಿ ಇದೆ. ಇದರ ಸಾಲ ಪ್ರಮಾಣ ಶೇ 0.02ರಷ್ಟಿದೆ. ಹೆಚ್ಚು-ಕಡಿಮೆ ಸಾಲವೇ ಇಲ್ಲದಂತಾಯಿತು. ರಿಟರ್ನ್ ಆನ್ ಈಕ್ವಿಟಿ ಅಂತಿದೆ. ಅಂದರೆ 100 ರೂಪಾಯಿ ಈ ಕಂಪೆನಿಗೆ ನೀಡಿದರೆ 115 ರೂಪಾಯಿ ರಿಟರ್ನ್ ನೀಡುತ್ತದೆ. 315 ರೂಪಾಯಿ ಇರುವ ಈ ಷೇರು 400 ರೂಪಾಯಿ ಆಗಬಹುದು. ಈ ಬಾರಿ ಉತ್ತಮ ಮುಂಗಾರು ಆಗಿರುವುದು ಇದಕ್ಕೆ ಪೂರಕ ಆಗಿದೆ.
3) ವೇದಾಂತ ಇದು ಅತ್ಯಂತ ಹಳೆಯ ಕಂಪೆನಿ. ಗಣಿಗಾರಿಕೆ ಮಾಡುವುದು ಇದರ ಉದ್ಯಮ. ಇದರ ಹಳೆಯ ಹೆಸರು ಸೆಸಗೋವಾ ಅಂತಿತ್ತು. ಈ ಕಂಪೆನಿಯದೊಂದು ವಿಶೇಷ ಇದೆ. ಇದರ ಪ್ರಮೋಟರ್ಸ್ ಬಳಿ ಶೇ 65ರಷ್ಟು ಷೇರು ಇದೆ. ಯಾವ ಕಂಪೆನಿಯ ಷೇರಿನ ಪ್ರಮಾಣ ಹೆಚ್ಚು ಪ್ರವರ್ತಕರ ಬಳಿ ಇದ್ದಲ್ಲಿ ಅದು ಉತ್ತಮ ಪ್ರದರ್ಶನ ನೀಡುತ್ತದೆ. ಸಾಂಸ್ಥಿಕ ಹೂಡಿಕೆದಾರರ ಬಳಿ ಶೇ 20ರಷ್ಟು ಪಾಲಿದೆ. ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಈ ಕಂಪೆನಿಯ ನಿವ್ವಳ ಲಾಭ 15033 ಕೋಟಿ ರೂಪಾಯಿ. ಈ ಹಿಂದಿನ ತ್ರೈಮಾಸಿಕದಲ್ಲಿ ಈ ಕಂಪೆನಿಯು 4743 ಕೋಟಿ ನಷ್ಟ ಅನುಭವಿಸಿತ್ತು. ಇನ್ನು ಫಲಿತಾಂಶ ಸ್ಥಿರವಾಗಿದೆ. ಜತೆಗೆ ಸಾಲ ಕೂಡ ಕಡಿಮೆ ಇದ್ದು, ಡಿವಿಡೆಂಡ್ ಉತ್ತಮವಾಗಿ ನೀಡುತ್ತಾ, ರಿಟರ್ನ್ ಆನ್ ಈಕ್ವಿಟಿ ಷೇರು ಅತ್ಯುತ್ತಮವಾಗಿದೆ. ಅಂದಹಾಗೆ ಈ ಷೇರಿನ ಈಗಿನ ಮಾರುಕಟ್ಟೆ ಬೆಲೆ 308 ರೂಪಾಯಿ ಇದೆ.
4) ಇಮಾಮಿ ಈ ಇಮಾಮಿ ಷೇರಿನ ಬೆಲೆ 558 ರೂಪಾಯಿ ಇದೆ. ಪರ್ಸನಲ್ ಕೇರ್ ಉತ್ಪನ್ನ ಸೇರಿದಂತೆ ಸಿಮೆಂಟ್ ಮತ್ತಿತರ ಉತ್ಪನ್ನಗಳ ಮಾರಾಟ ಮಾಡುತ್ತದೆ. ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ 180 ಕೋಟಿ ರೂಪಾಯಿ ಬಂದಿದೆ. ರಿಟರ್ನ್ ಆನ್ ಈಕ್ವಿಟಿ 100 ರೂಪಾಯಿ ನೀಡಿದರೆ 26 ರೂಪಾಯಿ ರಿಟರ್ನ್ ನೀಡಿದ್ದಾರೆ. ಡೆಟ್ ಟು ಈಕ್ವಿಟಿ ಶೇ 0.05 ಇದೆ. ಯಾವುದೇ ಕಂಪೆನಿ ಶೇ 1ಕ್ಕಿಂತ ಕಡಿಮೆ ಇದ್ದಲ್ಲಿ ಕಣ್ಣು ಮುಚ್ಚಿಕೊಂಡು ಖರೀದಿಸಬಹುದು. ಈ ಕಂಪೆನಿ ಪ್ರತಿ ವರ್ಷ ಡಿವಿಡೆಂಡ್ ನೀಡುತ್ತಿದೆ. ಮೂರು ಸಲ ಬೋನಸ್ ನೀಡಿದೆ.
5) ಗುಜರಾತ್ ಗ್ಯಾಸ್ ಇದು ಅನಿಲ ಕಂಪೆನಿ. ಗುಜರಾತ್ ಕಂಪೆನಿಯ ಈಗಿನ ಮಾರುಕಟ್ಟೆ ದರ 639 ರೂಪಾಯಿ. ಇದು ಕಳೆದ ಒಂದು ವರ್ಷದಲ್ಲಿ 770 ರೂಪಾಯಿಯಿಂದ ಈಗಿನ ದರಕ್ಕೆ ಬಂದಿದೆ. ಇದರ ಸಾಲ ಐದು ವರ್ಷದ ಹಿಂದೆ 1.3 ಇತ್ತು. ಡೆಟ್ ಈಕ್ವಿಟಿ ರೇಷಿಯೋ 1ಕ್ಕಿಂತ ಕಡಿಮೆ ಇರಬೇಕು. ಅದೀಗ 0.17 ಇದೆ. ಇದೆಲ್ಲ ಉತ್ತಮ ಸೂಚನೆ. ಇದರ ನಿವ್ವಳ ಲಾಭ ಕಳೆದ 5 ವರ್ಷದಲ್ಲಿ 219 ಕೋಟಿಯಿಂದ 1270 ಕೋಟಿ ರೂ.ಗೆ ಏರಿದೆ. ಪ್ರವರ್ತಕರ ಹೋಲ್ಡಿಂಗ್ ಶೇ 61, ಸಾಂಸ್ಥಿಕ ಹೂಡಿಕೆದಾರರು ಶೇ 16ರಷ್ಟು ಪಾಲು ಹೊಂದಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಸಿಎನ್ಜಿ ಬಳಕೆ ಹೆಚ್ಚಾಗಿದೆ. ಆದ್ದರಿಂದ ಈ ಷೇರಿನ ಬೆಲೆ 800 ರೂಪಾಯಿ ತನಕ ಏರಬಹುದು.
ಇಲ್ಲಿ ನೀಡಿರುವ ಷೇರುಗಳು ಉತ್ತಮವಾದವು. ಆದರೆ ಇದು ಕೆಳಗೆ ಬಿದ್ದುಹೋದರೆ ಏನು ಮಾಡೋದು ಎಂಬ ಪ್ರಶ್ನೆ ನಿಮಗಿದ್ದಲ್ಲಿ, ಈ ಜಗತ್ತಿನಲ್ಲಿ ಯಾವುದಕ್ಕೂ ಗ್ಯಾರಂಟಿ ಎಂಬುದಿಲ್ಲ. ಆದರೆ ಈ ಕಂಪೆನಿ ಷೇರುಗಳು ಮೂಲಭೂತವಾಗಿ ಬಲಿಷ್ಠವಾಗಿರುವಂಥವು. ಖರೀದಿ ಮಾಡಿದ ನಂತರ ಬೆಲೆ ಬಿದ್ದುಹೋದರೂ ಮತ್ತೆ ಏರಿಕೆ ಆಗುವುದನ್ನು ನಿರೀಕ್ಷೆ ಮಾಡಬಹುದು. ಇವುಗಳಿಗೆ ಇರುವ ಸಾಲದ ಪ್ರಮಾಣದ, ಡೆಟ್ ಟು ಈಕ್ವಿಟಿ ರೇಷಿಯೋ, ರಿಟರ್ನ್ ಆನ್ ಈಕ್ವಿಟಿ ಇಂಥ ಅಂಶಗಳನ್ನೆಲ್ಲ ಗಮನಿಸಿಯೇ ಶಿಫಾರಸು ಮಾಡಲಾಗಿದೆ.
(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಮತ್ತು ಶಿಫಾರಸು ಲೇಖಕರವು. ಇದಕ್ಕೂ ಟಿವಿ9 ಡಿಜಿಟಲ್ ಕನ್ನಡಕ್ಕೂ ಸಂಬಂಧವಿಲ್ಲ. ಇದು ಹಣಕ್ಕೆ ಸಂಬಂಧಿಸಿದ ವ್ಯವಹಾರವಾದ್ದರಿಂದ ತಜ್ಞರನ್ನೊಮ್ಮೆ ಸಂಪರ್ಕಿಸಿ, ಆ ನಂತರ ವಯಕ್ತಿಕವಾಗಿ ನಿರ್ಧಾರ ಕೈಗೊಳ್ಳಬೇಕು)
ಇದನ್ನೂ ಓದಿ: Deepavali 2021: ದೀಪಾವಳಿಯಲ್ಲಿ ಹಾಲ್ ಮಾರ್ಕ್ ಇರುವ ಚಿನ್ನಾಭರಣ ಖರೀದಿಸುವಂತೆ ಗ್ರಾಹಕರಿಗೆ ಕೇಂದ್ರ ಸರ್ಕಾರ ಮನವಿ