ನವದೆಹಲಿ, ಮಾರ್ಚ್ 27: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ಯಾರಿಫ್ ಬೆದರಿಕೆ ಮುಂದುವರಿಸಿದ್ದಾರೆ. ವಾಹನಗಳು ಹಾಗೂ ವಾಹನ ಬಿಡಿಭಾಗಗಳ (Auto components) ಆಮದಿಗೆ ಶೇ. 25ರಷ್ಟು ಸುಂಕ ವಿಧಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ಒಂದೆಡೆ, ತಮ್ಮ ಈ ಕ್ರಮದಿಂದ ವರ್ಷಕ್ಕೆ 100 ಬಿಲಿಯನ್ ಡಾಲರ್ ಆದಾಯ ಬರುತ್ತದೆ. ಮತ್ತೊಂದೆಡೆ, ದೇಶೀಯ ತಯಾರಕಾ ಉದ್ಯಮಕ್ಕೆ ಬಲ ಸಿಗುತ್ತದೆ. ಹೀಗೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುತ್ತಿದ್ದಾರಾ ಡೊನಾಲ್ಡ್ ಟ್ರಂಪ್? ತಜ್ಞರ ಪ್ರಕಾರ ಈ ಟ್ಯಾರಿಫ್ ಕ್ರಮದಿಂದ ಅಮೆರಿಕದ ವಾಹನ ಉದ್ಯಮಕ್ಕೆ ಉಪಯೋಗ ಆಗುವುದಕ್ಕಿಂತ ನಷ್ಟವೇ ಹೆಚ್ಚಂತೆ. ಆದರೆ, ಟ್ರಂಪ್ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಸಾಧ್ಯತೆ ಸದ್ಯಕ್ಕಂತೂ ಇಲ್ಲ.
ಅಮೆರಿಕಕ್ಕೆ ಅತಿಹೆಚ್ಚು ವಾಹನ ಹಾಗೂ ವಾಹನ ಬಿಡಿಭಾಗಗಳನ್ನು ರಫ್ತು ಮಾಡುವ ದೇಶಗಳಲ್ಲಿ ಮೆಕ್ಸಿಕೋ, ಜಪಾನ್, ಸೌತ್ ಕೊರಿಯಾ, ಕೆನಡಾ, ಜರ್ಮನಿ, ಚೀನಾ ಸೇರಿವೆ. ಕೆನಡಾ ಮತ್ತು ಮೆಕ್ಸಿಕೋ ನೆರೆಯ ದೇಶಗಳಾದ್ದರಿಂದ ಅಮೆರಿಕದ ವಾಹನ ತಯಾರಕಾ ಕಂಪನಿಗಳು ಈ ದೇಶಗಳಿಂದ ಬಿಡಿಭಾಗ ಇತ್ಯಾದಿಯನ್ನು ಪಡೆಯಲು ಆದ್ಯತೆ ನೀಡುತ್ತವೆ. ಈಗ ಶೇ. 25ರಷ್ಟು ಆಮದು ಸುಂಕ ಅನ್ವಯ ಆದರೆ, ಈ ಬಿಡಿಭಾಗಗಳ ಬೆಲೆ ಏರಿಕೆ ಆಗುತ್ತದೆ.
ಇದನ್ನೂ ಓದಿ: ಆಸ್ತಿ ನೋಂದಣಿ ಸಂದರ್ಭದಲ್ಲಿ ಯಾರನ್ನು ಸಾಕ್ಷಿದಾರರನ್ನಾಗಿ ಮಾಡಬಹುದು, ಕಾನೂನು ಏನು ಹೇಳುತ್ತೆ?
ಭಾರತದಲ್ಲಿ ತಯಾರಾದ ವಾಹನಗಳು ಅಮೆರಿಕಕ್ಕೆ ರಫ್ತಾಗುವುದು ಬಹಳ ಕಡಿಮೆ. ಆದರೆ, ಸಾಕಷ್ಟು ಪ್ರಮಾಣದಲ್ಲಿ ವಾಹನ ಬಿಡಿಭಾಗಗಳು ಅಮೆರಿಕಕ್ಕೆ ಸರಬರಾಜಾಗುತ್ತವೆ. 2023-24ರ ಹಣಕಾಸು ವರ್ಷದಲ್ಲಿ ಭಾರತದಿಂದ ವಾಹನ ಬಿಡಿಭಾಗಗಳು ಅಮೆರಿಕಕ್ಕೆ ರಫ್ತಾಗಿದ್ದು ಒಟ್ಟು 6.79 ಬಿಲಿಯನ್ ಡಾಲರ್ನಷ್ಟು. ಅಮೆರಿಕಕ್ಕೆ ಅತಿಹೆಚ್ಚು ವಾಹನ ಬಿಡಿಭಾಗ ರಫ್ತು ಮಾಡುವ ದೇಶಗಳಲ್ಲಿ ಭಾರತವೂ ಇದೆ.
ಮದರ್ಸನ್ ಗ್ರೂಪ್, ಸೋನಾ ಬಿಎಸ್ಡಬ್ಲ್ಯು ಪ್ರಿಸಿಶನ್ ಫೋರ್ಜಿಂಗ್ಸ್, ಭಾರತ್ ಫೋರ್ಜ್ ಮೊದಲಾದ ಕೆಲ ಭಾರತೀಯ ಕಂಪನಿಗಳು ಅಮೆರಿಕಕ್ಕೆ ಸಾಕಷ್ಟು ವಾಹನ ಬಿಡಿಭಾಗಗಳನ್ನು ಸರಬರಾಜು ಮಾಡುತ್ತವೆ.
ಇದನ್ನೂ ಓದಿ: ದೆಹಲಿ ಶಾಸಕರಿರಲಿ, ಕೇರಳ ಶಾಸಕರ ಬೇಸಿಕ್ ಸ್ಯಾಲರಿ ಕೇವಲ 2,000 ರೂ; ಬೇರೆ ರಾಜ್ಯಗಳಲ್ಲಿ ಹೇಗಿದೆ ಸಂಬಳ? ಇಲ್ಲಿದೆ ಪಟ್ಟಿ
ಡೊನಾಲ್ಡ್ ಟ್ರಂಪ್ ಅವರು ಭಾರತ ಮಾತ್ರವಲ್ಲ, ಎಲ್ಲಾ ದೇಶಗಳಿಂದಲೂ ಸರಬರಾಜಾಗುವ ಸರಕುಗಳಿಗೆ ಸಮಾನ ಟ್ಯಾಕ್ಸ್ ಹಾಕುತ್ತಿದ್ದಾರೆ. ಹೀಗಾಗಿ, ಭಾರತೀಯ ಉದ್ಯಮಕ್ಕೆ ಮಾತ್ರ ಹಿನ್ನಡೆ ಎಂದು ಹೇಳಲು ಆಗುವುದಿಲ್ಲ. ಈ ಕಂಪನಿಗಳಿಗೆ ಮೂರು ಆಯ್ಕೆಗಳಿವೆ. ಒಂದು, ಯಥಾಪ್ರಕಾರ ಸುಂಕ ಪಾವತಿಸಿ ರಫ್ತು ಮಾಡುವುದು. ಇನ್ನೊಂದು, ಅಮೆರಿಕದಲ್ಲಿ ತಯಾರಕಾ ಘಟಕಗಳನ್ನು ಸ್ಥಾಪಿಸಿ ಅಲ್ಲೆ ತಯಾರಿಸಿ ಬಿಡಿಭಾಗ ಪೂರೈಸುವುದು. ಮಗದೊಂದು ಆಯ್ಕೆ ಎಂದರೆ, ಬೇರೆ ಪರ್ಯಾಯ ಮಾರುಕಟ್ಟೆಗಳತ್ತ ಗಮನ ಕೊಡುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Thu, 27 March 25