
ನವದೆಹಲಿ, ಜುಲೈ 30: ನಿರೀಕ್ಷೆಯಂತೆ ಭಾರತದ ಸರಕುಗಳ ಮೇಲೆ ಶೇ. 25ರಷ್ಟು ಟ್ಯಾರಿಫ್ ಅನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (donald trump) ಪ್ರಕಟಿಸಿದ್ದಾರೆ. ಆಗಸ್ಟ್ 1ರಿಂದ ಭಾರತದ ಮೇಲೆ ಶೇ 25 ಟ್ಯಾರಿಫ್ ಹಾಗೂ ಹೆಚ್ಚುವರಿ ದಂಡವನ್ನು ಹಾಕಲಾಗುವುದು ಎಂದು ತಮ್ಮ ಟ್ರೂತ್ ಸೋಷಿಯಲ್ ಅಕೌಂಟ್ನಲ್ಲಿ ಘೋಷಿಸಿದ್ದಾರೆ. ಭಾರತ ಅಧಿಕ ಟ್ಯಾರಿಫ್ ವಿಧಿಸುತ್ತಿರುವುದು, ಹಣಕಾಸೇತರ ವ್ಯಾಪಾರ ನಿರ್ಬಂಧ (non monetary trade barriers) ಹೊಂದಿರುವುದು, ರಷ್ಯಾ ಇಂಧನ ಖರೀದಿಸುತ್ತಿರುವುದು, ಈ ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಭಾರತದ ಮೇಲೆ ಆಮದು ಸುಂಕ ಹಾಕುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಸಂಬಂಧ ದೊಡ್ಡ ಮಟ್ಟದಲ್ಲಿ ಇದೆಯಾದರೂ ಅಮೆರಿಕಕ್ಕೆ ಟ್ರೇಡ್ ಡೆಫಿಸಿಟ್ ಇದೆ. 40 ಬಿಲಿಯನ್ ಡಾಲರ್ಗೂ ಅಧಿಕ ಮೊತ್ತದ ಟ್ರೇಡ್ ಡೆಫಿಸಿಟ್ ಅನ್ನು ಅಮೆರಿಕ ಹೊಂದಿದೆ. ಈ ಕೊರತೆಯನ್ನು ಸರಿದೂಗಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ರಷ್ಯಾ ಬದಲು ತನ್ನ ತೈಲವನ್ನು ಭಾರತ ಖರೀದಿಸಲಿ ಎನ್ನುವ ಅಪೇಕ್ಷೆ ಮತ್ತು ನಿರೀಕ್ಷೆ ಅಮೆರಿಕದ್ದಾಗಿದೆ. ಹೀಗಾಗಿ, ಡೊನಾಲ್ಡ್ ಟ್ರಂಪ್ ಭಾರತದ ಕಾಲೆಳೆಯುತ್ತಲೇ ಇದ್ದಾರೆ.
ಇದನ್ನೂ ಓದಿ: ಆಗಸಕ್ಕೆ ನಿಸಾರ್ ಸೆಟಿಲೈಟ್ ಹಾರಿಸಿದ ಭಾರತದ ರಾಕೆಟ್; ಇದು ಎರಡು ರಾಡಾರ್ ಫ್ರೀಕ್ವೆನ್ಸಿ ಬಳಸುವ ವಿಶ್ವದ ಮೊದಲ ಉಪಗ್ರಹ
‘ಭಾರತ ನಮ್ಮ ಸ್ನೇಹಿತ. ಆದರೆ, ತೀರಾ ಹೆಚ್ಚು ಟ್ಯಾರಿಫ್ ಇರುವುದರಿಂದ ಅವರೊಂದಿಗೆ ಕಡಿಮೆ ಬ್ಯುಸಿನೆಸ್ ಮಾಡುತ್ತಿದ್ದೇವೆ. ಯಾವುದೇ ದೇಶವೂ ಹೊಂದಿಲ್ಲದ ಅತ್ಯಂತ ಕಠಿಣ ಮತ್ತು ವಿಚಿತ್ರ ಹಣಕಾಸೇತರ ವ್ಯಾಪಾರ ತಡೆಯನ್ನು ಅವರು ಹೊಂದಿದ್ದಾರೆ’ ಎಂದು ಟ್ರಂಪ್ ಕುಟುಕಿದ್ದಾರೆ.
‘ತಮ್ಮ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದಲೇ ಖರೀದಿಸುತ್ತಿದ್ದಾರೆ. ರಷ್ಯಾದಿಂದ ಅತಿಹೆಚ್ಚು ತೈಲ ಖರೀದಿಸುತ್ತಿದ್ದಾರೆ. ಉಕ್ರೇನ್ನಲ್ಲಿ ರಷ್ಯಾ ಮಾರಣ ಹೋಮ ಮಾಡಬಾರದು ಎಂದು ಎಲ್ಲರೂ ಬಯಸುತ್ತಿರುವ ಸಮಯದಲ್ಲಿ ಇದು ನಡೆಯುತ್ತಿದೆ. ಆದ್ದರಿಂದ ಆಗಸ್ಟ್ 1ರಿಂದ ಭಾರತವು ಶೇ. 25 ಟ್ಯಾರಿಫ್ ಕಟ್ಟಬೇಕು. ಜೊತೆಗೆ ಪೆನಾಲ್ಟಿ ಕೂಡ ತೆರಬೇಕು’ ಎಂದು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 2ರಂದು ಟ್ರಂಪ್ ಅವರು ಭಾರತದ ಮೇಲೆ ಶೇ. 27ರಷ್ಟು ಟ್ಯಾರಿಫ್ ಘೋಷಿಸಿದ್ದರು. ಬಳಿಕ ಅದನ್ನು ಶೇ. 10ಕ್ಕೆ ಇಳಿಸಿದರು. ಟ್ರೇಡ್ ಡೀಲ್ ಮಾಡಿಕೊಳ್ಳದೇ ಹೋದರೆ ಆಗಸ್ಟ್ 1ರಂದು ಮತ್ತೆ ಟ್ಯಾರಿಫ್ ಏರಿಸುವುದಾಗಿ ತಿಳಿಸಿದ್ದರು. ಸದ್ಯಕ್ಕೆ ಎರಡೂ ದೇಶಗಳ ಮಧ್ಯೆ ಟ್ರೇಡ್ ಡೀಲ್ ಅಂತಿಮಗೊಂಡಿಲ್ಲ. ಹೀಗಾಗಿ, ಆಗಸ್ಟ್ 1ರಿಂದ ಟ್ಯಾರಿಫ್ ಏರಿಸುವ ನಿರೀಕ್ಷೆ ಇತ್ತು. ಶೇ. 25 ಟ್ಯಾರಿಫ್ ತೀರಾ ಹೆಚ್ಚಿನ ಮಟ್ಟದ್ದಲ್ಲ ಎನ್ನುವ ಅಭಿಪ್ರಾಯ ಇದೆ.
ಇದನ್ನೂ ಓದಿ: ಅಮೆರಿಕಕ್ಕೆ ಫೋನ್ ಸರಬರಾಜು; ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದ ಭಾರತ
ಭಾರತ ಮತ್ತು ಅಮೆರಿಕ ನಡುವೆ ಟ್ರೇಡ್ ಡೀಲ್ ಅಂತಿಮಗೊಳಿಸಲು ಸೆಪ್ಟೆಂಬರ್ ತಿಂಗಳಲ್ಲಿ ಆರನೇ ಸುತ್ತಿನ ಮಾತುಕತೆ ಇದೆ. ಆಗ ಒಪ್ಪಂದವು ಅಂತಿಮ ಹಂತಕ್ಕೆ ಬರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ