
ನವದೆಹಲಿ, ಜುಲೈ 31: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ವಿಶ್ವದ ಮೂರನೇ ಅತಿದೊಡ್ಡ ಜಿಡಿಪಿ (GDP) ಎನಿಸುವ ದಾಖಲೆಗೆ ಸಮೀಪದಲ್ಲಿರುವ ಭಾರತದ ಆರ್ಥಿಕತೆಯನ್ನು ಟ್ರಂಪ್ ಜರಿದಿದ್ದಾರೆ. ಭಾರತದ್ದನ್ನು ಡೆಡ್ ಎಕನಾಮಿ (ಸತ್ತ ಆರ್ಥಿಕತೆ) ಎಂದು ನಿಂದಿಸಿದ್ದಾರೆ. ರಷ್ಯಾ ಜೊತೆ ಭಾರತ ವ್ಯಾಪಾರ ಸಂಬಂಧ ಹೊಂದಿರುವುದು ಟ್ರಂಪ್ ಅವರ ಈ ಅವಹೇಳನಕಾರಿ ಮಾತುಗಳಿಗೆ ಕಾರಣ.
‘ರಷ್ಯಾ ಜೊತೆ ಭಾರತ ಏನು ಮಾಡುತ್ತೆ ಎಂದು ನನಗೇನೂ ಆಗಬೇಕಾದ್ದಿಲ್ಲ. ಅವೆರಡೂ ಸತ್ತ ಆರ್ಥಿಕತೆಗಳು ಒಟ್ಟಿಗೆ ನೆಲಕಚ್ಚುವಂತಾಗಬೇಕು’ ಎಂದು ಟ್ರಂಪ್ ಹಿಡಿಶಾಪ ಹಾಕಿದ್ದಾರೆ.
ಆಗಸ್ಟ್ 1ರಿಂದ ಭಾರತದ ಸರಕುಗಳ ಮೇಲೆ ಶೇ. 25ರಷ್ಟು ಸುಂಕಗಳನ್ನು ಹಾಕುವುದಾಗಿ ಪ್ರಕಟಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷರು ಈ ವಾತಿನ ವರಸೆ ಮತ್ತಷ್ಟು ಹರಿತಗೊಳಿಸಿದ್ದಾರೆ.
ಇದನ್ನೂ ಓದಿ: ಆ. 1ರಿಂದ ಭಾರತದ ಮೇಲೆ ಶೇ. 25 ಟ್ಯಾರಿಫ್: ಅಮೆರಿಕ ಅಧ್ಯಕ್ಷ ಘೋಷಣೆ
‘ಭಾರತದೊಂದಿಗೆ ನಾವು ಬಹಳ ಕಡಿಮೆ ವ್ಯವಹಾರ ಮಾಡಿದ್ದೇವೆ. ಅವರು ವಿಧಿಸುವ ತೆರಿಗೆ ಬಹಳ ಅಧಿಕ. ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶಗಳಲ್ಲೊಂದು’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತಕ್ಕೆ ಅಮೆರಿಕ ಬಹಳ ದೊಡ್ಡ ಮಾರುಕಟ್ಟೆ ಎನಿಸಿದೆ. ಆದರೆ, ಅಮೆರಿಕಕ್ಕೆ ಭಾರತದ ಮಾರುಕಟ್ಟೆ ಪೂರ್ಣವಾಗಿ ಮುಕ್ತವಾಗಿಲ್ಲ. ಅಮೆರಿಕಕ್ಕೆ ಭಾರತದೊಂದಿಗೆ 40 ಬಿಲಿಯನ್ ಡಾಲರ್ಗೂ ಅಧಿಕ ಮೊತ್ತದಷ್ಟು ಟ್ರೇಡ್ ಡೆಫಿಸಿಟ್ ಇದೆ. ಇದು ಟ್ರಂಪ್ ಅವರಿಗೆ ಕಣ್ಣುರಿ ತಂದಿರುವ ವಿಚಾರ.
ಇನ್ನು, ರಷ್ಯಾ ಮತ್ತು ಅಮೆರಿಕ ಮಧ್ಯೆ ಯಾವುದೇ ವ್ಯಾಪಾರ ಇಲ್ಲ. ಅದು ಹಾಗೇ ಇರಲಿ ಎಂದು ಮಾರ್ಮಿಕವಾಗಿ ಹೇಳಿರುವ ಟ್ರಂಪ್, ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರನ್ನು ಟೀಕಿಸಿದ್ದಾರೆ.
‘ತಾನಿನ್ನೂ ಅಧ್ಯಕ್ಷನಾಗಿಯೇ ಇದ್ದೇನೆ ಎನ್ನುವ ಭ್ರಮೆಯಲ್ಲಿರುವ ರಷ್ಯಾದ ಮಾಜಿ ವಿಫಲ ಅಧ್ಯಕ್ಷ ಮೆಡ್ವೆಡಿವ್ ತಮ್ಮ ಮಾತುಗಳ ಮೇಲೆ ನಿಗಾ ಹೊಂದಿರಲಿ. ಅವರು ಅಪಾಯಕಾರಿ ವಲಯ ಪ್ರವೇಶಿಸುತ್ತಿದ್ದಾರೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕಕ್ಕೆ ಫೋನ್ ಸರಬರಾಜು; ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದ ಭಾರತ
ರಷ್ಯಾದ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಭದ್ರತಾ ಮಂಡಳಿಯ ಡೆಪ್ಯುಟಿ ಛೇರ್ಮನ್ ಆಗಿರುವ ಡಿಮಿಟ್ರಿ ಮೆಡ್ವೆಡೆವ್ ಅವರು ಉಕ್ರೇನ್ ವಿಚಾರದಲ್ಲಿ ಕದನ ವಿರಾಮ ಅವಧಿ ಇಳಿಸುವುದಾಗಿ ಟ್ರಂಪ್ ನೀಡಿದ ಹೇಳಿಕೆ ವಿರುದ್ಧ ತಿರುಗೇಟು ನೀಡಿದ್ದರು. ಈ ರೀತಿ ಎಚ್ಚರಿಕೆ ಕೊಡುತ್ತಿದ್ದರೆ ಮುಂದೆ ಯುದ್ಧಕ್ಕೆ ನಾಂದಿ ಹಾಡುತ್ತದೆ ಎಂದು ಹೇಳಿದ್ದರು.
‘ಟ್ರಂಪ್ ಎರಡು ವಿಷಯ ತಿಳಿದಿರಬೇಕು. ಮೊದಲನೆಯದು, ರಷ್ಯಾ ಇಸ್ರೇಲ್ ಅಲ್ಲ, ಅಥವಾ ಇರಾನ್ ಕೂಡ ಅಲ್ಲ. ಎರಡನೆಯದು, ಪ್ರತೀ ಹೊಸ ಎಚ್ಚರಿಕೆಯೂ ಬೆದರಿಕೆಯಾಗಿರುತ್ತದೆ. ಯುದ್ಧಕ್ಕೆ ಎಡೆ ಮಾಡುತ್ತದೆ. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಅಲ್ಲ, ತನ್ನದೇ ದೇಶದ ವಿರುದ್ಧ ಯುದ್ಧಕ್ಕೆ ಎಡೆ ಮಾಡಿಕೊಡುತ್ತದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಪ್ತರೂ ಆಗಿರುವ ಡಿಮಿಟ್ರಿ ಮೆಡ್ವೆಡೆವ್ ತಿಳಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ