
ನವದೆಹಲಿ, ಅಕ್ಟೋಬರ್ 22: ಭಾರತದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರಿಗೆ ಸೇವೆಗಳನ್ನು ಹೆಚ್ಚು ಪಾರದರ್ಶಕ ಹಾಗೂ ಸುಲಭಗೊಳಿಸಲು ಕೇಂದ್ರ ಸರ್ಕಾರವು ಚಾಲನಾ ಪರವಾನಗಿ ನಿಯಮಗಳಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ತರಲು ಮುಂದಾಗಿದೆ. ಡ್ರೈವಿಂಗ್ ಸ್ಕಿಲ್ ಪರೀಕ್ಷೆಯಲ್ಲಿ ಪಾಸಾಗಲು ಕನಿಷ್ಠ ಅಂಕವನ್ನು ಶೇ. 75ಕ್ಕೆ ಏರಿಸುವ ಪ್ರಸ್ತಾಪ ಇದೆ. ಕೆಲ ಆನ್ಲನ್ ಸರ್ವಿಸ್ಗಳಿಗೆ ಶುಲ್ಕದಲ್ಲಿ ವಿನಾಯಿತಿ ಕೊಡುವುದು; ಲೈಸೆನ್ಸ್ ಹೆಸರು, ವಿಳಾಸ ಬದಲಾವಣೆಗೆ ಡೆಡ್ಲೈನ್ಗಳನ್ನು ಪರಿಷ್ಕರಿಸುವುದು, ಹೀಗೆ, ವಿವಿಧ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಅಥವಾ ಪ್ರಸ್ತಾವನೆಯಲ್ಲಿರುವ ಪ್ರಮುಖ ಬದಲಾವಣೆಗಳು ಇಲ್ಲಿವೆ:
ಚಾಲನಾ ಪರವಾನಗಿ ಪಡೆಯಲು ನಡೆಸುವ ಲಿಖಿತ ಅಥವಾ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಕಠಿಣ ನಿಯಮಗಳನ್ನು ತರಲಾಗುತ್ತಿದ್ದು, ಅಭ್ಯರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಶೇ. 75ರಷ್ಟು ಅಂಕಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ರಸ್ತೆ ಸುರಕ್ಷತೆ ಮತ್ತು ಚಾಲನಾ ಕೌಶಲ್ಯವನ್ನು ಗಂಭೀರವಾಗಿ ಪರಿಗಣಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಚಾಲನಾ ಪರವಾನಗಿಯಲ್ಲಿ ಅಥವಾ ವಾಹನಗಳ ನೋಂದಣಿಯಲ್ಲಿ (RC) ವಿಳಾಸ, ಹೆಸರು ಅಥವಾ ಮೊಬೈಲ್ ಸಂಖ್ಯೆ ಬದಲಾದಾಗ, ಆ ಮಾಹಿತಿಯನ್ನು ಅಪ್‌ಡೇಟ್ ಮಾಡಲು ಕೇವಲ 15 ದಿನಗಳ ಕಠಿಣ ಗಡುವು ವಿಧಿಸುವ ಪ್ರಸ್ತಾವನೆಯಿದೆ. ನಿಗದಿತ ಅವಧಿಯೊಳಗೆ ಬದಲಾವಣೆ ಮಾಡಿಕೊಳ್ಳದಿದ್ದರೆ ದಂಡ ವಿಧಿಸುವ ನಿಯಮವಿರಲಿದೆ.
ಇದನ್ನೂ ಓದಿ: ನವರಾತ್ರಿ ಹಬ್ಬದಲ್ಲಿ 11.23 ಲಕ್ಷ ವಾಹನಗಳ ಮಾರಾಟ; ದ್ವಿಚಕ್ರ ವಾಹನಗಳೇ 8.34 ಲಕ್ಷದಷ್ಟು ಸೇಲ್
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ಟಿಒ (RTO) ಕಚೇರಿಗೆ ಅಲೆಯುವುದನ್ನು ತಪ್ಪಿಸಲು, ಡಿಎಲ್ ನವೀಕರಣ, ಹೆಸರು ಮತ್ತು ವಿಳಾಸ ಬದಲಾವಣೆ ಮತ್ತು ನಕಲು ಡಿಎಲ್ ಪಡೆಯುವಂತಹ ಕೆಲವು ನಿರ್ದಿಷ್ಟ ಆನ್‌ಲೈನ್ ಸೇವೆಗಳನ್ನು ಸಂಪೂರ್ಣವಾಗಿ ಉಚಿತಗೊಳಿಸುವ ಅಥವಾ ಶುಲ್ಕವನ್ನು ಗಣನೀಯವಾಗಿ ತಗ್ಗಿಸುವ ಕುರಿತು ಚಿಂತನೆ ನಡೆಸಲಾಗಿದೆ.
ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಖಾಸಗಿ ಡ್ರೈವಿಂಗ್ ಸ್ಕೂಲ್‌ಗಳ ಮೂಲಕವೇ ತರಬೇತಿ ಪಡೆದು ಪರೀಕ್ಷೆ ಪಾಸ್ ಮಾಡುವವರಿಗೆ ಡಿಎಲ್ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತಿದೆ.
ಡ್ರೈವಿಂಗ್ ಲೈಸೆನ್ಸ್ದಾರರ ಹೆಸರು ಮತ್ತು ವಿಳಾಸಗಳನ್ನು ಬದಲಾಯಿಸಲು ಸಲ್ಲಿಸಲಾಗುವ ಅರ್ಜಿಗಳ ಶೀಘ್ರ ವಿಲೇವಾರಿಗೆ ನಿಯಮಗಳನ್ನು ರೂಪಿಸಲು ಯತ್ನಿಸಲಾಗುತ್ತಿದೆ. 15 ದಿನದೊಳಗೆ ಅರ್ಜಿಯನ್ನು ತಿರಸ್ಕರಿಸುವುದೋ ಅಥವಾ ಸ್ವೀಕರಿಸುವುದೋ ವಿಲೇವಾರಿ ಆಗಬೇಕು. ಅರ್ಜಿ ತಿರಸ್ಕರಿಸಿದರೆ ಅದಕ್ಕೆ ಕಾರಣ ನೀಡಬೇಕು ಎಂದು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ಕೊಲ್ಲಿ ನಾಡಾದ ದುಬೈಗಿಂತಲೂ ಭಾರತದಲ್ಲೇ ಪೆಟ್ರೋಲ್ ಬೆಲೆ ಕಡಿಮೆ
ವಿಳಾಸ ಬದಲಾವಣೆಗೆ ಸಲ್ಲಿಸುವ ಅರ್ಜಿಗಳನ್ನು 30 ದಿನದೊಳಗೆ ವಿಲೇವಾರಿ ಮಾಡದೇ ಹೋದರೆ ಅದು ಸ್ವೀಕೃತ ಎಂದು ಪರಿಗಣಿಸಬೇಕಾಗುತ್ತದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಕರಡು ನಿಯಮಗಳನ್ನು ಬಿಡುಗಡೆ ಮಾಡಿದ್ದು, ಯಾರಿಗಾದರೂ ಆಕ್ಷೇಪಣೆಗಳು, ಸಲಹೆಗಳು ಇದ್ದರೆ 30 ದಿನದೊಳಗೆ ಸಲ್ಲಿಸಲು ಕಾಲಾವಕಾಶ ಕೊಡಲಾಗಿದೆ. ಸಲಹೆಗಳು ಬಂದಲ್ಲಿ, ಸರ್ಕಾರ ತಿದ್ದುಪಡಿ ಮಾಡಿ ಆ ಬಳಿಕ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ