ಬೆಂಗಳೂರು: ವಿತರಣಾ ಉದ್ಯಮ ಸಂಸ್ಥೆ, ಬೆಂಗಳೂರು ಮೂಲದ ಡುಂಜೋ (Dunzo) ಶೇ 3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ (Layoffs) ವರದಿಯಾಗಿದೆ. ಮೆಟಾ, ಟ್ವಿಟರ್, ಅಮೆಜಾನ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಅನೇಕ ಟೆಕ್ ಕಂಪನಿಗಳು ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇದೀಗ ಡುಂಜೋ ಸಹ ಇವುಗಳ ಸಾಲಿಗೆ ಸೇರಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಗೂಗಲ್ ಬೆಂಬಲಿತ ಉದ್ಯಮ ಸಂಸ್ಥೆಯಾಗಿರುವ ಡುಂಜೋ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಸ್ತುಗಳನ್ನು ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ವೆಚ್ಚ ಕಡಿತದ ಕ್ರಮವಾಗಿ ಉದ್ಯೋಗಿಗಳ ವಜಾ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ಕಠಿಣ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಸಾಧ್ಯವಾದಷ್ಟೂ ನೆರವಾಗಬೇಕು ಎಂಬುದು ಕಂಪನಿಯ ಉದ್ದೇಶವಾಗಿದೆ. ಜನರ ಮೇಲೆ ನೇರವಾಗಿ ಕೆಟ್ಟ ಪರಿಣಾಮ ಬೀರುವ ನಿರ್ಧಾರಗಳಿಗೆ ಯಾವತ್ತೂ ನಮ್ಮದು ಕೊನೆಯ ಆದ್ಯತೆಯಾಗಿದೆ ಎಂದು ಡುಂಜೋ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಹ ಸಂಸ್ಥಾಪಕ ಕಬೀರ್ ವಿಶ್ವಾಸ್ ತಿಳಿಸಿದ್ದಾರೆ ಎಂದು ‘ಸಿಎನ್ಬಿಸಿ-ಟಿವಿ 18’ ವರದಿ ಮಾಡಿದೆ.
ಸಂಖ್ಯೆಗಳು ಎಷ್ಟೇ ಇರಲಿ, ಅವರೆಲ್ಲ ಡುಂಜೋ ಜತೆ ತಮ್ಮ ವೃತ್ತಿಜೀವನ ಕಟ್ಟಿಕೊಂಡಿದ್ದರು. ಪ್ರತಿಭಾವಂತ ಸಹೋದ್ಯೋಗಿಗಳು ನಮ್ಮನ್ನು ತೊರೆಯಬೇಕಾಗಿ ಬಂದಿರುವುದು ಬಹಳ ಬೇಸರ ತರಿಸಿದೆ ಎಂದು ಅವರು ಹೇಳಿದ್ದಾರೆ. ಎಷ್ಟು ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬ ಲೆಕ್ಕಾಚಾರವನ್ನು ಡುಂಜೋ ಬಹಿರಂಗಪಡಿಸಿಲ್ಲ. 2022ರಲ್ಲಿ ಡುಂಜೋ 464 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿತ್ತು.
ಇದನ್ನು ಓದಿ: ShareChat Announces Layoffs: ಮಹತ್ವದ ನಿರ್ಧಾರ ತೆಗೆದುಕೊಂಡು ಶೇರ್‌ಚಾಟ್: 20% ಉದ್ಯೋಗಿಗಳ ವಜಾ
ವೆಚ್ಚವನ್ನು ಕಡಿತಗೊಳಿಸುವುದಕ್ಕಾಗಿ ಶೇ 20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಶೇರ್‌ಚಾಟ್ ಇತ್ತೀಚೆಗೆ ತಿಳಿಸಿತ್ತು. ಬೆಂಗಳೂರು ಮೂಲದ ಮೊಹಲ್ಲಾ ಟೆಕ್ ಪ್ರೆವೇಟ್ ಲಿಮಿಟೆಡ್ ಮಾಲೀಕತ್ವದ ಶೇರ್‌ಚಾಟ್ ಮತ್ತು ಅದರ ಕಿರು ವೀಡಿಯೊ ಆಪ್ಲಿಕೇಷನ್ ಮೋಜ್ ಸುಮಾರು 500 ಜನರನ್ನು ಕೆಲಸದಿಂದ ವಜಾಗೊಳಿಸಿವೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿದ್ದವು.
ಈ ಮಧ್ಯೆ, ಕ್ಯಾಬ್ ಸೇವೆ ಒದಗಿಸುವ ಮತ್ತು ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಓಲಾ ಕೂಡ ವಿವಿಧ ಘಟಕಗಳಿಂದ 200 ಮಂದಿ ಉದ್ಯೋಗಿಗಳನ್ನು ಕೆಲವು ದಿನಗಳ ಹಿಂದಷ್ಟೇ ವಜಾಗೊಳಿಸಿದೆ. ಉದ್ಯೋಗ ಕಡಿತವನ್ನು ತಂಡಗಳ ಪುನರ್ರಚನಾ ಪ್ರಕ್ರಿಯೆ ಎಂದು ಓಲಾ ಬಣ್ಣಿಸಿತ್ತು. ನಿರ್ವಹಣೆ ವೆಚ್ಚ ಕಡಿಮೆ ಮಾಡುವುದಕ್ಕಾಗಿ ಅಮೆರಿಕ ಹಲವೆಡೆ ಮೆಟಾ, ಮೈಕ್ರೋಸಾಫ್ಟ್ ಕಂಪನಿಗಳು ಕಚೇರಿಗಳನ್ನು ಮುಚ್ಚುತ್ತಿದ್ದು, ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆ ನೀಡುತ್ತಿರುವ ಬಗ್ಗೆಯೂ ಸೋಮವಾರ ವರದಿಯಾಗಿತ್ತು.