ನವದೆಹಲಿ: ಕೊರೊನಾ ಎರಡಡನೇ ಅಲೆಯ ಮಧ್ಯೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಮಾರಾಟಗಾರರು ಪಾವತಿಸುವ ವಿವಿಧ ಶುಲ್ಕಗಳ ಮನ್ನಾ ಸೇರಿದಂತೆ ಕೆಲವು ಕ್ರಮಗಳನ್ನು ಅಮೆಜಾನ್ ಇಂಡಿಯಾದಿಂದ ಮೇ 1ರಂದು ಘೋಷಣೆ ಮಾಡಲಾಗಿದೆ. ಮೇ 1ರಿಂದ 31ರ ತನಕ ವಿವಿಧ ವರ್ಗದ ಅಡಿಯಲ್ಲಿ ಬರುವ ವರ್ತಕರಿಗೆ “ಸೆಲ್ ಆನ್ ಅಮೆಜಾನ್” ಅಥವಾ “ರೆಫರಲ್ ಫೀ” ಮೇಲೆ ಶೇ 50ರಷ್ಟು ವಿನಾಯಿತಿ ಘೋಷಿಸಿದೆ. ಇನ್ನು ಈ ಅವಧಿಯಲ್ಲಿ ಯಾವ ವಿಳಾಸಗಳಿಗೆ ಉತ್ಪನ್ನಗಳನ್ನು ಡೆಲಿವರಿ ಮಾಡುವುದಕ್ಕೆ ಸಾಧ್ಯವಾಗದೆ, ಅವುಗಳನ್ನು ಗೋದಾಮಿನಲ್ಲಿ ಇಡಬೇಕಾದಲ್ಲಿ ಸಂಗ್ರಹ ಶುಲ್ಕ ಅಥವಾ ಉತ್ಪನ್ನಗಳನ್ನು ದೀರ್ಘಾವಧಿಗೆ ಇರಿಸಲು ವಿಧಿಸುವ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
“ಈಗಿನ ಪರಿಸ್ಥಿತಿಯಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಮೇಲೆ ಪರಿಣಾಮ ಆಗುತ್ತದೆ ಎಂದು ನಮಗೆ ಅರ್ಥ ಆಗುತ್ತದೆ. ಕೊರೊನಾ ಬಿಕ್ಕಟ್ಟು ಸೃಷ್ಟಿಸಿರುವ ಆರ್ಥಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಮಾರಾಟಗಾರರಿಗೆ ನೆರವಾಗುವ ಉದ್ದೇಶ ಇಟ್ಟುಕೊಂಡು ನಾವು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದೇವೆ,” ಎಂದು ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಮನೀಶ್ ತಿವಾರಿ ಬ್ಲಾಗ್ ಪೋಸ್ಟ್ನಲ್ಲಿ ಹೇಳಿದ್ದಾರೆ.
8.5 ಲಕ್ಷಕ್ಕೂ ಹೆಚ್ಚು ಮಾರಾಟಗಾರರು
ಅಮೆಜಾನ್ ಇಂಡಿಯಾವು ತನ್ನ ಪ್ಲಾಟ್ಫಾರ್ಮ್ನಲ್ಲಿ 8.5 ಲಕ್ಷಕ್ಕೂ ಹೆಚ್ಚು ಮಾರಾಟಗಾರರನ್ನು ಹೊಂದಿದೆ. 30 ದಿನಗಳ ಅವಧಿಗೆ ಮಾರಾಟಗಾರರು ಫೈಲ್ ಮಾಡುವ ವಿವಿಧ ಬಗೆಯ ರೀಎಂಬರ್ಸ್ಮೆಂಟ್ಗಳಿಗೆ ತಾತ್ಕಾಲಿಕವಾಗಿ ಕ್ಲೇಮ್ ವಿಂಡೋಗಳ ವಿನಾಯಿತಿ ನೀಡಲಾಗಿದೆ. ಕೊರೊನಾ ಕಾರಣಕ್ಕೆ ಒಂದು ವೇಳೆ ಉತ್ಪನ್ನಗಳನ್ನು ತಲುಪಿಸಲು ಸಾಧ್ಯವಾಗದಿದ್ದಲ್ಲಿ ಮಾರಾಟಗಾರರ ಪರ್ಫಾರ್ಮೆನ್ಸ್ ಮಾನದಂಡದ ಮೇಲೆ ನೆಗೆಟಿವ್ ಪರಿಣಾಮ ಆಗಿ, ಅದರ ಮುಂದುವರಿದ ಭಾಗವಾಗಿ ಮಾರಾಟಗಾರರ ಖಾತೆಯ ಮೇಲೆ ನಿರ್ಬಂಧಗಳನ್ನು ಹಾಕುವ ಸಾಧ್ಯತೆ ಇತ್ತು. ಇದೀಗ ಹಾಗೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ಈ ಅವಧಿಯಲ್ಲಿ ನಮ್ಮ ಮಾರಾಟಗಾರರಿಗೆ ನೆರವಾಗುವ ಉದ್ದೇಶಕ್ಕೆ ತಡವಾಗಿ ಉತ್ಪನ್ನಗಳನ್ನು ತಲುಪಿಸುವ ದರ, ಆರ್ಡರ್ ಕ್ಯಾನ್ಸಲೇಷನ್, ರಿಟರ್ನ್ಸ್ಗೆ ಸಂಬಂಧಿಸಿದಂತೆ ಇರುವ ನಮ್ಮ ನೀತಿಯ ಬಗ್ಗೆ ಕೂಡ ಕೆಲಸ ಮಾಡುತ್ತಿದ್ದೇವೆ ಎಂದು ಬ್ಲಾಗ್ನಲ್ಲಿ ಹೇಳಲಾಗಿದೆ. ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಹೆಲ್ತ್ಕೇರ್ ಮೂಲಸೌಕರ್ಯದ ಮೇಲೆ ಭಾರೀ ಒತ್ತಡ ಬಿದ್ದಿದೆ. ಹಲವು ರಾಜ್ಯಗಳಲ್ಲಿ ಕರ್ಫ್ಯೂ, ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಅದರಿಂದ ಉದ್ಯಮಗಳ ಮೇಲೆ ಪರಿಣಾಮ ಆಗುತ್ತಿದೆ.
ಇ-ಕಾಮರ್ಸ್ ಕಂಪೆನಿಗಳು ಕಾರ್ಯ ನಿರ್ವಹಿಸುವುದಕ್ಕೆ ಅವಕಾಶ
ಹಲವು ರಾಜ್ಯಗಳು ಇ-ಕಾಮರ್ಸ್ ಕಂಪೆನಿಗಳು ಕಾರ್ಯ ನಿರ್ವಹಿಸುವುದಕ್ಕೆ ಅವಕಾಶ ಮಾಡಿಕೊಟ್ಟಿವೆ. ಆದರೆ ಅದು ದಿನಸಿ, ಔಷಧದಂಥ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ವರದಿ 2020ರ ವರದಿ ನೀಡಿರುವ ಅಮೆಜಾನ್ ಇಂಡಿಯಾ, 10ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಜತೆಗೆ ಕೆಲಸ ಮಾಡುತ್ತಿರುವುದಾಗಿ ಹೇಳಿದೆ. ಅದರಲ್ಲಿ ಮಾರಾಟಗಾರರು, ಡೆಲಿವರಿ ಮತ್ತು ಸಾಗಣೆ ಸಹಭಾಗಿಗಳು, ಮಳಿಗೆಗಳು, ಸಂಸ್ಥೆಗಳು, ಡೆವಲಪರ್ಗಳು, ಕಂಟೆಂಟ್ ಸೃಷ್ಟಿಕರ್ತರು ಮತ್ತು ಲೇಖಕರು ಒಳಗೊಂಡಿದ್ದಾರೆ.
ಇದನ್ನೂ ಓದಿ: Amazon Clearance Sale: ಅಮೆಜಾನ್ನಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಶೇಕಡಾ 50ರ ತನಕ ರಿಯಾಯಿತಿ, ಏಸಿಗಳಿಗೆ ಶೇ 40 ಡಿಸ್ಕೌಂಟ್
(E commerce company Amazon India announced various measures to help small business amidst corona second wave in India)