12,000 ಕೋಟಿ ರೂ ಮನಿ ಲಾಂಡರಿಂಗ್ ಆರೋಪ; ಜೇಪೀ ಇನ್​ಫ್ರಾಟೆಕ್​ನ ಮನೋಜ್ ಗೌರ್ ಬಂಧನ

ED arrests Jaypee Infratech MD Manoj Gaur: ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಜೇಪೀ ಇನ್​ಫ್ರಾಟೆಕ್​ನ ನಿರ್ವಾಹಕ ನಿರ್ದೇಶಕ ಮನೋಜ್ ಗೌರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿಯಲ್ಲಿ ವಿವಿಧ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳ ಮೂಲಕ ಗ್ರಾಹಕರಿಂದ ಹಣ ಪಡೆದು ವಂಚಿಸಿದ ಆರೋಪ ಜೇಪೀ ಇನ್​ಫ್ರಾಟೆಕ್ ಮೇಲಿದೆ. ಒಟ್ಟು 12,000 ಕೋಟಿ ರೂ ಮೊತ್ತದ ಹಣದ ಅಕ್ರಮ ನಡೆದಿರುವುದು ತಿಳಿದುಬಂದಿದೆ.

12,000 ಕೋಟಿ ರೂ ಮನಿ ಲಾಂಡರಿಂಗ್ ಆರೋಪ; ಜೇಪೀ ಇನ್​ಫ್ರಾಟೆಕ್​ನ ಮನೋಜ್ ಗೌರ್ ಬಂಧನ
ಮನೋಜ್ ಗೌರ್

Updated on: Nov 13, 2025 | 1:21 PM

ನವದೆಹಲಿ, ನವೆಂಬರ್ 13: ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣಗಳ ಸಂಬಂಧ ಜಾರಿ ನಿರ್ದೇಶನಾಲಯವು ಜೇಪೀ ಇನ್​ಫ್ರಾಟೆಕ್ ಲಿಮಿಟೆಡ್​ನ (Jaypee Infratech Ltd) ಎಂಡಿಯಾಗಿರುವ ಮನೋಜ್ ಗೌರ್ (Manoj Gaur) ಅವರನ್ನು ಬಂಧಿಸಿದೆ. ಜೆಐಎಲ್ ಸಂಸ್ಥೆಯು ಮನೆಗಳನ್ನು ಕೊಡುವುದಾಗಿ ನಂಬಿಸಿ ಗ್ರಾಹಕರಿಂದ ಹಣ ಪಡೆದು ವಂಚಿಸಿರುವುದು ತನಿಖೆಗಳಿಂದ ಗೊತ್ತಾಗಿದೆ. ಒಟ್ಟು 12,000 ಕೋಟಿ ರೂ ಮೊತ್ತದ ಪ್ರಕರಣ ಎದ್ದುಕಾಣುತ್ತಿದೆ. ಈ ಸಂಬಂಧ ಇಡಿ ಅಧಿಕಾರಿಗಳು (ED – Enforcement Directorate) ಗುರುವಾರ ಮನೋಜ್ ಗೌರ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.

ಜೇಪೀ ಇನ್​ಫ್ರಾಟೆಕ್ ವಿರುದ್ಧ ಇರುವ ಆರೋಪಗಳೇನು?

ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳನ್ನು ಕೈಗೊಂಡ ಆರಂಭಿಕ ಖಾಸಗಿ ಸಂಸ್ಥೆಗಳಲ್ಲಿ ಜೇಪೀ ಇನ್​ಫ್ರಾಟೆಕ್ ಒಂದು. ಜೇಪೀ ವಿಶ್​ಟೌನ್, ಜೇಪೀ ಗ್ರೀನ್ಸ್ ಮೊದಲಾದ ಬೃಹತ್ ಪ್ರಾಜೆಕ್ಟ್​ಗಳ ಮೂಲಕ ಸಾವಿರಾರು ಅಪಾರ್ಟ್ಮೆಂಟ್ ಮತ್ತು ಪ್ಲಾಟ್​​ಗಳನ್ನು ಮಾರಲಾಗಿತ್ತು. 2010-11ರಲ್ಲಿ ಹಲವು ಫ್ಲ್ಯಾಟ್​ಗಳು ಮಾರಾಟವಾದವು.

ಇದನ್ನೂ ಓದಿ: ಣ್ತಪ್ಪಿಯಾದ ತಪ್ಪು ಇಡೀ ಬ್ಯಾಂಕನ್ನೇ ದಿವಾಳಿಯಾಗಿಸುತ್ತಿತ್ತಾ? ಕರ್ಣಾಟಕ ಬ್ಯಾಂಕ್​ನ 1,00,000 ಕೋಟಿ ರೂ ಫ್ಯಾಟ್ ಫಿಂಗರ್ ಕಥೆ

ಆದರೆ, ಮನೆ ಖರೀದಿದಾರರಿಗೆ ಭರವಸೆ ಕೊಟ್ಟಂತೆ ಮನೆಗಳನ್ನು ನೀಡಲಿಲ್ಲ. ಪ್ರಾಜೆಕ್ಟ್​ಗಳು ವಿಳಂಬವಾದವು. ಹಣ ಕೊಟ್ಟ ಜನರು ಪ್ರತಿಭಟಿಸಿದರು. 2017ರಲ್ಲಿ ಜೇಪೀ ಇನ್​ಫ್ರಾಟೆಕ್ ವಿರುದ್ಧ ಹಲವು ಎಫ್​ಐಆರ್​ಗಳು ದಾಖಲಾದವು. ಹೌಸಿಂಗ್ ಪ್ರಾಜೆಕ್ಟ್​ಗಳಲ್ಲಿ ಹೂಡಿಕೆದಾರರು ತೊಡಗಿಸಿದ್ದ ಹಣವನ್ನು ದುರ್ಬಳಕೆ ಮಾಡಲಾಗಿದೆ, ಅಕ್ರಮವಾಗಿ ಬೇರೆಡೆ ವರ್ಗಾಯಿಸಲಾಗಿದೆ ಎಂಬಿತ್ಯಾದಿ ಆರೋಪಗಳು ಎಫ್​ಐಆರ್​ನಲ್ಲಿ ಬಂದವು.

ಒಟ್ಟು 12,000 ಕೋಟಿ ರೂ ಮೊತ್ತದ ಹಣವನ್ನು ಲಪಟಾಯಿಸಿರುವ ಆರೋಪ ಜೇಪೀ ಇನ್​ಫ್ರಾಟೆಕ್ ಮೇಲೆ ಇದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗೆ ವಿವಿಧ ಸ್ಥಳಗಳಲ್ಲಿ ರೇಡ್ ಮಾಡಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಎಐ ಸೃಷ್ಟಿತ ಕಂಟೆಂಟ್; ಸೋಷಿಯಲ್ ಮೀಡಿಯಾಗಳಿಗೆ ಜವಾಬ್ದಾರಿ; ಬರಲಿದೆ ಹೊಸ ಕಾನೂನು

ದೆಹಲಿ, ನೊಯ್ಡಾ, ಘಾಜಿಯಾಬಾದ್ ಮತ್ತು ಮುಂಬೈನಲ್ಲಿ ಇರುವ ಜೇಪೀ ಇನ್​ಫ್ರಾಟೆಕ್, ಜೈಪ್ರಕಾಶ್ ಅಸೋಸಿಯೇಟ್ಸ್ ಮತ್ತಿತರ ಕಂಪನಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ. ಜೇಪೀ ಜೊತೆ ಹಣಕಾಸು ವ್ಯವಹಾರ ಹೊಂದಿರುವ ಇತರ ರಿಯಲ್ ಎಸ್ಟೇಟ್ ಕಂಪನಿಗಳಾದ ಗೌರ್​ಸನ್ಸ್ ಇಂಡಿಯಾ, ಗುಲ್ಶನ್ ಹೋಮ್ಸ್, ಮಹಾಗುಣ್ ರಿಯಲ್ ಎಸ್ಟೇಟ್ ಪ್ರೈ ಲಿ ಸಂಸ್ಥೆಗಳ ಕಚೇರಿಯನ್ನೂ ಇಡಿ ಶೋಧ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ