ಹೀರಾನಂದಾನಿ ಗ್ರೂಪ್ನ ನಾಲ್ಕು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದಿಂದ ದಾಳಿ; ಫೆಮಾ ನಿಯಮ ಉಲ್ಲಂಘನೆ ಆರೋಪ; ದಾಖಲೆಗಳ ಪರಿಶೀಲನೆ
ED search on Hiranandani Group Premises: ಹೀರಾನಂದಾನಿ ಗ್ರೂಪ್ಗೆ ಸೇರಿದ ಮುಂಬೈ ಮತ್ತು ಪಾವೆಲ್ನ ನಾಲ್ಕು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಫಾರೆಕ್ಸ್ ನಿಯಮಗಳ ಉಲ್ಲಂಘನೆ ಆಗಿದೆ ಎನ್ನುವ ಹೊಸ ಮಾಹಿತಿ ಬಂದ ಹಿನ್ನೆಲೆಯಲ್ಲಿ ಇಡಿಯಿಂದ ಈ ಕ್ರಮ ಜರುಗಿದೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ದರ್ಶನ್ ಹೀರಾನಂದಾನಿ ಅವರ ತಂದೆ ನಿರಂಜನ್ ಹೀರಾನಂದಾನಿಗೆ ಸೇರಿದ್ದ ಸಂಸ್ಥೆ ಇದು.
ಮುಂಬೈ, ಫೆಬ್ರುವರಿ 22: ಮಹುವಾ ಮೊಯಿತ್ರಾ ವಿರುದ್ಧದ ಕ್ಯಾಷ್ ಫಾರ್ ಕ್ವೇರಿ (cash for query) ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ದರ್ಶನ್ ಹೀರಾನಂದಾನಿ (Darshan Hiranandani) ಅವರ ಸಂಸ್ಥೆಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಇಡಿ ರೇಡ್ ನಡೆದಿದೆ. ಫೆಮಾ ನಿಯಮಗಳ ಉಲ್ಲಂಘನೆ (FEMA rules violation) ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಂಬೈ ಮತ್ತು ಪಾನ್ವೆಲ್ನಲ್ಲಿರುವ ಹೀರಾನಂದಾನಿ ಗ್ರೂಪ್ನ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಇದು ನ್ಯೂಸ್18 ವಾಹಿನಿಯಲ್ಲಿ ವರದಿಯಾಗಿದೆ. ಹಾಗೆಯೇ, ಇದು ಮಹುವಾ ಮೊಯಿತ್ರಾ (Mahua Moitra) ವಿರುದ್ಧದ ಪ್ರಕರಣಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದೂ ಮೂಲಗಳು ತಿಳಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಅದರ ಪ್ರಕಾರ, ಫೋರೆಕ್ಸ್ ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎನ್ನುವ ಹೊಸ ಮಾಹಿತಿ ಇಡಿ ಇಲಾಖೆಗೆ ಸಿಕ್ಕಿತ್ತು. ಈ ಕಾರಣಕ್ಕೆ ದಾಳಿ ನಡೆದಿದೆ ಎನ್ನಲಾಗಿದೆ.
ಹೀರಾನಂದಾನಿ ಗ್ರೂಪ್ ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದು. ನಿರಂಜನ್ ಹೀರಾನಂದಾನಿ ಮತ್ತು ಸುರೇಂದ್ರ ಹೀರಾನಂದಾನಿ ಅವರು ಈ ಸಂಸ್ಥೆಯ ಸಹ-ಸಂಸ್ಥಾಪಕರು. ಹೀರಾನಂದಾನಿ ಗ್ರೂಪ್ 1978ರಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ಆರಂಭಿಸಿತು. ಮುಂಬೈ ಹಾಗೂ ಸುತ್ತಮುತ್ತ ಬಹಳಷ್ಟು ಕಡೆ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಕಟ್ಟಿದೆ. ಚೆನ್ನೈ, ಅಹ್ಮದಾಬಾದ್, ಪುಣೆ ಮೊದಲಾದ ನಗರಗಳಲ್ಲೂ ಅದರ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ಗಳು ನಡೆದಿವೆ.
ಇದನ್ನೂ ಓದಿ: ಬೈಜುಸ್ ಸಿಇಒಗೆ ಲುಕ್ ಔಟ್ ಸರ್ಕುಲಾರ್ ನೋಟೀಸ್ ಹೊರಡಿಸಲು ಇಡಿ ಯತ್ನ
ಮಹುವಾ ಮೊಯಿತ್ರಾಗೆ ಹಣ ಕೊಟ್ಟು ಸಂಸತ್ತಿನಲ್ಲಿ ಪ್ರಶ್ನೆ ಕೇಳಿಸಿದರೆಂದು ಆರೋಪಿಸಲಾಗಿರುವ ದರ್ಶನ್ ಹೀರಾನಂದಾನಿ ಅವರು ಈ ನಿರಂಜನ್ ಅವರ ಮಗ. ಇವರು ಯೋಟ್ಟಾ ಡಾಟಾ ಸರ್ವಿಸಸ್, ಎಚ್ ಎನರ್ಜಿ, ಟಾರ್ಕ್ ಸೆಮಿಕಂಡಕ್ಟರ್ಸ್, ತೇಜ್ ಪ್ಲಾಟ್ಫಾರ್ಮ್ಸ್ ಸಂಸ್ಥೆಗಳ ಛೇರ್ಮನ್ ಆಗಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆಯಾಗಿದ್ದ ಮಹುವಾ ಮೊಯಿತ್ರಾ ಸಂಸತ್ತಿನಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ಅದಾನಿ ಗ್ರೂಪ್ ಸಂಸ್ಥೆಗಳು ಭಾಗಿಯಾಗಿರುವ ಯೋಜನೆಗಳ ಬಗ್ಗೆ ಅನೇಕ ಪ್ರಶ್ನೆಗಳಿದ್ದಿದ್ದವು. ದರ್ಶನ್ ಹೀರಾನಂದಾನಿ ಅವರು ಟಿಎಂಸಿ ಸಂಸದೆಗೆ ಈ ಪ್ರಶ್ನೆಗಳನ್ನು ನೀಡಿದ್ದರೆಂದು ಹೇಳಲಾಗಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೇ ಈ ಸಂಬಂಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ದೂರು ಕೊಟ್ಟಿದ್ದರು. ದುಬಾರಿ ಉಡುಗೊರೆ ಮತ್ತು ಹಣ ಪಡೆದು ಮೊಯಿತ್ರಾ ಸಂಸತ್ನಲ್ಲಿ ಪ್ರಶ್ನೆ ಕೇಳಿದ್ದಾರೆ ಎಂದು ಆರೋಪ ಮಾಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ