
ನವದೆಹಲಿ, ಆಗಸ್ಟ್ 1: ಸಾಲ ವಂಚನೆ ಪ್ರಕರಣ ಸಂಬಂಧ ವಿವಿಧ ಆರೋಪಗಳನ್ನು ಎದುರಿಸುತ್ತಿರುವ ಉದ್ಯಮಿ ಅನಿಲ್ ಅಂಬಾನಿ (Anil Ambani) ಅವರಿಗೆ ಜಾರಿ ನಿರ್ದೇಶನಾಲಯವು ಶುಕ್ರವಾರ ಸಮನ್ಸ್ ನೀಡಿದೆ. ದೆಹಲಿಯಲ್ಲಿರುವ ಇಡಿ ಮುಖ್ಯ ಕಚೇರಿಗೆ ಆಗಸ್ಟ್ 5, ಗುರುವಾರ ಹಾಜರಾಗಬೇಕೆಂದು ಅಂಬಾನಿಗೆ ತಿಳಿಸಲಾಗಿದೆ. ಇಲ್ಲಿಯೇ ಈ ಪ್ರಕರಣ ದಾಖಲಾಗಿದ್ದು, ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಅಡಿ ಇಡಿ ಅಧಿಕಾರಿಗಳು ಅನಿಲ್ ಅಂಬಾನಿಯ ಹೇಳಿಕೆಯನ್ನು ದಾಖಲಿಸಲಿದ್ದಾರೆ.
ಇದೇ ವೇಳೆ, ಈ ಪ್ರಕರಣ ಸಂಬಂಧ ನಕಲಿ ಬ್ಯಾಂಕ್ ಗ್ಯಾರಂಟಿಯ ಜಾಲ ಭೇದಿಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭುವನೇಶ್ವರ್ ಮತ್ತು ಕೋಲ್ಕತಾದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಾಲ ವಂಚನೆ ಆರೋಪ; ಅನಿಲ್ ಅಂಬಾನಿಯ ಹಲವು ಕಂಪನಿಗಳ ಮೇಲೆ ಇಡಿ ರೇಡ್
2017ರಿಂದ 2019ರ ಅವಧಿಯಲ್ಲಿ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಗ್ರೂಪ್ಗೆ ಸೇರಿದ ವಿವಿಧ ಕಂಪನಿಗಳಿಗೆ ಯೆಸ್ ಬ್ಯಾಂಕ್ 3,000 ಕೋಟಿ ರೂ ಸಾಲ ಕೊಟ್ಟಿತ್ತು. ಈ ಸಾಲದ ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸದೆ ಅಕ್ರಮವಾಗಿ ಬೇರೆಡೆ ವರ್ಗಾವಣೆ ಮಾಡಲಾಗಿದೆ ಎನ್ನುವುದು ಸದ್ಯಕ್ಕೆ ಕೇಳಿ ಬಂದಿರುವ ಆರೋಪ. ವಿವಿಧ ಶೆಲ್ ಕಂಪನಿಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ.
ಯೆಸ್ ಬ್ಯಾಂಕ್ ಕೂಡ ಸಾಲ ಅನುಮೋದನೆ ಮಾಡಲು ಸರಿಯಾದ ನಿಯಮಾವಳಿಗಳನ್ನು ಗಾಳಿಗೆ ತೂರಿದೆ. ಹಣಕಾಸು ಪರಿಸ್ಥಿತಿ ಉತ್ತಮ ಇಲ್ಲದ ಕಂಪನಿಗಳಿಗೆ ಸಾಲ ಅನುಮೋದನೆ ಮಾಡಿದೆ. ಸಾಲ ನೀಡುವ ಮುನ್ನ ಕಂಪನಿಗಳನ್ನು ಸರಿಯಾಗಿ ವಿಚಾರಿಸುವ ಪ್ರಯತ್ನ ಆಗಿಲ್ಲದಿರುವುದು ಇತ್ಯಾದಿ ಹಲವು ನಿರ್ಲಕ್ಷ್ಯತೆ ಕಂಡು ಬಂದಿರುವುದನ್ನು ಇಡಿ ಪತ್ತೆ ಮಾಡಿದೆ.
ಇದನ್ನೂ ಓದಿ: ಫೀನಿಕ್ಸ್ ಮೋಡ್ನಲ್ಲಿದ್ದ ಅನಿಲ್ ಅಂಬಾನಿಗೆ ಕಂಟಕ? ಎಸ್ಬಿಐನಿಂದ ಸಾಲ ವಂಚನೆ ಆರೋಪ
ಯೆಸ್ ಬ್ಯಾಂಕ್ ಮಾತ್ರವಲ್ಲ ಇನ್ನೂ ಹಲವು ಬ್ಯಾಂಕುಗಳು ಅನಿಲ್ ಅಂಬಾನಿ ಅವರ ವಿವಿಧ ಕಂಪನಿಗಳಿಗೆ ಸಾಲ ಕೊಟ್ಟಿವೆ. ಕಳೆದ ಒಂದು ವರ್ಷದಿಂದ ತನಿಖಾ ಸಂಸ್ಥೆಗಳು ಅಂಬಾನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ರೇಡ್ ಮಾಡುತ್ತಲೇ ಇವೆ. ಕೆಲ ಮಹತ್ವದ ಸಾಕ್ಷ್ಯಾಧಾರಗಳು ಅಥವಾ ಸುಳಿವು ಸಿಕ್ಕಿರಬಹುದು. ವರದಿಗಳ ಪ್ರಕಾರ, ಅನಿಲ್ ಅಂಬಾನಿ ಅವರು 20,000-30,000 ರೂನಷ್ಟು ಹಣವನ್ನು ವಿದೇಶಗಳಿಗೆ ರವಾನಿಸಿರಬಹುದು ಎಂಬುದು ಇಡಿ ಗಮನಕ್ಕೆ ಬಂದಿದೆ ಎಂದು ಹೆಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ