TCS layoffs: ಟಿಸಿಎಸ್ನಿಂದ 12 ಸಾವಿರ ಲೇಆಫ್, ವರದಿ ಕೇಳಿದ ಕರ್ನಾಟಕ ಸರ್ಕಾರ
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸುಮಾರು 12 ಸಾವಿರ ಉದ್ಯೋಗಿಗಳ ಲೇಆಫ್ ಮಾಡಲಿದೆ ಎಂಬ ವಿಚಾರವಾಗಿ ಕರ್ನಾಟಕ ಕಾರ್ಮಿಕ ಇಲಾಖೆ ವಿವರ ಕೋರಿದೆ. ಕಂಪನಿಯ ಆಡಳಿತಕ್ಕೆ ನೋಟಿಸ್ ನೀಡಲಾಗಿದ್ದು, ಕಾರಣ ನೀಡುವಂತೆ ಮತ್ತು ಸಮಾಲೋಚನೆಗೆ ಬರುವಂತೆ ಸೂಚಿಸಲಾಗಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಆಗಸ್ಟ್ 1: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ದೊಡ್ಡ ಪ್ರಮಾಣದಲ್ಲಿ ಲೇಆಫ್ (layoffs) (ಉದ್ಯೋಗ ಕಡಿತ) ಮಾಡುತ್ತಿರುವ ವರದಿಗಳ ಬಗ್ಗೆ ಕರ್ನಾಟಕ ಕಾರ್ಮಿಕ ಇಲಾಖೆ ವಿವರ ಕೋರಿದೆ. ಟಿಸಿಎಸ್ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬ ಮಾಹಿತಿ ದೊರೆತಿದೆ. ಈ ಕುರಿತು ಕಂಪನಿಯಿಂದ ವಿವರ ಕೋರಲಾಗಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಲೇಆಫ್ಗೆ ಕಾರಣವನ್ನು ತಿಳಿಯಲು ಮತ್ತು ಆ ಬಗ್ಗೆ ಸಮಾಲೋಚನೆ ನಡೆಸಲು ಬರುವಂತೆ ನಮ್ಮ ಇಲಾಖೆಯು ಟಿಸಿಎಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ತಿಳಿಸಿದರು.
ಸನ್ರೈಸ್ ಇಂಡಸ್ಟ್ರೀಸ್ಗೆ ಕೆಲವೊಂದು ಷರತ್ತುಗಳೊಂದಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಲಾಗಿದೆ . ಕಳೆದ ಐದು ವರ್ಷಗಳಿಂದ ನಾವು ಸನ್ರೈಸ್ ಇಂಡಸ್ಟ್ರೀಸ್ಗೆ ವಿನಾಯಿತಿ ನೀಡುತ್ತಾ ಬಂದಿದ್ದೇವೆ. ಪ್ರತಿ ವರ್ಷ ಈ ವಿನಾಯಿತಿಯನ್ನು ವಿಸ್ತರಣೆ ಮಾಡುತ್ತಾ ಬರಲಾಗಿದೆ ಎಂದು ಲಾಡ್ ಹೇಳಿದರು.
ಅವರು ಯಾರನ್ನಾದರೂ ಕೆಲಸದಿಂದ ತೆಗೆದುಹಾಕಲು ಬಯಸಿದರೆ, ಅವರು ನಮಗೆ ಮಾಹಿತಿ ನೀಡಬೇಕು. ಆ ಬಗ್ಗೆ ನಾವು ಅವರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ಟಿಸಿಎಸ್ ಈ ವರ್ಷ ಜಾಗತಿಕವಾಗಿ ಶೇ 2 ರಷ್ಟು, ಅಂದರೆ ಸುಮಾರು 12,261 ಉದ್ಯೋಗಿಗಳನ್ನು ಲೇಆಫ್ ಮಾಡಲು ಯೋಜಿಸಿರುವುದಾಗಿ ವರದಿಯಾಗಿದೆ. ಇದು ಮಿಡ್ ಕೆರಿಯರ್ ಲೆವೆಲ್ ಮತ್ತು ಸೀನಿಯರ್ ಸಿಬ್ಬಂದಿಯ ಮೇಲೆ ಪರಿಣಾಮ ಬೀರಲಿದೆ. 2025 ರ ಜೂನ್ 30 ರ ಹೊತ್ತಿಗೆ, ಟಿಸಿಎಸ್ ಒಟ್ಟು 6,13,069 ಉದ್ಯೋಗಿಗಳನ್ನು ಹೊಂದಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 5,000 ಹೊಸ ಉದ್ಯೋಗಿಗಳನ್ನು ಸೇರಿಸಿಕೊಂಡಿದೆ.
ಇದನ್ನೂ ಓದಿ: Google Layoffs: ಗೂಗಲ್ನ ಆಂಡ್ರಾಯ್ಡ್, ಪಿಕ್ಸೆಲ್, ಕ್ರೋಮ್ ಟೀಮ್ಗಳಿಂದ ನೂರಾರು ಉದ್ಯೋಗಿಗಳ ಲೇಆಫ್
ಭವಿಷ್ಯದ ಯೋಜನೆಗಳಿಗೆ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಲೇಆಫ್ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿತ್ತು. ಎಐ ಅನುಷ್ಠಾನ, ತಂತ್ರಜ್ಞಾನ ಕ್ಷೇತ್ರದಲ್ಲಿನ ಹೂಡಿಕೆಗಳು, ಮಾರುಕಟ್ಟೆ ವಿಸ್ತರಣೆ ಮತ್ತು ಸಾಂಸ್ಥಿಕ ಪುನರ್ ರಚನೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಕಂಪನಿ ಹೇಳಿತ್ತು.








