ಇದು ‘ಪ್ರೀತಿಯ ಪಾರಿವಾಳ ಹಾರಿ ಬಂದ’ ಕಥೆ: ದೆಹಲಿಯಿಂದ ಮಂಡ್ಯಕ್ಕೆ ಮಾಲೀಕನ ಹುಡುಕಿ ಬಂದ ಪುಟ್ಟ ಮರಿ!
ಒಂದು ವರ್ಷ ವಯಸ್ಸಿನ ಪುಟ್ಟ ಪಾರಿವಾಳ ದೆಹಲಿಯಿಂದ ಮಂಡ್ಯಕ್ಕೆ 1790 ಕಿಮೀ ದೂರವನ್ನು 52 ದಿನಗಳಲ್ಲಿ ಕ್ರಮಿಸಿ ತನ್ನ ಮಾಲೀಕರನ್ನು ಹುಡುಕಿಕೊಂಡು ಬರುವ ಮೂಲಕ ದಾಖಲೆ ನಿರ್ಮಿಸಿದೆ. ‘ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್’ ಆಯೋಜಿಸಿದ್ದ ರೇಸ್‌ನಲ್ಲಿ ಭಾಗವಹಿಸಿದ್ದ ಅಭಿಮನ್ಯು ಮಾಲೀಕನನ್ನು ಹುಡುಕಿಕೊಂಡು ಬಂದು ದಾಖಲೆ ನಿರ್ಮಿಸಿದೆ. ‘ಪ್ರೀತಿಯ ಪಾರಿವಾಳ ಹಾರಿಬಂದ’ ಕುರಿತ ವಿವರ ತಿಳಿಯಲು ಮುಂದೆ ಓದಿ.

ಮಂಡ್ಯ, ಆಗಸ್ಟ್ 01: ಸಾಕಷ್ಟು ಜನರು ಪಾರಿವಾಳವನ್ನು (pigeon) ಸಾಕುತ್ತಾರೆ. ಅದರಲ್ಲಿ ಕೆಲವರು ರೇಸ್ಗಾಗಿ ಪಾರಿವಾಳವನ್ನು ಸಾಕುವವರಿದ್ದಾರೆ. ಹಲವೆಡೆ ಈ ಪಾರಿವಾಳ ರೇಸ್ ದೊಡ್ಡ ಕ್ರೇಜ್ ಆಗಿದೆ. ರೇಸ್ಗಾಗಿಯೇ ಕೋಟ್ಯಂತರ ರೂ. ಖರ್ಚು ಮಾಡಿ ಪಾರಿವಾಳವನ್ನು ಖರೀದಿಸುವವರಿದ್ದಾರೆ. ಇದೀಗ ಇಂತಹದ್ದೇ ಒಂದು ರೇಸ್‌ನಲ್ಲಿ ಪಾಲ್ಗೊಂಡಿದ್ದ ಪಾರಿವಾಳ 52 ದಿನ, 1790 ಕಿ.ಮೀ ಕ್ರಮಿಸಿ ತನ್ನ ಮಾಲೀಕನನ್ನ ಹುಡುಕಿಕೊಂಡು ಬಂದು ದಾಖಲೆ ಬರೆದಿದೆ. ಇಂತಹ ಅಚ್ಚರಿ ಘಟನೆಗೆ ಮಂಡ್ಯ (Mandya) ಸಾಕ್ಷಿ ಆಗಿದೆ.
ದೆಹಲಿಯಿಂದ ಮಂಡ್ಯಕ್ಕೆ ಬಂದ ಪಾರಿವಾಳ
ಮಾಲೀಕನನ್ನ ಹುಡುಕಿಕೊಂಡು ದೆಹಲಿಯಿಂದ ಮಂಡ್ಯಕ್ಕೆ ಬರುವ ಮೂಲಕ ಒಂದು ವರ್ಷ ವಯಸ್ಸಿನ ಅಭಿಮನ್ಯು ಹೆಸರಿನ ಪಾರಿವಾಳ ವಿಶೇಷ ದಾಖಲೆ ನಿರ್ಮಿಸಿದೆ. 52 ದಿನದಲ್ಲಿ 1790 ಕಿ.ಮೀ ಕ್ರಮಿಸಿದ ಅತಿ ಚಿಕ್ಕ ವಯಸ್ಸಿನ ಅಭಿಮನ್ಯು ಸಾಧನೆ ಮಾಡಿದೆ.
ಇದನ್ನೂ ಓದಿ: Mysuru Dasara: ಮೈಸೂರು ದಸರಾ ಜಂಬೂ ಸವಾರಿಗೆ 9 ಆನೆಗಳ ಆಯ್ಕೆ ಅಂತಿಮ: ಇಲ್ಲಿದೆ ಪಟ್ಟಿ
ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್ನಿಂದ ಡೆಲ್ಲಿ ರೇಸ್ ಆಯೋಜಿಸಲಾಗಿತ್ತು. ಈ ರೇಸ್‌ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸೇರಿ ಒಟ್ಟು 22 ಪಾರಿವಾಳಗಳು ಭಾಗವಹಿಸಿದ್ದವು. ಎಲ್ಲ ಪಾರಿವಾಳಕ್ಕೂ ರೇಸ್ಗೂ ಮುನ್ನವೇ ರಿಂಗ್ ಅಳವಡಿಕೆ ಮಾಡಲಾಗಿತ್ತು. ಏಪ್ರಿಲ್ 5 ರಂದು ದೆಹಲಿಯಿಂದ ಪಾರಿವಾಳಗಳನ್ನ ಹಾರಿಬಿಡಲಾಗಿತ್ತು.
ಆ ಡೆಲ್ಲಿ ರೇಸ್‌ನಲ್ಲಿ ಭಾಗವಹಿಸಿದ್ದ ಮಂಡ್ಯದ ವಿ.ಸಿ.ಫಾರಂನ ಶ್ರೀಧರ್ ಎಂಬುವವರಿಗೆ ಸೇರಿದ ಒಂದು ವರ್ಷದ ಅಭಿಮನ್ಯು ಹೆಸರಿನ ಪಾರಿವಾಳ, ದೆಹಲಿಯಿಂದ ಮೇ 28ಕ್ಕೆ ಮಂಡ್ಯಕ್ಕೆ ವಾಪಸ್ಸಾಗಿದೆ. ಆ ಮೂಲಕ ಬರೋಬ್ಬರಿ 1790 ಕಿ.ಮೀ ದಾಟಿ ತನ್ನ ಮಾಲೀಕನ ಹುಡುಕಿಕೊಂಡು ಬಂದಿದೆ.
ಇದನ್ನೂ ಓದಿ: ರಸ್ತೆ ಪಕ್ಕದ ಕಟ್ಟೆ ಮೇಲೆ ಕುಳಿತು ಘರ್ಜಿಸಿದ ಹುಲಿ: ಅಪರೂಪದ ದೃಶ್ಯ ಇಲ್ಲಿದೆ
22 ಪಾರಿವಾಳಗಳ ಪೈಕಿ 14 ಪಾರಿವಾಳಗಳು ತಮ್ಮ ನೆಲೆಗಳಿಗೆ ವಾಪಸ್ಸಾಗಿವೆ. ಅದರಲ್ಲಿ ಅತಿ ಚಿಕ್ಕ ವಯಸ್ಸಿನ ಪಾರಿವಾಳವಾಗಿರುವ ಮಂಡ್ಯದ ಅಭಿಮನ್ಯು, ತನ್ನ ಮಾಲೀಕನನ್ನ ಹುಡುಕಿಕೊಂಡು ಬರುವ ಮೂಲಕ ಹೊಸ ಸಾಧನೆ ಮಾಡಿದೆ. ಆ ಮೂಲಕ ಮೊದಲ ರೇಸ್ನಲ್ಲೇ ಯಶಸ್ಸು ಕಂಡ ಅತಿ ಚಿಕ್ಕ ಪಾರಿವಾಳವೆಂಬ ದಾಖಲೆ ಬರೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







