Edible oil: ಖಾದ್ಯ ತೈಲ ಗರಿಷ್ಠ ಮಾರಾಟ ಬೆಲೆ 30ರಿಂದ 40 ರೂಪಾಯಿ ಕಡಿತ
ಖಾದ್ಯ ತೈಲದ ಬೆಲೆಯಲ್ಲಿ ರೂ. 30ರಿಂದ 40 ಇಳಿಕೆ ಆಗಿದೆ. ಆ ಮೂಲಕ ಜನ ಸಾಮಾನ್ಯರಿಗೆ ನಿರಾಳ ಆಗುವಂಥ ಸನ್ನಿವೇಶ ಸೃಷ್ಟಿ ಆಗಿದೆ. ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.
ಪ್ರಮುಖ ಖಾದ್ಯ ತೈಲ ಕಂಪೆನಿಗಳು ಉತ್ಪನ್ನಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (ಎಂಆರ್‌ಪಿ) ರೂ. 30ರಿಂದ ರೂ. 40ರಷ್ಟು ಕಡಿತಗೊಳಿಸಿವೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ. “ಎಲ್ಲ ದೊಡ್ಡ ಬ್ರ್ಯಾಂಡ್‌ಗಳು ಖಾದ್ಯ ತೈಲಗಳ ಬೆಲೆಯಲ್ಲಿ ಭಾರಿ ಕಡಿತಗೊಳಿಸಿವೆ. ಎಂಆರ್‌ಪಿಯಲ್ಲಿ ರೂ. 30 ರಿಂದ ರೂ. 40 ಕಡಿತಗೊಳಿಸಲಾಗಿದೆ ಹಾಗೂ ಹೊಸ ಎಂಆರ್‌ಪಿಯೊಂದಿಗೆ ಷೇರು ಮಾರುಕಟ್ಟೆಯಲ್ಲಿ ನೀಡಲಾಗಿದೆ. ಈಗ ಪೂರೈಕೆಯು ಹೊಸ ಎಂಆರ್‌ಪಿಯೊಂದಿಗೆ ಲಭ್ಯವಿದೆ. ಇದು ಗ್ರಾಹಕರಿಗೆ ನಿರಾಳವನ್ನು ನೀಡುತ್ತದೆ,” ಎಂದು ಸುಧಾಂಶು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. “ಗ್ರಾಹಕರಿಗೆ ತಕ್ಷಣದ ಪ್ರಯೋಜನಗಳನ್ನು ಒದಗಿಸುವುದು ಉದ್ದೇಶವಾಗಿದೆ. ಹೊಸ ಎಂಆರ್‌ಪಿ ಜಾರಿಗೆ ತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆಗಳನ್ನು ನೀಡಲಾಗಿದೆ,” ಎಂದು ಅವರು ಹೇಳಿದ್ದಾರೆ.
2021ರಲ್ಲಿ ಇಲಾಖೆಯ ಸಾಧನೆಗಳ ಬಗ್ಗೆ ತಿಳಿಸಿರುವ ಪಾಂಡೆ, “ಈ ವರ್ಷ ನಾವು ಒನ್ ನೇಷನ್ ಒನ್ ರೇಷನ್ ಕಾರ್ಡ್‌ನಲ್ಲಿ ಪೋರ್ಟೆಬಿಲಿಟಿ ವಹಿವಾಟಿನಲ್ಲಿ 50 ಕೋಟಿ ಗಡಿ ದಾಟಿದ್ದೇವೆ. ಕೊವಿಡ್-19 ಅವಧಿಯಲ್ಲಿ ನಾವು ಸುಮಾರು 43 ಕೋಟಿ ವಹಿವಾಟುಗಳನ್ನು ದಾಟಿದ್ದೇವೆ. ಇದು ಒಂದು ದೊಡ್ಡ ಸಾಧನೆಯಾಗಿದೆ,” ಎಂದಿದ್ದಾರೆ. “ಅಸ್ಸಾಂನಲ್ಲಿಯೂ 34 ಸಾವಿರ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಸಾಧನಗಳಲ್ಲಿ (e-pos) 13 ಸಾವಿರ e-posಗಳನ್ನು ಅಳವಡಿಸಲಾಗಿದೆ. ಮುಂಬರುವ ಎರಡು ತಿಂಗಳಲ್ಲಿ ಅಸ್ಸಾಂ ಮತ್ತು ಛತ್ತೀಸ್‌ಗಢ ಎರಡೂ ರಾಜ್ಯಗಳನ್ನು ಒಂದಕ್ಕೆ ಸೇರಿಸಲಾಗುವುದು ಎಂದು ನಾವು ಭಾವಿಸುತ್ತೇವೆ. ಈ ಆರ್ಥಿಕ ವರ್ಷದಲ್ಲಿ ಒಂದು ದೇಶ- ಒಂದು ಪಡಿತರ ಚೀಟಿ ಯೋಜನೆಯಲ್ಲಿ ಇಡೀ ದೇಶವು ಸೇರುತ್ತದೆ,” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಉಲ್ಲೇಖಿಸುವಾಗ, “ಕೊರೊನಾ ಸಮಯದಲ್ಲಿ ಉನ್ನತ ಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. PMGKAY ಅನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಧಾನಿ ಮಾಡಿದ ಘೋಷಣೆಯು ದೀರ್ಘ ಕಾಲದ ಪರಿಣಾಮಗಳನ್ನು ಹೊಂದಿದೆ. ಜನರು ಎನ್‌ಎಫ್‌ಎಸ್‌ಎಯಿಂದ ಪಡೆಯುವ ಪಡಿತರ ಜೊತೆಗೆ ಹೆಚ್ಚುವರಿ ಪಡಿತರವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಇದರಿಂದಾಗಿ, ದೇಶದ ಯಾವುದೇ ಭಾಗದಲ್ಲಿ ಕೊರತೆಯಾಗುವುದಿಲ್ಲ,” ಎಂದಿದ್ದಾರೆ.
ಪಾಂಡೆ ಅವರು ಮತ್ತಷ್ಟು ಮುಂದುವರಿದು, “ಎಥೆನಾಲ್ ಮಿಶ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯು ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ ಮತ್ತು ಅದರ ಸಕಾರಾತ್ಮಕ ಫಲಿತಾಂಶಗಳು ಹೊರಬರುತ್ತಿವೆ. ನಾವು ಈ ವರ್ಷ ಎಥೆನಾಲ್ ಮಿಶ್ರಣದಲ್ಲಿ ಶೇ 62ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದೇವೆ. ಇದು ಇದುವರೆಗಿನ ಅತ್ಯಧಿಕವಾಗಿದೆ,” ಎಂದು ಹೇಳಿದ್ದಾರೆ. ಇದೀಗ ನಾವು ಶೇಕಡಾ 5ರಿಂದ ಶೇಕಡಾ 8ಕ್ಕೆ ತಲುಪಿದ್ದೇವೆ. ಈ ವರ್ಷ ನಾವು ಶೇಕಡಾ 10ರಷ್ಟು ಸಾಧಿಸುವ ಗುರಿ ಹೊಂದಿದ್ದೇವೆ. ಇದು ರೈತರು, ಪರಿಸರದ ಮೇಲೆ ಪ್ರಭಾವ ಬೀರುತ್ತದೆ ಮತ್ತು ವಿದೇಶಿ ವಿನಿಮಯವನ್ನು ಉಳಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Edible Oil: ಖಾದ್ಯ ತೈಲ ಬೆಲೆ ತಗ್ಗಿಸಲು ಅವುಗಳ ದಾಸ್ತಾನು ಮಿತಿ ಮೇಲೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ