iPhone factory shutdown: ಐಫೋನ್ ತಯಾರಿಸುವ ಫಾಕ್ಸ್​ಕಾನ್ ಕಾರ್ಖಾನೆ ಮಹಿಳಾ ಸಿಬ್ಬಂದಿ ಪ್ರತಿಭಟನೆಗೆ ಕಾರಣಗಳೇನು?

ತಮಿಳುನಾಡಿನಲ್ಲಿನ ಆಪಲ್​ ಪೂರೈಕೆದಾರ ಫಾ​ಕ್ಸ್​ಕಾನ್ ಕಾರ್ಖಾನೆಯಲ್ಲಿನ ಉತ್ಪಾದನೆಯನ್ನು ನಿಲ್ಲಿಸುವುದಕ್ಕೆ ಕಾರಣವಾದ ಅಂಶಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

iPhone factory shutdown: ಐಫೋನ್ ತಯಾರಿಸುವ ಫಾಕ್ಸ್​ಕಾನ್ ಕಾರ್ಖಾನೆ ಮಹಿಳಾ ಸಿಬ್ಬಂದಿ ಪ್ರತಿಭಟನೆಗೆ ಕಾರಣಗಳೇನು?
ಆಪಲ್ ಐಫೋನ್ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Srinivas Mata

Updated on:Dec 31, 2021 | 12:56 PM

ಆಪಲ್, ಶಿಯೋಮಿಗೆ ಪ್ರಮುಖ ಪೂರೈಕೆದಾರ ಫಾಕ್ಸ್​ಕಾನ್. ಚೆನ್ನೈ ಬಳಿ ಇರುವ ಅದರ ಘಟಕದಲ್ಲಿ ಮಹಿಳಾ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿನ ನೌಕರರಿಗೆ ಒದಗಿಸಿರುವ ಸೌಕರ್ಯಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಕ್ಕಿರಿದ ಡಾರ್ಮಿಟರಿಗಳು, ನೀರಿಲ್ಲದ ಶೌಚಾಲಯಗಳು, ಸೇವಿಸಲು ಸಾಧ್ಯವಿಲ್ಲದಂಥ ಹುಳುಗಳಿಂದ ತುಂಬಿದ ಆಹಾರ ಹೀಗೆ ಆಕ್ಷೇಪಕ್ಕೆ ನಾನಾ ಕಾರಣಗಳು ಇದ್ದು, ಪ್ರತಿಭಟನೆ ನಡೆಯುತ್ತಿದೆ. ಡಿಸೆಂಬರ್ 17ರಂದು ಆರಂಭವಾದ ಈ ಪ್ರತಿಭಟನೆಯಿಂದ ಘಟಕವನ್ನೇ ಮುಚ್ಚಬೇಕಾಯಿತು. ಆ ನಂತರ ಕಾರ್ಖಾನೆಯಲ್ಲಿನ ಅವ್ಯವಸ್ಥೆಗಾಗಿ ಮತ್ತು ಗುಣಮಟ್ಟದ ಕೊರತೆಯ ಬಗ್ಗೆ ಫಾಕ್ಸ್​ಕಾನ್ ಕ್ಷಮೆ ಕೇಳಿದೆ. ಆಡಳಿತ ಮಂಡಳಿಯಲ್ಲಿ ಬದಲಾವಣೆ ತರುವುದಾಗಿ ಹಾಗೂ ಘಟಕದಲ್ಲಿನ ಆರೋಗ್ಯ ಸೇವೆಗಳನ್ನು ಸುಧಾರಿಸುವುದಾಗಿ ಹೇಳಿದೆ. ಪ್ರತಿಭಟನೆ ಮಾಡಲು ಕಾರಣವಾದ ಅಂಶಗಳ ಬಗ್ಗೆ ಮಾಧ್ಯಮಗಳ ಜತೆಗೆ ಸಿಬ್ಬಂದಿ ಮಾತನಾಡಿದ್ದಾರೆ. ಈ ಬೆಳವಣಿಗೆ ಬಗ್ಗೆ ತಿಳಿದಿರುವ ಮಾಹಿತಿ ಇಲ್ಲಿದೆ.

– ಕಿಕ್ಕಿರಿದ ಕೋಣೆಯಲ್ಲಿ ನೆಲದ ಮೇಲೆ ಮಲಗುವ ಪರಿಸ್ಥಿತಿ ಇದೆ. ಒಂದು ಕೋಣೆಯಲ್ಲಿ ಆರರಿಂದ 30 ಮಹಿಳೆಯರು ಇರಬೇಕು. ಇನ್ನು ಕೆಲವು ಕೋಣೆಗೆ ಹೊಂದಿಕೊಂಡಂತೆ ಇರುವ ಶೌಚಾಲಯದಲ್ಲಿ ನೀರಿಲ್ಲ. ಆಹಾರ ಕೂಡ ಸ್ವಚ್ಛವಾಗಿಲ್ಲ ಎಂದು ಮಹಿಳಾ ಸಿಬ್ಬಂದಿ ದೂರು ನೀಡಿದ್ದು, ಆ ನಂತರ ಆಹಾರ ಭದ್ರತೆ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಡುಗೆಕೋಣೆಯಲ್ಲಿ ಇಲಿಗಳು ಕಂಡುಬಂದಿದ್ದು ಹಾಗೂ ಕೆಟ್ಟ ಚರಂಡಿ ವ್ಯವಸ್ಥೆ ಇರುವುದಾಗಿ ವರದಿ ಆಗಿದೆ. ಆ ಪರಿಶೀಲನೆ ನಂತರ ಅಡುಗೆ ಕೋಣೆಯನ್ನು ಮುಚ್ಚಲಾಗಿದೆ.

– ವಾಸ್ತವ್ಯದ ಸ್ಥಳದಲ್ಲಿ ಬಹಳ ಕೆಟ್ಟ ಸ್ಥಿತಿ, ಕಾರ್ಖಾನೆಯಲ್ಲಿ ಕಾಯಿಲೆ ಸಾಮಾನ್ಯ. ಹಾಸ್ಟೆಲ್​ನಲ್ಲಿ ವಾಸ ಇರುವವರಿಗೆ ಒಂದಲ್ಲ ಒಂದು ಕಾಯಿಲೆ. ಇನ್ನು ಅನಾರೋಗ್ಯ ಸಮಸ್ಯೆಗಳು ಏನೇನು ಅಂತ ನೋಡುವುದಾದರೆ, ಚರ್ಮದ ಅಲರ್ಜಿ, ಎದೆ ನೋವು ಹಾಗೂ ವಿಷಾಹಾರದಂಥದ್ದು ಆಗಿವೆ. 250 ಮಹಿಳಾ ಸಿಬ್ಬಂದಿಗೆ ವಿಷಾಹಾರ ಆಗಿ, ಅದೇ ಕಾರಣಕ್ಕೆ ಪ್ರತಿಭಟನೆ ನಡೆದಿದೆ. ಅದಕ್ಕೂ ಮುನ್ನ ಅನಾರೋಗ್ಯ ಸಮಸ್ಯೆ ಒಂದೆರಡು ಪ್ರಕರಣಗಳಿಗೆ ಸೀಮಿತ ಆಗಿತ್ತು. ಪರಿಸ್ಥಿತಿ ಸುಧಾರಿಸಬಹುದು ಎಂಬ ನಿಟ್ಟಿನಲ್ಲಿ ಕಾದಿದ್ದೇ ಬಂತು. ಫಾಕ್ಸ್​ಕಾನ್ ನೇಮಿಸಿದ ಕಾರ್ಮಿಕ ದಲ್ಲಾಳಿಗಳು ಈ ವಾಸ್ತವ್ಯದ ಸ್ಥಳವನ್ನು ಒದಗಿಸಿದ್ದಾರೆ, ಈ ಮಹಿಳೆಯರ ಪೈಕಿ ಬಹುತೇಕರು 18ರಿಂದ 22 ವರ್ಷದವರು.

– ತಿರುವಳ್ಳೂರ್ ಜಿಲ್ಲಾಡಳಿತದ ವರದಿಯಂತೆ, ಡಿಸೆಂಬರ್ 15ನೇ ತಾರೀಕು ಫಾಕ್ಸ್​ಕಾನ್ ಸಿಬ್ಬಂದಿಯಲ್ಲಿ ಸಾಮೂಹಿಕ ವಿಷಾಹಾರ ಘಟನೆ ವರದಿ ಆಗಿದೆ. ಜಿಲ್ಲಾಡಳಿತದ ಪ್ರಕಾರ, ಒಂದು ಡಾರ್ಮಿಟರಿಯಲ್ಲಿ ಒಟ್ಟು 159 ಮಹಿಳೆಯರು ವಿಷಾಹಾರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 100 ಮಹಿಳೆಯರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಅವರನ್ನು ಆಸ್ಪತ್ರೆಗೇನೂ ದಾಖಲಿಸಿಲ್ಲ. ಈ ಘಟನೆಯಲ್ಲಿ ಕೆಲ ಮಹಿಳೆಯರು ಸಾವನ್ನಪ್ಪಿದ್ದಾರೆ ಅಂತಲೂ ವದಂತಿ ಹಬ್ಬಿತ್ತು. ಕೆಲವು ಸಿಬ್ಬಂದಿಗೆ ಎರಡು ದಿನಗಳ ಕಾಲ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆದರೆ ಹಲವರು ಪ್ರತಿಭಟನೆಗೆ ಮುಂದಾದರು.

– ವಿವಿಧ ಫಾಕ್ಸ್‌ಕಾನ್ ಹಾಸ್ಟೆಲ್‌ಗಳ ಸುಮಾರು 2,000 ಮಹಿಳೆಯರು ಬೀದಿಗಿಳಿದ ಕಾರಣ ಡಿಸೆಂಬರ್ 17ರಂದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಚೆನ್ನೈನ ಶ್ರೀಪೆರಂಬದೂರಿನ ಕಾರ್ಖಾನೆಯ ಬಳಿ ಪ್ರಮುಖ ಹೆದ್ದಾರಿಯನ್ನು ತಡೆದರು. ಹೆದ್ದಾರಿಯು ಸ್ಯಾಮ್ಸಂಗ್ ಮತ್ತು ಡೈಮ್ಲರ್ ಉತ್ಪನ್ನಗಳನ್ನು ತಯಾರಿಸುವ ಇತರ ಕಾರ್ಖಾನೆಗಳೊಂದಿಗೆ ಕಾರ್ಯನಿರತ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಮರುದಿನ, ಪ್ರತಿಭಟನೆಯಲ್ಲಿ ಹತ್ತಿರದ ಆಟೋ ಕಾರ್ಖಾನೆಯ ಪುರುಷ ಕಾರ್ಮಿಕರೂ ಸೇರಿಕೊಂಡರು. ಪುರುಷ ಕಾರ್ಮಿಕರನ್ನು ಹೊಡೆದಿದ್ದಕ್ಕಾಗಿ ಮತ್ತು ಕೆಲವು ಮಹಿಳಾ ಪ್ರತಿಭಟನಾಕಾರರನ್ನು ಹಿಂಬಾಲಿಸಿ ಹೊಡೆದಿದ್ದಕ್ಕಾಗಿ ಪೊಲೀಸರ ದಬ್ಬಾಳಿಕೆ ಎಂದು ದೊಡ್ಡ ಪ್ರತಿಭಟನೆಯನ್ನು ಮಾಡಲಾಯಿತು. ಸ್ಥಳೀಯ ಪೊಲೀಸರು ಅಂತಹ ಯಾವುದೇ ಕ್ರಮವನ್ನು ನಿರಾಕರಿಸಿದರು. ಪ್ರತಿಭಟನೆಯಿಂದ ಒಟ್ಟು 67 ಮಹಿಳಾ ಕಾರ್ಮಿಕರು ಹಾಗೂ ಸ್ಥಳೀಯ ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

– ಈ ವಿಚಾರದಲ್ಲಿ ಇನ್ನೂ ಕೆಲವು ತನಿಖೆಗಳು ನಡೆಯುತ್ತಿವೆ. ಈ ಕೇಂದ್ರದಲ್ಲಿ ಮೂಲಭೂತ ನೈರ್ಮಲ್ಯದ ಕೊರತೆ ಇದೆ ಎಂಬುದು ಸ್ಪಷ್ಟವಾಗಿದೆ. ದಿನ ಕಳೆಯಲು ಅಗತ್ಯ ಇರುವ ಸರ್ಕಾರದ ಶಿಫಾರಸುಗಳನ್ನು ಅಥವಾ ಕಾನೂನು ಅವಶ್ಯಕತೆಗಳನ್ನು ಪೂರೈಸಿಲ್ಲ. ಫಾಕ್ಸ್‌ಕಾನ್ ಈಗ ಘಟಕದ ನಿರ್ವಹಣೆಯನ್ನು ಪುನರ್​ಚಿಸಲು ಮತ್ತು ಸೌಲಭ್ಯಗಳನ್ನು ಸುಧಾರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು ಭರವಸೆ ಮಾಡಿದೆ. ಅಲ್ಲಿಯವರೆಗೆ, ಕಾರ್ಖಾನೆಯನ್ನು ಮುಚ್ಚಿದ್ದರೂ ಕಂಪೆನಿಯು ತನ್ನ ಎಲ್ಲ ಉದ್ಯೋಗಿಗಳಿಗೆ ವೇತನವನ್ನು ನೀಡುವುದನ್ನು ಮುಂದುವರಿಸುತ್ತದೆ.

ಆಪಲ್ ಕಂಪೆನಿಯು ಈ ಘಟಕವನ್ನು “ಪರಿಶೀಲನೆಯಲ್ಲಿ” ಇರಿಸಿದೆ ಮತ್ತು ಘಟಕವು ಮತ್ತೆ ತೆರೆಯುವ ಮೊದಲು ಅದರ ಮಾನದಂಡಗಳನ್ನು ಪೂರೈಸಲಾಗಿದೆ ಎಂದು ಖಚಿತಪಡಿಸುತ್ತದೆ ಎಂದು ಕಂಪೆನಿ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಆ್ಯಪಲ್ ಸಂಸ್ಥೆಯ ಫ್ಲ್ಯಾಗ್​ಶಿಪ್​ ಮಾಡೆಲ್ ಐಫೋನ್ 13 ಇನ್ನುಮುಂದೆ ಭಾರತದಲ್ಲೇ ತಯಾರಾಗಲಿದೆ!

Published On - 12:54 pm, Fri, 31 December 21